ದಾವಣಗೆರೆ: ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆ ಚುರುಕಿನಿಂದ ಸಾಗುತ್ತಿದೆ. ಕೆಲವೇ ಕೆಲವು ಗ್ರಾಮಗಳಲ್ಲಿ ಮಾತ್ರ ಈ ಯೋಜನೆ ಆರಂಭಗೊಳ್ಳಬೇಕಾಗಿದೆ. ಉಳಿದ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಲ್ಲಿ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ.
2024ರ ವೇಳೆಗೆ ಗಾಮೀಣ ಭಾಗದಲ್ಲಿ ಪ್ರತಿಯೊಂದು ಮನೆಗೆ ನಲ್ಲಿ ಮೂಲಕ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರು ಒದಗಿಸುವುದು ಸರ್ಕಾರದ ಗುರಿಯಾಗಿದೆ. ಆದರೆ, ಜಿಲ್ಲೆಯಲ್ಲಿ ಈ ಯೋಜನೆ ಮುಂದಿನ ವರ್ಷ ಮಾರ್ಚ್ ತಿಂಗಳಿಗೆ ಪೂರ್ಣಗೊಳ್ಳಲಿದೆ ಎಂದು ಜಿಪಂ ಸಿಇಒ ತಿಳಿಸಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಇಲ್ಲಿವರೆಗೂ ಒಟ್ಟು 870 ಕಡೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
870 ಕಾಮಗಾರಿಗಳ ಪೈಕಿ 588 ಕಾಮಗಾರಿಗಳನ್ನು ಮುಗಿಸಿ ನೀರನ್ನು ಪೂರೈಸಲಾಗುತ್ತಿದೆ. 243 ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿದ್ದು, 27 ಕಾಮಗಾರಿಗಳನ್ನು ಹೊಸದಾಗಿ ಆರಂಭಿಸಲು ಕಾರ್ಯಾದೇಶ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರನ್ನು ನಲ್ಲಿ ಮೂಲಕ ಸರಬರಾಜು ಮಾಡುವ ಉದ್ದೇಶ ಇಟ್ಟುಕೊಂಡು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. 500 ಜನವಸತಿ ಇರುವ ಗ್ರಾಮಗಳಲ್ಲಿ ಜಲಜೀವನ ಮಿಷನ್ ಯೋಜನೆ ಮೂಲಕ ನಲ್ಲಿಗಳಲ್ಲಿ ನೀರು ಹರಿಸಲು ಅನುಮೋದನೆ ಸಲ್ಲಿಸುವ ಕಾರ್ಯ ಪ್ರಗತಿಯಲ್ಲಿದೆ. ಇನ್ನು ಕೆಲ ಗ್ರಾಮಗಳಿಗೆ ಬೋರ್ವೆಲ್ ಮೂಲಕ ನೀರು ಕೊಡಲಾಗುತ್ತಿದೆ.
ಮುಂದಿನ ವರ್ಷ ಮುಕ್ತಾಯ: ದಾವಣಗೆರೆ ಜಿಲ್ಲೆಯಲ್ಲಿ ಈಗಾಗಲೇ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಈ ಯೋಜನೆ ಇಡೀ ದಾವಣಗೆರೆ ಜಿಲ್ಲೆಯಲ್ಲಿ 2025 ಮಾರ್ಚ್ ತಿಂಗಳಿಗೆ ಮುಗಿಯಲಿದ್ದು, ಪ್ರತಿಯೊಂದು ಗ್ರಾಮೀಣ ಭಾಗದಲ್ಲಿ ನಳಗಳ ಮೂಲಕ ನೀರು ಸಿಗಲಿದೆ. "ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಅಡಿ ಒಟ್ಟು ನಾಲ್ಕು ಹಂತದಲ್ಲಿ 870 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಪೈಕಿ 588 ಕಾಮಗಾರಿಗಳು ಮುಕ್ತಾಯಗೊಂಡಿದ್ದು, 243 ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. ಇತ್ತೀಚೆಗೆ ಚುನಾವಣೆ ಮುನ್ನ 27 ಕಾಮಗಾರಿಗಳು ಆರಂಭಿಸಲು ಕಾರ್ಯಾದೇಶ ನೀಡಲಾಗಿದೆ. ಪ್ರಗತಿಯಲ್ಲಿರುವ ಒಟ್ಟು 243 ಜಲಜೀವನ ಮಿಷನ್ ಕಾಮಗಾರಿಗಳು ಮುಂದಿನ ಮೂರು ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ಹೊಸದಾಗಿ ಆರಂಭಿಸುವ ಒಟ್ಟು 27 ಕಾಮಗಾರಿಗಳು ಮುಂದಿನ ವರ್ಷ 2025 ಮಾರ್ಚ್ಗೆ ಮುಕ್ತಾಯಗೊಳ್ಳಲಿವೆ ಎಂದು ಜಿಪಂ ಸಿಇಒ ಸುರೇಶ್ ಬಿ ಇಟ್ನಾಳ್ ಮಾಹಿತಿ ನೀಡಿದರು.
ಇದನ್ನೂ ಓದಿ: ಹೊಸ ಜಾಹೀರಾತು ನೀತಿ, ಒಂದು ವಾರದೊಳಗೆ ಸಾರ್ವಜನಿಕ ಚರ್ಚೆಗೆ ಅವಕಾಶ: ಡಿಸಿಎಂ - NEW ADVERTISEMENT POLICY