ಬೆಳಗಾವಿ: ಬೆಳಗಾವಿಯಲ್ಲಿ ಗಡಿ ವಿವಾದ, ಭಾಷೆ ವಿಚಾರ ಮುಂದಿಟ್ಟುಕೊಂಡು ಪದೇ ಪದೇ ಕ್ಯಾತೆ ತೆಗೆಯುವ ಎಂಇಎಸ್ ಪುಂಡರಿಗೆ ಪಾಲಿಕೆ ಅಧಿಕಾರಿಗಳು ಕೊನೆಗೂ ಶಾಕ್ ನೀಡಿದ್ದಾರೆ. ಕರುನಾಡು ವಿಜಯಸೇನೆ ಸಂಘಟನೆ ಕಾರ್ಯಕರ್ತರ ಹೋರಾಟಕ್ಕೆ ಮಣಿದ ಅಧಿಕಾರಿಗಳು, ಬೆಳಗಾವಿಯ ಅನಗೋಳ ಗ್ರಾಮದಲ್ಲಿದ್ದ 'ಜೈ ಮಹಾರಾಷ್ಟ್ರ ಚೌಕ್' ನಾಮಫಲಕವನ್ನು ತೆರವುಗೊಳಿಸಿದ್ದಾರೆ.
ನಿನ್ನೆ (ಗುರುವಾರ) ಬೆಳಗ್ಗೆಯಿಂದ ಕರುನಾಡು ವಿಜಯಸೇನೆ ಸಂಘಟನೆ ಕಾರ್ಯಕರ್ತರು ಆ ನಾಮಫಲಕ ತೆರವುಗೊಳಿಸುವಂತೆ ಆಗ್ರಹಿಸಿ ಮಹಾನಗರ ಪಾಲಿಕೆ ಕಚೇರಿ ಮುಂದೆ ಧರಣಿ ನಡೆಸಿ, ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. 'ಜೈ ಮಹಾರಾಷ್ಟ್ರ ಚೌಕ್' ಫಲಕ ತೆರವುಗೊಳಿಸುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಹೋರಾಟಗಾರರು ಪಟ್ಟು ಹಿಡಿದಿದ್ದರು.
ಪಾಲಿಕೆ ಆಯುಕ್ತರ ಸೂಚನೆ ಮೇರೆಗೆ ನಾಮಫಲಕ ತೆರವು: ಕರುನಾಡು ವಿಜಯಸೇನೆ ಸಂಘಟನೆ ಕಾರ್ಯಕರ್ತರ ಹೋರಾಟಕ್ಕೆ ಮಣಿದ ಪಾಲಿಕೆ ಅಧಿಕಾರಿಗಳು ನಿನ್ನೆ (ಗುರುವಾರ) ರಾತ್ರಿ ಆ ನಾಮಫಲಕವನ್ನು ತೆರವುಗೊಳಿಸಿದ್ದಾರೆ. ಮತ್ತೊಂದೆಡೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅನಗೋಳ ಚಲೋ ಕಾರ್ಯಕ್ರಮ ಮಾಡುವ ಎಚ್ಚರಿಕೆ ನೀಡಿದ್ದರು. ಪರಿಸ್ಥಿತಿ ಗಂಭೀರತೆಯನ್ನು ಅರಿತ ಮಹಾನಗರ ಪಾಲಿಕೆ ಆಯುಕ್ತ ಲೋಕೇಶ್ ಅವರ ಸೂಚನೆ ಮೇರೆಗೆ ನಾಮಫಲಕವನ್ನು ತೆರವುಗೊಳಿಸಲಾಗಿದೆ.
2014ರಲ್ಲಿ ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದಲ್ಲಿ ಎಂಇಎಸ್ ಪುಂಡರು ಮಹಾರಾಷ್ಟ್ರ ರಾಜ್ಯ ಎಂದು ನಾಮಫಲಕ ಹಾಕಿದ್ದರು. ಭೀಮಪ್ಪ ಗಡಾದ ಅದನ್ನು ತೆರವು ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಸಾರ್ವಜನಿಕರ ಹಿತ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ತೆರವು ಮಾಡಲು ಆದೇಶ ನೀಡಿದ್ದರಿಂದ, ಆಗ ಕೂಡ ಆ ಫಲಕವನ್ನು ತೆರವುಗೊಳಿಸಲಾಗಿತ್ತು. ಈಗ ಕನ್ನಡ ಹೋರಾಟಗಾರರ ಎಚ್ಚರಿಕೆಯಿಂದಾಗಿ ಪಾಲಿಕೆ ಅಧಿಕಾರಿಗಳು 'ಜೈ ಮಹಾರಾಷ್ಟ್ರ ಚೌಕ್' ಫಲಕ ತೆರವು ಮಾಡಿದ್ದಾರೆ.
ಇದನ್ನೂ ಓದಿ: ಜಾತಿಗಣತಿ ವರದಿ ಕುರಿತು ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆಗೆ ಸಿಎಂ ನಿರ್ಧಾರ