ಮಂಗಳೂರು: ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಏಪ್ರಿಲ್ 22ರಿಂದ 30ರವರೆಗೆ ಬ್ರಹ್ಮಕುಂಭಾಭಿಷೇಕ ಮತ್ತು ನಾಗಮಂಡಲ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ ಕುಟುಂಬ ಸಮೇತರಾಗಿ ಜರುಗುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಏ.25ರಂದು ಸಂಜೆ ದೇವರಿಗೆ ಬೆಳ್ಳಿಯ ಕಲಶವನ್ನು ಶಿಲ್ಪಾ ಶೆಟ್ಟಿ ಸಮರ್ಪಿಸಲಿದ್ದಾರೆ.
ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೊಕ್ತೇಸರ ಮಧುಕರ ಅಮೀನ್ ಮಾತನಾಡಿ, ನಾಗಮಂಡಲ ಧಾರ್ಮಿಕ ಕಾರ್ಯಕ್ರಮ ಸಂಬಂಧ ಶಿಲ್ಪಾ ಶೆಟ್ಟಿ ಅವರನ್ನು ಸಂಪರ್ಕಿಸಲಾಗಿತ್ತು. ಅವರು ಬ್ರಹ್ಮಕುಂಭಾಭಿಷೇಕಕ್ಕೆ ಬೇಕಾದ ಬೆಳ್ಳಿಯ ಕಲಶವನ್ನು ನೀಡಲು ಒಪ್ಪಿದ್ದಾರೆ. ಏಪ್ರಿಲ್ 25, 26, 27ರ ಮೂರು ದಿನಗಳ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿ, ತಂಗಿ ಶಮಿತಾ ಶೆಟ್ಟಿ, ತಾಯಿ ಸುನಂದ ಶೆಟ್ಟಿ, ಪತಿ ರಾಜ್ ಕುಂದ್ರಾ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ದೇವರಿಗೆ ಸ್ವರ್ಣ ಪಲ್ಲಕ್ಕಿಯನ್ನು ಸಮರ್ಪಣೆ ಮಾಡಲು ನಿರ್ಧಾರ ಮಾಡಿದ್ದೆವು. ಅದಕ್ಕೆ ಬೇಕಾದ 1 ಕೆ.ಜಿ. ಬಂಗಾರವನ್ನು ದೇವಸ್ಥಾನದ ಭಂಡಾರದಿಂದ ಪಡೆಯಲು ಸರ್ಕಾರದ ಅನುಮತಿಗೆ ಪತ್ರ ಬರೆದಿದ್ದೆವು. ಆದರೆ, ನೀತಿ ಸಂಹಿತೆ ಜಾರಿಯಾದ ಕಾರಣ ಅನುಮತಿ ಸಿಕ್ಕಿಲ್ಲ. ಆಗ ಶಿಬರೂರು ಕ್ಷೇತ್ರಕ್ಕೆ ಸಂಬಂಧಿಸಿದ ಗ್ರಾಮಸ್ಥರು ಸೇವೆಯ ರೂಪದಲ್ಲಿ ಬಂಗಾರ ಸಮರ್ಪಿಸಿದ್ದಾರೆ. ಇದರಿಂದ ಸ್ವರ್ಣ ಪಲ್ಲಕಿಗೆ ಬೇಕಾದ ಎರಡು ಕೆ.ಜಿ. ಬಂಗಾರ ಒಟ್ಟುಗೂಡಿದ್ದು, ಅದರ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಶಿಬರೂರಿನ ಈ ದೇಗುಲದ ಬಾವಿಯಲ್ಲಿ ಸಿಗುವುದು ಮಾಮೂಲಿ ನೀರಲ್ಲ! ವಿಶೇಷತೆ ಗೊತ್ತೇ? - Holy Water