ಹುಬ್ಬಳ್ಳಿ: ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ನಮ್ಮ ದೇಶದ ಸಂಸ್ಕೃತಿ ಪರಂಪರೆಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಪಕ್ಷಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದರು.
ಸಮುದ್ರದಾಳದಲ್ಲಿ ಮೋದಿ ನವಿಲುಗರಿ ನೆಟ್ಟರೆ ಚಿಗುರುತ್ತಾ ಎಂಬ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಧರ್ಮಪೀಠಗಳು, ಧಾರ್ಮಿಕ ಕೇಂದ್ರಗಳನ್ನು ಸುಧಾರಣೆ ಮಾಡುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ. ದೇಶದ ಆರ್ಥಿಕ ಪ್ರಗತಿ, ಮೂಲಭೂತ ಸೌಕರ್ಯಗಳೊಂದಿಗೆ ಇಡೀ ದೇಶ ಆರಾಧಿಸುವ ಪವಿತ್ರ ಸ್ಥಳಗಳನ್ನು ಅಭಿವೃದ್ಧಿ ಮಾಡುತ್ತಿದ್ದಾರೆ. ಇದನ್ನು ಕಾಂಗ್ರೆಸ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ರೀತಿ ಟೀಕೆಗಳು ಮೋದಿ ಅವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಎಸ್.ಜೈಶಂಕರ್ ಕರ್ನಾಟಕದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸುದ್ದಿಗಳ ಕುರಿತು ಪ್ರತಿಕ್ರಿಯಿಸಿ, ಕರ್ನಾಟಕದಿಂದಲೇ ಸ್ಪರ್ಧಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಬೇರೆ ರಾಜ್ಯದಿಂದಲೂ ಸ್ಪರ್ಧಿಸಬಹುದು ಎಂದು ತಿಳಿಸಿದರು.
ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ವಿಚಾರವಾಗಿ ಮಾತನಾಡಿ, ಫಲಿತಾಂಶದ ನಂತರವೇ ಅದು ಗೊತ್ತಾಗುತ್ತದೆ. ಯಾರು ಅಡ್ಡ ಮತದಾನ ಮಾಡಿದ್ದಾರೆ ಅನ್ನೋದು ತಿಳಿಯುತ್ತೆದೆ. ಫಲಿತಾಂಶ ಬರುವವರೆಗೂ ಏನೂ ಹೇಳೋಕೆ ಆಗಲ್ಲ ಎಂದರು.
ಇನ್ನು, ಕಳಸಾ-ಬಂಡೂರಿ ಯೋಜನೆ ವಿಳಂಬದ ಕುರಿತ ಪ್ರಶ್ನೆಗೆ, ಈ ಹಿಂದೆ ಮನೋಹರ್ ಪರಿಕ್ಕರ್ ಸಿಎಂ ಇದ್ದಾಗ ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸಿದ್ದೆ. ಪರಿಕ್ಕರ್ ಮನವೊಲಿಕೆ ಸಹ ಮಾಡಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಗೋವಾ ಕಾಂಗ್ರೆಸ್‌ನವರೇ ವಿರೋಧಿಸಿದ್ದರು. ರಾಜಕೀಯ ಬದಿಗಿಟ್ಟು ಎಲ್ಲರೂ ಒಗ್ಗಟ್ಟಾಗಿ ನಿಂತರೆ ಈ ಸಮಸ್ಯೆ ಬಗೆಹರಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ಇತ್ತೀಚೆಗೆ ಖಾಸಗಿ ಹೋಟೆಲ್‌ನಲ್ಲಿ ಧಾರವಾಡ ಜಿಲ್ಲೆಯ ಬಿಜೆಪಿ ಮುಖಂಡರು ಸಭೆ ನಡೆಸಿದ ವಿಚಾರವಾಗಿ ಮಾತನಾಡುತ್ತಾ, ಕೆಲವು ಮುಖಂಡರನ್ನು ಮರುಸೇರ್ಪಡೆ ಮಾಡಿಕೊಳ್ಳುವ ಕುರಿತು ಚರ್ಚೆಯಾಗಿದೆ. ನಾಳೆ ನಡೆಯುವ ಪಕ್ಷದ ಕಾರ್ಯಕ್ರಮದಲ್ಲಿ 90ಕ್ಕೂ ಹೆಚ್ಚು ಕಾರ್ಯಕರ್ತರು ಪಕ್ಷ ಸೇರ್ಪಡೆ ಆಗುತ್ತಾರೆ. ಎಲ್ಲ ವಿವಾದಕ್ಕೂ ನಾಳೆ ತೆರೆ ಬೀಳಲಿದೆ ಶೆಟ್ಟರ್ ಹೇಳಿದರು.