ಬೆಂಗಳೂರು: ನಟ ದರ್ಶನ್‌ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಏಳು ಜೈಲಾಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಮುಂದೆ ಹೀಗಾಗದಂತೆ ಕ್ರಮ ಜರುಗಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರದ ಬಳಿ ಮಾತನಾಡಿದ ಸಚಿವರು, ಸರ್ಕಾರಕ್ಕೆ ಯಾವುದೇ ಮುಜುಗರ ಆಗಲ್ಲ. ನಾವು ತಕ್ಷಣ ಕ್ರಮ ಕೈಗೊಂಡಿದ್ದೇವೆ. ಸಿಸಿಟಿವಿ ಇದ್ದರೂ ಹೇಗೆ ಸಿಗರೇಟ್ ಹೋಯ್ತು ಎಂಬುದನ್ನು ನೋಡುತ್ತೇವೆ. ಅಧಿಕಾರಿಗಳ ಕಣ್ತಪ್ಪಿಸಿ ಹೇಗೆ ಹೋಯ್ತು ಎಂಬುದನ್ನು ನೋಡಬೇಕು. ಅಧಿಕಾರಿಗಳ ಹೊಣೆಗಾರಿಕೆ ಇದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ನನಗೆ ಯಾವ ಸಚಿವ, ಶಾಸಕರ ಒತ್ತಡ ಇಲ್ಲ. ಯಾರ ಒತ್ತಡಕ್ಕೂ ನಾನು ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನನಗೆ ನಿನ್ನೆ ಇಂತಹ ಸುದ್ದಿ ಬಂತು. ಫೋಟೋ ವೈರಲ್ ಆಗುತ್ತಿತ್ತು. ತಕ್ಷಣ ಡಿಜಿ ಅವರ ಜೊತೆ ಮಾತನಾಡಿದ್ದೇನೆ. ಅಧಿಕಾರಿಗಳನ್ನು ಅಲ್ಲಿಗೆ ಕಳಿಸಿಕೊಟ್ಟಿದ್ದೆವು. ಏಳು ಜನ ಜೈಲು ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ಶರವಣ, ಶರಣಬಸವ, ಪ್ರಭು.ಎಸ್, ಎಲ್.ಎಸ್.ತಿಪ್ಪೇಸ್ವಾಮಿ, ಶ್ರೀಕಾಂತ್ ತಳವಾರ್, ಹೆಡ್ ವಾರ್ಡರ್ನ್ ವೆಂಕಪ್ಪ, ಸಂತೋಷ್ ಕುಮಾರ್, ನರಸಪ್ಪ ಎಂಬವರನ್ನು ಅಮಾನತು ಮಾಡಿದ್ದೇವೆ. ಘಟನೆ ಬಗ್ಗೆ ವರದಿ ಕೇಳಿದ್ದೇನೆ ಎಂದರು.
ಪರಪ್ಪನ ಅಗ್ರಹಾರಕ್ಕೆ ಡಿಜಿ ಭೇಟಿ: ಡಿಜಿಯವರು ಪರಪ್ಪನ ಅಗ್ರಹಾರಕ್ಕೆ ಭೇಟಿ ಕೊಟ್ಟಿದ್ದಾರೆ. ಇಂತಹ ಘಟನೆ ನಡೆಯಬಾರದು. ಯಾರು ಅವಕಾಶ ಕೊಟ್ಟಿದ್ದಾರೆ, ಅವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಹಿರಿಯ ಅಧಿಕಾರಿಗಳನ್ನು ಅಲ್ಲಿಂದ ಶಿಫ್ಟ್ ಮಾಡ್ತೇವೆ. ನಿರ್ದಾಕ್ಷಿಣ್ಯವಾಗಿ ನಾವು ಕ್ರಮ ಕೈಗೊಳ್ತೇವೆ. ರೇಡ್ ಮುನ್ನ ಸಿಸಿಟಿವಿ ಫೂಟೇಜ್ ಚೆಕ್ ಮಾಡುತ್ತಿದ್ದೇವೆ. ಮೂರು ದಿನಗಳ ಮುಂಚೆ ಸಿಸಿಟಿವಿ ಪರಿಶೀಲನೆ ಮಾಡಿದ್ದೇವೆ. ಯಾವುದೇ ರೀತಿಯಲ್ಲಿ ಕೇಸ್ ದುರ್ಬಲ ಮಾಡುವುದಿಲ್ಲ. ಕಾನೂನು ಪ್ರಕಾರವೇ ಕ್ರಮ ತೆಗೆದುಕೊಳ್ತೇವೆ. ಯಾವುದನ್ನೂ ಸುಲಭವಾಗಿ ಬಿಡಲ್ಲ ಎಂದು ತಿಳಿಸಿದರು.
ಬೇರೆ ಹಿರಿಯ ಅಧಿಕಾರಿಗಳನ್ನು ಅಲ್ಲಿಗೆ ಹಾಕುತ್ತೇವೆ. ಆಂತರಿಕ ವರದಿ ಬಂದ ಮೇಲೆ ಅವರ ಮೇಲೆ ಕ್ರಮ ಜರುಗಿಸುತ್ತೇವೆ. ಬೇರೇ ಎಲ್ಲೇ ಆಗಲಿ ನಡೆಯಬಾರದು. ಯಾರೇ ಭಾಗಿಯಾಗಿರಲಿ ಕ್ರಮ ಜರುಗಿಸ್ತೇವೆ. ತನಿಖೆ ಪ್ರಾರಂಭ ಮಾಡಿದ್ದೇವೆ. ಯಾವುದೇ ಮುಲಾಜನ್ನೂ ನಾವು ಇಟ್ಟು ಕೊಳ್ಳುವುದಿಲ್ಲ. ಚಿಕನ್ ಬಿರಿಯಾನಿ ಕೊಟ್ಟಾಗ ನೀವು ಕೇಳಿದ್ರಿ. ಆಗ ಇಲ್ಲ ಅಂತ ಹೇಳಿದ್ದೆ ನಿಜ. ಆದರೆ, ಈಗಿನದನ್ನು ನಾನು ಸಮರ್ಥನೆ ಮಾಡಲ್ಲ. ಅಲ್ಲಿ ಯಾರು ಫೋಟೋ ತೆಗೆದ್ರು ಚೆಕ್ ಮಾಡ್ತೇವೆ. ಅಲ್ಲಿ ಮೊಬೈಲ್ ಹೇಗೆ ಬಂತು ಚೆಕ್ ಮಾಡ್ತೇವೆ ಎಂದು ಸ್ಪಷ್ಟಪಡಿಸಿದರು.
ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ. ಯಾವ ಮುಲಾಜಿಲ್ಲದೇ ನಾವು ಕ್ರಮ ತೆಗೆದುಕೊಳ್ತೇವೆ. ಫೋನ್ ಮಾಡಿರುವ ಬಗ್ಗೆಯೂ ತನಿಖೆ ಮಾಡ್ತೇವೆ. ಆತಿಥ್ಯ ಸಿಗದ ಕಡೆ ಅವರನ್ನು ಹಾಕುವ ಬಗ್ಗೆ ನೋಡೋಣ. ಮರೆಮಾಚುವ, ಸುಳ್ಳು ಹೇಳುವ ಪ್ರಮೇಯ ಇಲ್ಲ. ಹಿರಿಯ ಅಧಿಕಾರಿಗಳು ತಪ್ಪಿದ್ರೂ ಕ್ರಮ ಕೈಗೊಳ್ತೇವೆ. ಅವರನ್ನೂ ಮುಲಾಜಿಲ್ಲದೇ ಸಸ್ಪೆಂಡ್ ಮಾಡುತ್ತೇವೆ ಎಂದರು.
ದರ್ಶನ್‌ಗೆ ಜೈಲಿನಲ್ಲಿ ವಿಶೇಷ ಆತಿಥ್ಯದ ಕುರಿತು ಪ್ರಾಥಮಿಕ ವರದಿ ದೊರೆತಿದೆ - ಕಾರಾಗೃಹ ಇಲಾಖೆಯ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ದರ್ಶನ್‌ಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಲಾಗುತ್ತಿದೆ ಎಂಬುದರ ಕುರಿತು ಫೋಟೋ ವೈರಲ್ ಆದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಫೋಟೋ ವೈರಲ್ ಆದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಮಾಲಿನಿ ಕೃಷ್ಣಮೂರ್ತಿ ''ಈಗಾಗಲೇ ಪ್ರಾಥಮಿಕ ವರದಿ ದೊರೆತಿದೆ. ಪರಪ್ಪನ ಆಗ್ರಹಾರ ಕಾರಾಗೃಹಕ್ಕೆ ನಾನು ಭೇಟಿ ನೀಡುತ್ತಿದ್ದೇನೆ. ಹೆಚ್ಚಿನ ವಿಚಾರಗಳ ಕುರಿತು ಅಲ್ಲಿಯೇ ಮಾತನಾಡಲಿದ್ದೇನೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಸೆರೆಮನೆಯೇ ಅಥವಾ ಅರಮನೆಯೇ?: ಎನ್.ರವಿಕುಮಾರ್ ಪ್ರಶ್ನೆ - Parappan Agrahara
ಇದನ್ನೂ ಓದಿ: ಜೈಲಿನಲ್ಲಿ ದರ್ಶನ್ ಭೇಟಿಯಾಗಿ ಧೈರ್ಯ ತುಂಬಿದ ನಟಿ ರಚಿತಾ ರಾಮ್ - Rachita Ram