ಶಿವಮೊಗ್ಗ: ಬ್ರಹ್ಮ ಬಂದರೂ ಸಹ ಚುನಾವಣಾ ಕಣದಿಂದ ಹಿಂದೆ ಸರಿಯಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸ್ಪಷ್ಟ ಪಡಿಸಿದ್ದಾರೆ. ಶಿವಮೊಗ್ಗದ ಮಲ್ಲೇಶ್ವರ ನಗರದ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಹ್ಮ ಬಂದರೂ ನಾನು ಚುನಾವಣಾ ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಯಾರೋ ಗೊಂದಲವನ್ನುಂಟು ಮಾಡಲು ಈ ಹೇಳಿಕೆ ನೀಡುತ್ತಿದ್ದಾರೆ. ಕುಟುಂಬ ರಾಜಕಾರಣ, ಹಿಂದುತ್ವದ ಪರ ಹೋರಾಟ ಮಾಡುತ್ತಿರುವವರನ್ನು ಪಕ್ಕಕ್ಕೆ ಸರಿಸುತ್ತಿದ್ದಾರೆ. ನೀವು ಚಿಕ್ಕಮಗಳೂರು ಜಿಲ್ಲೆಯಿಂದ ಬೆಂಗಳೂರು ಉತ್ತರಕ್ಕೆ ಶೋಭಾರನ್ನು ಯಾಕೆ ನಿಲ್ಲಿಸಿದ್ರಿ, ಅದೇ ರೀತಿ ಪ್ರತಾಪ ಸಿಂಹರನ್ನು ಬೇರೆ ಕಡೆ ಸೀಟು ಕೊಟ್ಟು ನಿಲ್ಲಿಸಬಹುದಾಗಿತ್ತು. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ಪಕ್ಷದವರನ್ನು ಕಡೆಗಣಿಸಿ ತಮಗೆ ಬೇಕಾದವರನ್ನು ನೇಮಿಸುತ್ತಿದ್ದಾರೆ ಎಂದು ಆರೋಪಿಸಿದರು.
ಯಡಿಯೂರಪ್ಪ ನನ್ನ ಜೊತೆ ಮಾತನಾಡಿಲ್ಲ: ಇದುವರೆಗೂ ಯಡಿಯೂರಪ್ಪ ನನ್ನ ಜೊತೆ ಮಾತನಾಡಿಲ್ಲ. ಟಿಕೆಟ್ ಘೋಷಿಸುವ ಮುನ್ನ ರಾಘವೇಂದ್ರ ಕಾಂತೇಶ್ಗೆ ಪೋನ್ ಮಾಡಿ ಟಿಕೆಟ್ ಕೊಡುವುದಾಗಿ ಹೇಳಿದ್ರು. ನನಗೆ ಯಡಿಯೂರಪ್ಪ ಫೋನ್ ಮಾಡಿದಾಗ ನಾನು ಶೋಭಾರನ್ನು ದೆಹಲಿಗೆ ಕರೆದುಕೊಂಡು ಹೋಗಿದ್ರಾ ಎಂದು ಪ್ರಶ್ನಿಸಿದೆ. ಕುಟುಂಬಕ್ಕೆ ಒಂದೇ ಟಿಕೆಟ್ ಎಂಬ ಮೋದಿಯ ವಾಕ್ಯವನ್ನು ಗಾಳಿಗ ತೂರಿದ್ದಾರೆ. ಲೋಕಸಭೆ ಚುನಾವಣೆ ನಂತರ ವಿಜಯೇಂದ್ರ ರಾಜೀನಾಮೆ ನೀಡಬೇಕಾಗುತ್ತದೆ. ಕಾಂಗ್ರೆಸ್ ನಾಯಕರೇ ನನಗೆ ಫೋನ್ ಮಾಡಿ ಹೊಂದಾಣಿಕೆ ರಾಜಕೀಯ ಮಾಡಲು ಹೊರಟಿದ್ದಾರೆ. ಶಿವಮೊಗ್ಗದಲ್ಲೂ ಹೊಂದಾಣಿಕೆ ರಾಜಕೀಯವನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಬೇಡ ಎನ್ನಲಿ, ಗೆದ್ದ ಮೇಲೆ ಎರಡೇ ತಿಂಗಳಲ್ಲಿ ವಾಪಸ್ ಬಿಜೆಪಿಗೆ ಕರೆಯುತ್ತಾರೆ ಎಂದರು.
ಶೆಟ್ಟರ್ಗೆ ಟಿಕೆಟ್ ನನ್ನ ಮಗನಿಗೆ ಇಲ್ಲ: ಪಕ್ಷ ಬಿಟ್ಟು ಹೋದ ಶೆಟ್ಟರ್ಗೆ ಮತ್ತೆ ಟಿಕೆಟ್ ಕೊಡಿಸಲಾಗುತ್ತಿದೆ. ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ನಾ ಎಂದು ಪ್ರಶ್ನಿಸಿದರು. ನನಗೆ ಅದೃಶ್ಯ ಮತದಾರರು ಮತ ಹಾಕುತ್ತಿದ್ದಾರೆ. ರಾಷ್ಟ್ರ ಭಕ್ತರ ಬಳಗ ಎಂಬ ವೇದಿಕೆ ಇದೆ. ನಾನು ಕೈ ಮುಗಿದು ಹೇಳುತ್ತೇನೆ ನನಗೆ ರೇಗಿಸುವ ಕೆಲಸ ಮಾಡಬೇಡಿ ಎಂದು ಮಾಧ್ಯಮದವರಿಗೆ ವಿನಂತಿಸಿಕೊಂಡರು.
ಶಾಸಕ ಶ್ರೀನಿವಾಸ ಹೇಳಿಕೆಗೆ ಪ್ರತಿಕ್ರಿಯೆ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಡಿಮೆ ಸ್ಥಾನ ಪಡೆದುಕೊಂಡರೆ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಕಾಂಗ್ರೆಸ್ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ರಾಜ್ಯ ರಾಜಕಿಯದಲ್ಲಿ ಅನೇಕ ಬೆಳವಣಿಗೆ ನಡೆಯುತ್ತಿದೆ. ಮುಂದೆ ಕಾದು ನೋಡಿ ಎಂದರು.
ಕಮಲ ಪಕ್ಷ ನನಗೆ ತಾಯಿ ಇದ್ದಂತೆ: ಎರಡು ತಿಂಗಳಲ್ಲಿ ಶಾಲು ಮೇಲೆ ಕಮಲ ಬರುತ್ತದೆ. ಪಕ್ಷ ನನ್ನ ತಾಯಿ. ತಾಯಿಯಿಂದ ದೂರ ಮಾಡುವ ಕೆಲಸ ಮಾಡಲಾಗುತ್ತಿದೆ. ಎರಡು ಮೂರು ತಿಂಗಳಲ್ಲಿ ನಾನು ಕಮಲ ಪಕ್ಷಕ್ಕೆ ವಾಪಸ್ ಆಗುತ್ತೇನೆ ಎಂದರು.
ಚುನಾವಣೆಯಲ್ಲಿ ರಾಘವೇಂದ್ರನನ್ನು ಸೋಲಿಸುತ್ತೇನೆ. ಚುನಾವಣೆ ನಂತರ ವಿಜಯೇಂದ್ರ ಕೆಳಗೆ ಇಳಿಯುತ್ತಾರೆ. ಯಡಿಯೂರಪ್ಪ ನಾಯಕರಾಗಿ ಒಬ್ಬರೇ ಉಳಿಯಲಿ ಎಂದರು. ರಾಷ್ಟ್ರಭಕ್ತ ಮುಸ್ಲಿಮರ ವೋಟು ನನಗೆ ಅದೃಶ್ಯ ಮತದಾರರಂತೆ ಬರಲಿದೆ ಎಂದರು.
ಲೋಕಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂದು ತೀರ್ಮಾನ ಮಾಡಿದ ನಂತರ ಎಲ್ಲ ವಿಧಾನಸಭೆ ಕ್ಷೇತ್ರ ಪ್ರವಾಸ ಮಾಡಿದಾಗ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದೆ. ಅನೇಕರು ನಮ್ಮಮನೆಗೆ ಬಂದು ಬೆಂಬಲ ಸೂಚಿಸುತ್ತಿದ್ದಾರೆ. ಒಂದೇ ಕುಟುಂಬದ ಕೈಯಲ್ಲಿ ಸಿಲುಕಿರುವ ಪಕ್ಷವನ್ನು ಹೊರತರುವ ಪ್ರಯತ್ನಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ನಾನು ನೂರಕ್ಕೆ ನೂರು ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ. ನಾನು ಗೆದ್ದು ನರೇಂದ್ರ ಮೋದಿ ಪರ ಕೈ ಎತ್ತುತ್ತೇನೆ. ಸಾಕಷ್ಟು ಜನ ನೀವು ಸ್ಪರ್ಧೆ ಮಾಡಬೇಕು ಎಂದು ತಿಳಿಸುತ್ತಿದ್ದಾರೆ.
ನನ್ನ ಚುನಾವಣೆ ಕಾರ್ಯಾಲಯ ಮಲ್ಲೇಶ್ವರ ನಗರದಲ್ಲಿ ಮಾರ್ಚ್ 28 ರಂದು ಉದ್ಘಾಟನೆ ಮಾಡುತ್ತೇನೆ. ಅಂದು ಪ್ರಮುಖರು ಹಾಗೂ ಐದು ಜನ ಮುತ್ತೈದೆಯರು ಕಾರ್ಯಾಲಯಕ್ಕೆ ಚಾಲನೆ ನೀಡಿಲಿದ್ದಾರೆ. ಸಾಗರ ಹಾಗೂ ಸೊರಬದ ದೊಡ್ಡ ತಂಡ ಬಂದು ಬೆಂಬಲ ನೀಡುತ್ತಿದ್ದಾರೆ. ದಿನೇ ದಿನೆ ನಾನು ಗೆಲುವಿಗೆ ಹತ್ತಿರವಾಗುತ್ತಿದ್ದೇನೆ. ಮಾರ್ಚ್ 26 ರಂದು ಬೂತ್ ಕಾರ್ಯಕರ್ತರ ಸಮಾವೇಶ ನಡೆಸಲಾಗುತ್ತಿದೆ. ನರ್ಮದಾ ನದಿ ದಡದ ಶಂಕರಚಾರ್ಯ ಮಠಕ್ಕೆ ಬೆಂಕಿ ಹಚ್ಚುವ ಹಾಗೂ ಬೆದರಿಕೆ ಹಾಕುವ ಕುರಿತು ಎಫ್ಐಆರ್ ದಾಖಲಾಗಿದೆ. ಇದು ದೇಶದಲ್ಲಿ ಚುನಾವಣೆ ನಡೆಸುವ ಸಂದರ್ಭದಲ್ಲಿ ಹಿಂದೂ ಸಮುದಾಯದ ಮೇಲೆ ನಡೆಸುವ ದೌರ್ಜನ್ಯವಾಗಿದೆ. ಈ ಕುರಿತು ಮೋದಿ ಹಾಗೂ ಶಾ ಅವರು ಗಮಿಸಬೇಕು ಎಂದು ಒತ್ತಾಯಿಸಿದರು. ಸಮಾವೇಶಕ್ಕೆ ಒಂದು ಬೂತ್ನಿಂದ ಇಬ್ಬಿಬ್ಬರು ಬರಲು ತಿಳಿಸಿದ್ದೇವೆ. ಈಶ್ಬರಪ್ಪನವರಿಗೆ ಬೆಂಬಲ ನೀಡುವವರು ಬರುತ್ತಿದ್ದಾರೆ ಎಂದರು.
ಓದಿ: ಜೆಡಿಎಸ್ ಸೀಟು ಹಂಚಿಕೆ ಚರ್ಚೆಗೆ ತೆರೆ: ಮೂರು ಕ್ಷೇತ್ರಗಳನ್ನು ಬಿಟ್ಟುಕೊಟ್ಟ ಬಿಜೆಪಿ - Lok Sabha election