ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಇಂದು ಬಿಜೆಪಿಗೆ ವಾಪಸಾದರು. ಈ ಮೂಲಕ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷವನ್ನು ಬಿಜೆಪಿ ಜೊತೆ ವಿಲೀನಗೊಳಿಸಿದರು. ಮಲ್ಲೇಶ್ವರದಲ್ಲಿರುವ ಜಗನ್ನಾಥ ಭವನದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ರೆಡ್ಡಿ, ಪತ್ನಿ ಅರುಣಾ ಲಕ್ಷ್ಮೀ ಹಾಗೂ ಬೆಂಬಲಿಗರು ಕಮಲ ಪಕ್ಷ ಸೇರಿದರು. ಜನಾರ್ದನ ರೆಡ್ಡಿ ಅವರಿಗೆ ಪಕ್ಷದ ಶಾಲು ಹಾಕಿ, ಧ್ವಜ ನೀಡಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಸ್ವಾಗತಿಸಿದರು.
ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಇದು ಬಹಳ ಸಂತೋಷದ ಸಂಗತಿ. ಗಾಲಿ ಜನಾರ್ದನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿ, ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಇಂದು ಜನಾರ್ದನ ರೆಡ್ಡಿ ಅವರು ಪತ್ನಿ ಅರುಣಾ ಲಕ್ಷ್ಮೀ ಮತ್ತು ಮಾಜಿ ಸಚಿವ ಟಿ ಜಾಮ್ ಅವರ ಪುತ್ರ ಥಾಮಸ್ ಜಾನ್ ಅವರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ರೆಡ್ಡಿ ಅವರು ತಾವೇ ಕಟ್ಟಿದ ಪಕ್ಷವನ್ನ ವಿಸರ್ಜನೆ ಮಾಡಿ, ಬಿಜೆಪಿ ಜೊತೆ ವಿಲೀನ ಮಾಡಿದ್ದಾರೆ. ಇದರಿಂದ ಬಿಜೆಪಿಗೆ ಶಕ್ತಿ ಬಂದಂತಾಗಿದೆ ಎಂದರು.
ಬಳಿಕ ಮಾತನಾಡಿದ ರೆಡ್ಡಿ, "13 ವರ್ಷಗಳ ಬಳಿಕ ಬಿಜೆಪಿ ಕಚೇರಿಗೆ ಬಂದಿದ್ದೇನೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ವಿಲೀನ ಮಾಡುವ ಮೂಲಕ ಬಿಜೆಪಿ ಸೇರಿದ್ದೇನೆ. ಬಿಜೆಪಿ ಜೊತೆ ಬಂದು ಕೆಲಸ ಮಾಡಿ ಎಂದು ಅಮಿತ್ ಶಾ ಹೇಳಿದ್ರು. ಹೀಗಾಗಿ ಇಲ್ಲಿಗೆ ಬಂದಿದ್ದೇನೆ. ನನ್ನ ಮನೆಗೆ ವಾಪಸ್ ಬಂದಿದ್ದೇನೆ. ನನ್ನ ರಕ್ತದ ಕಣ ಕಣಕಣಗಳಲ್ಲಿ ಬಿಜೆಪಿ ಇತ್ತು. ಅನಿವಾರ್ಯ ಕಾರಣಗಳಿಂದ ಹೊರಗೆ ಹೋಗಿದ್ದೆ" ಎಂದು ಪಕ್ಷ ಸೇರ್ಪಡೆ ಬಳಿಕ ತಿಳಿಸಿದರು.
"ಯಡಿಯೂರಪ್ಪನವರ ಜೊತೆ ಹೆಜ್ಜೆಯಲ್ಲಿ ಹೆಜ್ಜೆ ಹಾಕಿ ಪಾರ್ಟಿ ಕಟ್ಟಿದ್ದೇವೆ. ಇಂದು ಅವರ ಮಗನ ಜೊತೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಯಾವುದೇ ಷರತ್ತು ಹಾಕದೇ ಪಕ್ಷಕ್ಕೆ ಬಂದಿದ್ದೇನೆ, ಯಾವ ಫಲಾಪೇಕ್ಷೆಯೂ ಇಲ್ಲ. ಪ್ರಾಮಾಣಿಕವಾಗಿ ಕೊಟ್ಟ ಜವಾಬ್ದಾರಿ ನಿರ್ವಹಿಸುವೆ. ಅತೀ ಚಿಕ್ಕ ವಯಸ್ಸಿನಲ್ಲಿ ಯಡಿಯೂರಪ್ಪ ನನಗೆ ಎಲ್ಲ ಜವಾಬ್ದಾರಿ ನೀಡಿದ್ದರು. ಅನೇಕ ಏಳುಬೀಳು ನೋಡಿದ್ದೇನೆ" ಎಂದರು.
ರೆಡ್ಡಿ ಸೇರ್ಪಡೆಯಿಂದ ಬಾಹುಬಲಿಯಂತೆ ಶಕ್ತಿ ತಂದಿದೆ: ಮಾಜಿ ಸಚಿವ ಹಾಗೂ ಬಳ್ಳಾರಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಮಾತನಾಡಿ, "ಗಾಲಿ ಜನಾರ್ದನ ರೆಡ್ಡಿ ಅವರಿಗೆ ಬಿಜೆಪಿ ತವರು ಮನೆ ಇದ್ದಂತೆ. ಕಲ್ಯಾಣ ಕರ್ನಾಟಕದಲ್ಲಿ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬಂದಿದೆ. ಅಗ್ನಿ ಪರೀಕ್ಷೆಯಲ್ಲಿ ಗೆದ್ದು ವಾಪಸ್ ಬಂದಿದ್ದಾರೆ. ಅವರು ಬೇರೆ ಪಕ್ಷ ಕಟ್ಟಿದ್ದಕ್ಕೆ ನಮಗೆ ಬೇಸರ ಇತ್ತು. ಆದರೆ ಜನರ ಪ್ರೀತಿ ಗಳಿಸಿ ತವರಿಗೆ ವಾಪಸ್ ಬಂದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಎಲ್ಲಾ 28 ಸ್ಥಾನ ಗೆಲ್ಲುತ್ತೇವೆ, ಗೆಲ್ಲಬೇಕಾದರೆ ಎಲ್ಲ ಕಡೆ ಶಕ್ತಿ ತುಂಬಬೇಕು. ಕಾರ್ಯಕರ್ತರಿಗೂ ಸಂತೋಷವಾಗಿದೆ" ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶ್ರೀರಾಮುಲು, ಸಿ.ಟಿ.ರವಿ, ಸಂಸದ ಪಿ.ಸಿ.ಮೋಹನ್, ಸಂಸದ ದೇವೇಂದ್ರಪ್ಪ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. ಪಕ್ಷ ಸೇರ್ಪಡೆಗೂ ಮುನ್ನ ಜನಾರ್ದನ ರೆಡ್ಡಿ ಮತ್ತು ಅವರ ಕುಟುಂಬಸ್ಥರು ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.