ಕಾರವಾರ: ಸಮಬಲದ ಸ್ಥಾನಗಳಿಂದಾಗಿ ಬಿಜೆಪಿ-ಕಾಂಗ್ರೆಸ್ಗೆ ಪ್ರತಿಷ್ಠೆಯಾಗಿದ್ದ ಕಾರವಾರ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕೊನೆಗೂ ಮೈತ್ರಿ ಪಕ್ಷ ಜಯ ಗಳಿಸಿದೆ. ಬಿಜೆಪಿಯ ರವಿರಾಜ್ ಅಂಕೋಲೆಕರ್ ಅಧ್ಯಕ್ಷರಾಗಿ ಹಾಗೂ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಪ್ರೀತಿ ಮಧುಕರ್ ಜೋಶಿ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಕಾರವಾರ ನಗರಸಭೆಯ ಸ್ಥಾನಕ್ಕಾಗಿ ಎರಡು ಪಕ್ಷದವರು ತೀವ್ರ ಪೈಟೋಟಿ ನಡೆಸಿದ್ದರು. ಅದರಂತೆ ಬುಧವಾರ ಚುನಾವಣಾ ಪ್ರಕ್ರಿಯೆ ನಡೆದು ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ನೂತನ ಅಧ್ಯಕ್ಷ ರವಿರಾಜ್ ಅಂಕೋಲೇಕರ್ ಅವರು ಒಟ್ಟು 19 ಮತಗಳನ್ನು ಪಡೆದರು. ಕಾಂಗ್ರೆಸ್ನಿಂದ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಪ್ರಕಾಶ ಪಿ. ನಾಯ್ಕ 14 ಮತಗಳನ್ನು ಪಡೆದು ಸೋಲು ಅನುಭವಿಸಿದರು.
ಅದೇ ರೀತಿ ಜೆಡಿಎಸ್ ಅಭ್ಯರ್ಥಿ ಪ್ರೀತಿ ಜೋಶಿ ಕೂಡ 19 ಮತಗಳನ್ನು ಪಡೆದು ಕಾಂಗ್ರೆಸ್‌ನ ಸ್ನೇಹಲ್ ಹರಿಕಂತ್ರ ವಿರುದ್ಧ ಜಯ ಗಳಿಸಿದರು. ಬಿಜೆಪಿಯ ಗೆಲುವಿಗಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಎಂಎಲ್ಸಿ ಗಣಪತಿ ಉಳ್ವೇಕರ್ ಸೇರಿದಂತೆ ಒಟ್ಟು ಮೂವರು ಜೆಡಿಎಸ್, ಪಕ್ಷೇತರ ಮೂವರು ಸದಸ್ಯರು ಬಿಜೆಪಿ ಪರ ಮತ ಚಲಾಯಿಸಿದರು.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಳೆದ ಅವಧಿಯಲ್ಲಿ ಬಿಜೆಪಿ ಬೆಂಬಲಿಸಿದ್ದ ಪ್ರಕಾಶ ಪಿ. ನಾಯ್ಕ ಅವರು ಉಪಾಧ್ಯಕ್ಷರಾಗಿದ್ದರು. ಆದರೆ ಈ ಸಲ ಬಿಜೆಪಿಯಿಂದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ರವಿರಾಜ್ ಅಂಕೋಲೇಕರ್ ಅವರಿಗೆ ಅಧ್ಯಕ್ಷ ಸ್ಥಾನ ಬಿಜೆಪಿಯಿಂದ ನಿಗದಿಯಾಗಿದ್ದರಿಂದ ಪ್ರಕಾಶ ಪಿ. ನಾಯ್ಕ ಈ ಸಲ ಕಾಂಗ್ರೆಸ್ ಬೆಂಬಲಿಸಿದ್ದರು. ಇದರಿಂದ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬದಿಗಿಟ್ಟು ಪ್ರಕಾಶ ಪಿ. ನಾಯ್ಕ ಅವರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದರು.
ಪೊಲೀಸರೊಂದಿಗೆ ಮಾತಿನ ಚಕಮಕಿ: ಮತ ಚಲಾಯಿಸಲು ಶಿರಸಿಯಿಂದ ಕಾರವಾರ ನಗರಸಭೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಆಗಮಿಸಿದ್ದರು. ಪೊಲೀಸರು, ನಗರಸಭೆ ಸಿಬ್ಬಂದಿಗಳು ಮುಖ್ಯ ಗೇಟ್ ತೆರೆಯದೇ ಪಕ್ಕದಲ್ಲಿದ್ದ ಚಿಕ್ಕ ಗೇಟಿನಿಂದ ಸಂಸದರು ಸೇರಿದಂತೆ ಎಲ್ಲರನ್ನು ಒಳಗಡೆ ಬಿಡಲಾಗಿತ್ತು. ಬಳಿಕ ಶಾಸಕ ಸತೀಶ್ ಸೈಲ್ ಅವರು ಮತ ಚಲಾಯಿಸಲು ಆಗಮಿಸಿದ್ದ ವೇಳೆ ಸಣ್ಣ ಗೇಟ್ ಮೂಲಕ ತೆರಳಲು ಆಗುವುದಿಲ್ಲ ಎಂದರು. ಬಳಿಕ ಕೆಲ ಹೊತ್ತು ಪೊಲೀಸರೊಂದಿಗೆ ವಾಗ್ವಾದ ನಡೆದು ಕೊನೆಗೆ ನಗರಸಭೆ ಮುಖ್ಯ ಗೇಟ್ ತೆರೆದು ಒಳಗೆ ಪ್ರವೇಶ ಮಾಡಲು ಅವಕಾಶ ನೀಡಿದ್ದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು "ಸಂಸದರು ಆಗಮಿಸಿದ್ದ ಸಂದರ್ಭದಲ್ಲಿ ಮುಖ್ಯ ಗೇಟ್ ತೆರೆಯದೆ" ಇದ್ದುದಕ್ಕೆ ಪೊಲೀಸರು, ನಗರಸಭೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಬಲಿತರು ನಮ್ಮದೇ ಸರ್ಕಾರ ನಮ್ಮದೇ ರೂಲ್ಸ್ ಎಂದು ಹೇಳಿದರು. ಇದಕ್ಕೆ ಬಿಜೆಪಿ ಬೆಂಬಲಿತರು ಆಕ್ರೋಶ ವ್ಯಕ್ತಪಡಿಸಿದರು. ಈ ಅವಧಿಯಲ್ಲಿ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, "ಕಾರವಾರ ನಗರಸಭೆ ಬಿಜೆಪಿ ತೆಕ್ಕೆಗೆ ಬಂದಿದೆ. ಜಿಲ್ಲೆಯಲ್ಲಿ ಕಾರವಾರ ನಗರಸಭೆ ಪ್ರತಿಷ್ಠಿತ ನಗರ ಸ್ಥಳೀಯರ ಸಂಸ್ಥೆ. ನಾವೆಲ್ಲ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಅಭಿವೃದ್ಧಿ ಕಾರ್ಯಗಳು ಹಿಂದಿನಿಂದಲೂ ನಡೆಯುತ್ತಿವೆ. ಇಲ್ಲಿನ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸುತ್ತೇವೆ. ಸಂಸದನಾಗಿ ನಗರಸಭೆ ಅಭಿವೃದ್ಧಿ ಬೆಂಬಲಿಸುತ್ತೇವೆ. ರಾಜ್ಯ ಸರ್ಕಾರ ನಗರಸಭೆಗೆ ಹೆಚ್ಚಿನ ಅನುದಾನ ನೀಡಬೇಕು" ಎಂದು ಒತ್ತಾಯ ಮಾಡಿದರು.
ಹಣದ ಆಮಿಷ ಒಡ್ಡಿದ್ದರು: ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, "ಶಾಸಕ ಸತೀಶ್ ಸೈಲ್ ಅವರು ಸಮ್ಮನೆ ಮನಬಂದ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಬಿಜೆಪಿ ಸದಸ್ಯರಿಗೆ 20 ಲಕ್ಷದ ಮನೆ ನೀಡುತ್ತೇನೆ. ಏನೆನೋ ಸೌಲಭ್ಯ ಕಲ್ಪಿಸುತ್ತೇನೆ ಎಂದು ಹೇಳಿದ್ದಾರೆ. ಇದು ಸರಿಯಲ್ಲ. ಈಗಲೂ ಸಹ ನಮ್ಮ ಸದಸ್ಯರಿಗೆ ಲಕ್ಷಾಂತರ ರೂ. ನೀಡುತ್ತೇವೆ ಎಂದು ಆಮಿಷವನ್ನು ನೀಡಿದ್ದಾರೆ ಎಂದು ಆರೋಪಿಸಿದರು. ಪ್ರಾಮಾಣಿಕವಾಗಿ ಬಿಜೆಪಿ-ಜೆಡಿಎಸ್ ಗೆಲುವು ಸಾಧಿಸಿದೆ" ಎಂದರು.
ಗೇಟ್ ಹಾಕಲು ಕಳ್ಳತನಕ್ಕೆ ಬಂದಿಲ್ಲ: ಶಾಸಕ ಸತೀಶ್ ಸೈಲ್ ಪ್ರತಿಕ್ರಿಯಿಸಿ, "ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಕೆಲವು ಜೆಡಿಎಸ್ ಬಾಂಧವರು ನಿಮ್ಮ ಜೊತೆಗೆ ಇದ್ದೇವೆ ಎಂದು ಹೇಳಿದ್ದರು. ಬೆಳಗ್ಗೆ ಕೆಲವರು ಬದಲಾಗಿದ್ದಾರೆ. ರೇಟ್ ಹೆಚ್ಚು ಕಮ್ಮಿ ಆಗಿದೆ. ಅಂಕೋಲಾದಲ್ಲಿ 30 ಇದ್ದರೆ ಕಾರವಾರದಲ್ಲಿ 40 ಆಗಿದೆ. ಗೇಟ್ ಹಾಕಿದ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿ ಗೇಟ್ ಹಾಕಲು ಯಾರೂ ಹೇಳಿಲ್ಲ. ಗೇಟ್ ಹಾಕಲು ಇಲ್ಲಿ ಯಾರೂ ಕಳ್ಳತನಕ್ಕೆ ಬಂದಿಲ್ಲ. ಎಲ್ಲರೂ ಸೇರಿ ಕಾರವಾರದ ಸಮಗ್ರ ಅಭಿವೃದ್ಧಿ ಕೆಲಸ ಮಾಡಲಿ ಎಂದರು.
ಇದನ್ನೂ ಓದಿ: ಸಾಗರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಹೈಕೋರ್ಟ್ ತಡೆ: ಯಾಕೆ ಗೊತ್ತಾ? - Sagara Municipal Council