ETV Bharat / state

ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡೋದು ಒಳ್ಳೆಯದು: ರಮೇಶ ಜಾರಕಿಹೊಳಿ - Jarkiholi Reacts On Prosecution - JARKIHOLI REACTS ON PROSECUTION

ನಾನು ಬಿಜೆಪಿ ಸದಸ್ಯ, ಕಾಂಗ್ರೆಸ್ ಆಂತರಿಕ ವಿಷಯ ನನಗೆ ಗೊತ್ತಿಲ್ಲ. ಮುಖ್ಯಮಂತ್ರಿಗಳಿಗೆ ನಾನು ಮನವಿ ಮಾಡುತ್ತೇನೆ. ಈ ಸರ್ಕಾರ ವಿಸರ್ಜಿಸಿ ಹೊಸದಾಗಿ ಚುನಾವಣೆಗೆ ಹೋಗಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಅಭಿಪ್ರಾಯಪಟ್ಟರು.

ಮಾಜಿ ಸಚಿವ ರಮೇಶ ಜಾರಕಿಹೊಳಿ
ಮಾಜಿ ಸಚಿವ ರಮೇಶ ಜಾರಕಿಹೊಳಿ (ETV Bharat)
author img

By ETV Bharat Karnataka Team

Published : Aug 17, 2024, 8:12 PM IST

ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡೋದು ಒಳ್ಳೆಯದು: ಮಾಜಿ ಸಚಿವ ರಮೇಶ ಜಾರಕಿಹೊಳಿ (ETV Bharat)

ಬೆಳಗಾವಿ: ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದು ಒಳ್ಳೆಯದು. ಸಿದ್ದರಾಮಯ್ಯ ಒಳ್ಳೆಯ ರಾಜಕಾರಣಿ, ಅವರಿಗೆ ಕಪ್ಪು ಚುಕ್ಕೆ ಬಂದಿರಲಿಲ್ಲ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

ಕಾನೂನು ಕ್ರಮಕ್ಕೆ ರಾಜ್ಯಪಾಲರ ಅನುಮತಿ ವಿಚಾರಕ್ಕೆ ಬೆಳಗಾವಿಯಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾನೂನು ಹೋರಾಟ ಮಾಡಿ ಕ್ಲೀನ್‌ ಚಿಟ್​ ಸಿಕ್ಕ ಬಳಿಕ ಸಿದ್ದರಾಮಯ್ಯ ಮರಳಿ ಸಿಎಂ ‌ಆಗಲಿ. ಸಿದ್ದರಾಮಯ್ಯ ‌ರಾಜೀನಾಮೆ ಬಳಿಕ ದೊಡ್ಡ ಅನಾಹುತ ಸನ್ನಿವೇಶ ನಿರ್ಮಾಣವಾಗಲಿದೆ. ಎಲ್ಲ ಪಕ್ಷಗಳು ಈ ಬಗ್ಗೆ ದೃಢ ನಿರ್ಧಾರ ಮಾಡಬೇಕಿದೆ. ಕಾಂಗ್ರೆಸ್‌ಗೆ 135 ಶಾಸಕರ ಬಲ ಇದೆ. ಸಿಎಂ ಯಾರನ್ನು ‌ಮಾಡಬೇಕೆಂಬುದು ಅವರಿಗೆ ಬಿಟ್ಟ ವಿಚಾರ ಎಂದರು.

ಸಿದ್ದರಾಮಯ್ಯ ನುರಿತ ರಾಜಕಾರಣಿ ಆಗಿದ್ದಾರೆ. 2011ರಲ್ಲಿ ಯಡಿಯೂರಪ್ಪ ಇಂಥ ಸ್ಥಿತಿಯಲ್ಲಿದ್ದಾಗ ಏನು ಮಾತಾಡಿದ್ದೀರಿ ಎಂಬುದನ್ನು ಸಿದ್ದರಾಮಯ್ಯ ಈಗ ನೆನಪು ಮಾಡಿಕೊಳ್ಳಬೇಕು. ಆ ಪ್ರಕಾರ ನಿರ್ಣಯ ಕೈಗೊಳ್ಳಬೇಕು. ಪ್ರತಿಪಕ್ಷ ನಾಯಕನಾಗಿದ್ದಾಗ ಏನು ಮಾತಾಡಿದ್ರಿ ಎಂಬುದನ್ನು ಸಿದ್ದರಾಮಯ್ಯ ‌ಈಗ ತಿಳಿದುಕೊಳ್ಳಬೇಕು. ಈಗ ಸಿದ್ದರಾಮಯ್ಯನವರೇ ಸಿಎಂ ಆಗಿದ್ದಾರೆ. ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಅವರಿಗೆ ಬಿಟ್ಟಿದ್ದು. ಇಂಥ ಬೆಳವಣಿಗೆ ವೇಳೆ ನಮ್ಮ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ತಾನು ಬದ್ಧ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ನವರೇ ಸಿದ್ದರಾಮಯ್ಯಗೆ ಮುಳುವಾದರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಮೇಶ ಜಾರಕಿಹೊಳಿ, ''ರಾಜ್ಯ ರಾಜಕಾರಣದಲ್ಲಿ ದೊಡ್ಡ ಅನಾಹುತ ಆಗಲಿದ್ದು, ಸಿಡಿ ಶಿವು ಅಂಥವರು ಬಂದು ರಾಜ್ಯದ ಮುಖ್ಯಮಂತ್ರಿ ಆಗಿ ಬಿಟ್ಟರೆ, ರಾಜ್ಯ ಅಧೋಗತಿಗೆ ಹೋಗುತ್ತದೆ. ಅನೇಕ ಮಹಾನುಭಾವರು ಕಟ್ಟಿದ ರಾಜ್ಯ ಕರ್ನಾಟಕ. ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ರಾಜ್ಯದ ಜನ, ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಬಹಳ ವಿಚಾರ ಮಾಡುವ ಸನ್ನಿವೇಶ ನಿರ್ಮಾಣವಾಗಲಿದೆ‌. ಹಾಗಾಗಿ, ನಮ್ಮ ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ರಾಜ್ಯವನ್ನು ಉಳಿಸಲು ಪ್ರಯತ್ನಿಸಬೇಕು'' ಎಂದರು‌.

ವಿಧಾನಸಭೆ ವಿಸರ್ಜಿಸಿ ಮರುಚುನಾವಣೆ‌ ನಡೆಸುವಂತೆ ಯತ್ನಾಳ್​ ಆಗ್ರಹ ವಿಚಾರಕ್ಕೆ 2013-18ರ ಸಿದ್ದರಾಮಯ್ಯ ಈಗಿಲ್ಲ ಎಂದು ನಾನು ಮೊದಲೇ ಹೇಳಿದ್ದೆ. ಅವರ ಶಕ್ತಿ ಈಗ ಏನಾಗಿದೆ ಗೊತ್ತಿಲ್ಲ. ಅದು ಅವರ ಪಕ್ಷದ ಆಂತರಿಕ ವಿಷಯ. ನಾನು ಬಿಜೆಪಿ ಸದಸ್ಯ, ಕಾಂಗ್ರೆಸ್ ಆಂತರಿಕ ವಿಷಯ ನನಗೆ ಗೊತ್ತಿಲ್ಲ. ಮುಖ್ಯಮಂತ್ರಿಗಳಿಗೆ ನಾನು ಮನವಿ ಮಾಡುತ್ತೇನೆ. ಈ ಸರ್ಕಾರ ವಿಸರ್ಜಿಸಿ ಹೊಸದಾಗಿ ಚುನಾವಣೆಗೆ ಹೋಗಬೇಕು ಎಂದು ಹೇಳಿದರು.

ಇದನ್ನೂ ಓದಿ: ಸಿಎಂ ಪ್ರಾಸಿಕ್ಯೂಷನ್ ಅನುಮತಿ; 'ಇದು ಜಯವಲ್ಲ, ಒಂದೇ ಹೆಜ್ಜೆ ಮುಂದಕ್ಕೆ ಹೋಗಿದ್ದೇನೆ': ದೂರುದಾರ ಟಿ.ಜೆ.ಅಬ್ರಹಾಂ - PROSECUTION AGAINST CM

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.