ಬೆಂಗಳೂರು: ''ಕೋಲಾರದಲ್ಲಿ ಎರಡು ಗುಂಪು ಆಗಿರುವುದು ನಿಜ. ಆದರೆ ಇನ್ನೂ ಸಮಯ ಇದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾರೆ. ಕೋಲಾರದಲ್ಲಿ ಈಗಲೂ ಒಳ್ಳೆಯ ವಾತಾವರಣ ಇದ್ದು, ಯಾರಿಗೆ ಟಿಕೆಟ್ ಕೊಟ್ಟರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಲಿದ್ದಾರೆ'' ಎಂದು ಗೃಹ ಸಚಿವ ಜಿ. ಪರಮೇಶ್ವರ್ ಭರವಸೆ ವ್ಯಕ್ತಪಡಿಸಿದರು.
''ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡ ಅವರನ್ನು ತುಮಕೂರಿನಿಂದ ಸ್ಪರ್ಧಿಸುವಂತೆ ಯಾರೂ ಕರೆದಿರಲಿಲ್ಲ. ಆಗ ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೆ. ದೇವೇಗೌಡ ಅವರು ತುಮಕೂರಿನಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆ. ನೀವು ಬರುತ್ತೀರಾ ಎಂದು ಖುದ್ದಾಗಿ ಕೇಳಿದ್ದೆ. ನಾನು ಇನ್ನು ತೀರ್ಮಾನ ಮಾಡಿಲ್ಲಪ್ಪ. ಬೆಂಗಳೂರು ಉತ್ತರ ಕ್ಷೇತ್ರದಿಂದ ನಿಲ್ಲಲು ತೀರ್ಮಾನ ಮಾಡಿಕೊಂಡಿದ್ದೇನೆ ಎಂದಿದ್ದರು. ತದನಂತರ ನಮ್ಮ ಹೈಕಮಾಂಡ್ ಜೊತೆ ಏನು ಮಾತನಾಡಿಕೊಂಡರೋ ಆ ಭಾಗ ನನಗೆ ಗೊತ್ತಿಲ್ಲ'' ಎಂದು ಸ್ಪಷ್ಟಪಡಿಸಿದರು.
''ದೇವೇಗೌಡ ಅವರು ತುಮಕೂರಿನಿಂದ ಸ್ಪರ್ಧಿಸುತ್ತಾರೆ ಎಂದು ಹೈಕಮಾಂಡ್‌ನಿಂದ ಸೂಚನೆ ಬಂತು. ನಾವೆಲ್ಲ ಪ್ರಮಾಣಿಕವಾಗಿ ದೇವೇಗೌಡ ಅವರ ಗೆಲುವಿಗಾಗಿ ಕೆಲಸ ಮಾಡಿದ್ದೇವೆ. ಪ್ರಧಾನ ಮಂತ್ರಿಯಾಗಿದ್ದವರು ನಮ್ಮ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅಂದಾಗ ಗೆಲ್ಲಿಸಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಆದರೆ, ದೇವೇಗೌಡ ಪರವಾಗಿ ಜೆಡಿಎಸ್ ಪಕ್ಷದವರೆ ಕೆಲಸ ಮಾಡಲಿಲ್ಲ. ದೇವೇಗೌಡ ಅವರ ಬಗ್ಗೆ ಅಪಾರವಾದ ಗೌರವವಿದೆ. ನಮ್ಮ ರಾಜ್ಯದಿಂದ ಪ್ರಧಾನಿಯಾದ ಏಕೈಕ ವ್ಯಕ್ತಿ. ಅವರ ವ್ಯಕ್ತಿತ್ವದ ನಮಗೆ ಹೆಮ್ಮೆ ಇದೆ. ನಾವ್ಯಾರು ಅವರನ್ನು ಕರೆದುಕೊಂಡು ಹೋಗಿ ಸೋಲಿಸಿಲ್ಲ'' ಎಂದರು.
ನಮ್ಮ ಮಾತಿನ ಮೇಲೆ ನಿಯಂತ್ರಣ ಇರಬೇಕು: ಹೆಚ್‌ಡಿಕೆ ಅವರ ಆರೋಗ್ಯದ ವಿಚಾರವಾಗಿ ಶಾಸಕ ಬಂಡಿಸಿದ್ದೇಗೌಡ ಅವರ ಹೇಳಿಕೆಯ ವಿಚಾರವಾಗಿ ಪ್ರತಿಕ್ರಿಯಿಸಿ, ''ಚುನಾವಣೆ ಸಂದರ್ಭದಲ್ಲಿ ಯಾರೊಬ್ಬರು ವೈಯಕ್ತಿಕ ವಿಚಾರಗಳನ್ನು ಮಾತನಾಡಬಾರದು. ನಮ್ಮ ಮಾತಿನ ಮೇಲೆ ನಮಗೆ ನಿಯಂತ್ರಣ ಇದ್ದರೆ ಒಳ್ಳೆಯದು. ನಾನೇ ಇರಲಿ, ಬೇರೆ ಯಾರೇ ಇರಲಿ ಅದು ಸೂಕ್ತವಲ್ಲ ಎಂದು ಹೇಳಿದರು.