ಕಲಬುರಗಿ: ''ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅಡ್ಡ ಮತದಾನದ ಭೀತಿ ಇದೆ ಅನ್ನೋದು ಸುಳ್ಳು, ಅಡ್ಡ ಮತದಾನ ಆಗಲ್ಲ. ಎಲ್ಲವೂ ಯೋಜನಾ ಬದ್ಧ ಮತದಾನವೇ ಆಗುತ್ತೆ'' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸೋಮವಾರ ಶಾಸಕ ರಾಜಾ ವೆಂಕಟಪ್ಪ ನಾಯಕ್ ಅವರ ನಿಧನದ ಹಿನ್ನೆಲೆ ಅಂತಿಮ ದರ್ಶನ ಪಡೆಯಲು ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ಮೇಲೆ ಕಾಂಗ್ರೆಸ್ ಸಂಪೂರ್ಣ ನಾಶ ಆಗುತ್ತೆ ಎಂದು ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ''ವಿರೋಧ ಪಕ್ಷದವರು ಏನು ಬೇಕಾದರೂ ಹೇಳ್ತಾರೆ. ಪ್ರಜಾಪ್ರಭುತ್ವದಲ್ಲಿ ಅಹಂನಿಂದ ಮಾತಾಡಿದರೆ ಜನ ಅವರಿಗೆ ಪಾಠ ಕಲಿಸುತ್ತಾರೆ. ಕಲಬುರಗಿಗೆ ಬಂದು ಚೌಹಾಣ್ ಏನೇನೋ ಮಾತಾಡಿ ಹೋಗೊದಲ್ಲ. 371ಜೆ ಈ ಭಾಗಕ್ಕೆ ತಂದಿದ್ದೇವೆ. ರಾಜ್ಯ ಸರ್ಕಾರದಿಂದ ಐದು ಸಾವಿರ ಕೋಟಿ ಕೊಡಲಾಗುತ್ತಿದೆ. ಕೆಕೆಆರ್ಡಿಬಿಗೆ ಕೇಂದ್ರ ಸರ್ಕಾರ ಹತ್ತು ಸಾವಿರ ಕೋಟಿ ಕೊಡಿಸಲು ಹೇಳಿ ಚವ್ಹಾಣ್ಗೆ ಸುಮ್ಮನೆ ಮಾತಾಡಿ ಹೋಗೊದಲ್ಲ, ನಿಮ್ಮ ಅಸ್ಥಿತ್ವವೇ ನಿಮಗೆ ಗೊತ್ತಿಲ್ಲ ಅಂದ್ರೆ ನಮಗ್ಯಾಕೆ ಟೀಕೆ ಮಾಡ್ತೀರಾ?'' ಎಂದು ಟಾಂಗ್ ನೀಡಿದರು.
ಅರಬ್ಬಿ ಸಮುದ್ರದಲ್ಲಿ ಪ್ರಧಾನಿ ಮೋದಿ ಪೂಜೆ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ''ನವಿಲುಗರಿ ಅಲ್ಲಿ ಹಾಕಿದ್ರೆ ಅಲ್ಲಿ ಬೆಳೆಯುತ್ತೆ ಏನೋ ಗೊತ್ತಿಲ್ಲ. ನಿಸರ್ಗದ ನಿಯಮದ ಪ್ರಕಾರ, ನವೀಲುಗರಿ ಅಲ್ಲಿ ಬೆಳೆಯುತ್ತಾ ಗೊತ್ತಿಲ್ಲ. ನಾನು ನಂಬಿಕೆ ಇಟ್ಟಿರೋದು ನಿಸರ್ಗ ನಿಯಮದ ಪ್ರಕಾರ ನಡೆಯಬೇಕು. ನಿಸರ್ಗದ ವಿರುದ್ದ ಯಾರಿಗೂ ಕೂಡ ಯಶಸ್ಸು ಸಿಗೋದಿಲ್ಲ, ಇದೆ ಬುದ್ದನ ತತ್ವ ಸಿದ್ದಾಂತ'' ಎಂದರು.
ರಷ್ಯಾದಲ್ಲಿ ಸಿಲುಕಿರುವ ಕಲಬುರಗಿ ಮತ್ತು ಬೇರೆ ರಾಜ್ಯದ ಯುವಕರನ್ನ ವಾಪಸ್ ಕರೆ ತರುವ ವಿಚಾರವಾಗಿ ಮಾತಾನಾಡಿದ ಅವರು, ''ವಿದೇಶಾಂಗ ಸಚಿವ ಜೈ ಶಂಕರ್ ಅವರಿಗೆ ಪತ್ರ ಬರೆದಿದ್ದೇನೆ. ನಮ್ಮ ಮಕ್ಕಳಿಗೆ ಕೆಲಸ ಕೊಡಿಸುವುದಾಗಿ ಆಸೆ ತೋರಿಸಿ ಕರೆದೊಯ್ದಿದ್ದಾರೆ. ರಷ್ಯಾದಲ್ಲಿ ನಮ್ಮ ಮಕ್ಕಳನ್ನು ಮಿಲಿಟರಿಯಲ್ಲಿ ಟ್ರೈನಿಂಗ್ ಇಲ್ಲದೇ ಅವರನ್ನ ಮುಂದಿಟ್ಟು ಬಲಿ ಕೊಡ್ತಿದ್ದಾರೆ. ಅವರನ್ನ ಬಿಡಿಸಬೇಕು ಅಂತಾ ಪತ್ರ ಬರೆದಿದ್ದೇನೆ. ಆದರೆ, ಅವರಿಂದ ಇನ್ನೂ ಉತ್ತರ ಬಂದಿಲ್ಲ. ಇನ್ನೊಂದು ಬಾರಿ ಇವಾಗ ಅವರಿಗೆ ಮಾತನಾಡುತ್ತೇನೆ'' ಎಂದು ತಿಳಿಸಿದರು.
ರಾಜಾ ವೆಂಕಟಪ್ಪ ನಾಯಕ್ ನಿಧನಕ್ಕೆ ಖರ್ಗೆ ಸಂತಾಪ: ಸುರಪುರ ಕಾಂಗ್ರೆಸ್ ಶಾಸಕ ರಾಜಾವೆಂಕಟಪ್ಪ ನಾಯಕ್ ವಿಧಿವಶ ಹಿನ್ನೆಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದರು. ''ರಾಜಾವೆಂಕಟಪ್ಪ ನಾಯಕ್ ಅವರನ್ನ ಕಳೆದುಕೊಂಡಿರೋದು ನನಗೆ ಅತೀವ ದುಃಖವಾಗಿದೆ. ಯಾವುದೇ ಚುನಾವಣೆ ಇರಲಿ, ನನ್ನನ್ನು ಬಿಟ್ಟು ವೆಂಕಟಪ್ಪನಾಯಕ್ ಪ್ರಚಾರ ಮಾಡುತ್ತಿರಲಿಲ್ಲ. ನಾನು ಹೇಳುತ್ತಿರುವ ಮಾತನ್ನು ಅವರು ಚಾಚೂ ತಪ್ಪದೇ ಮಾಡುತ್ತಿದ್ದರು. ನಾನು ಯಾವಾಗಲೂ ರಾಜಾವೆಂಕಟಪ್ಪ ನಾಯಕ್ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದೇನೆ. ಮುಂದೆಯೂ ನಿಲ್ಲುತ್ತೇನೆ. ರಾಜಾವೆಂಕಟಪ್ಪ ನಾಯಕ್ ಅವರನ್ನ ಲೋಕಸಭೆ ಚುನಾವಣೆಗೆ ನಿಲ್ಲಿಸಬೇಕು ಅಂದುಕೊಂಡಿದ್ದೆ. ಆದರೆ, ದುರ್ದೈವ ರಾಜಾವೆಂಕಟಪ್ಪ ನಾಯಕ್ ಅವರ ಆಕಸ್ಮಿಕ ಸಾವು ಸಂಭವಿಸಿದೆೆ. ವೆಂಕಟಪ್ಪ ನಾಯಕ್ ಅವರನ್ನು ಕಳೆದುಕೊಂಡ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ'' ಎಂದು ಸಂತಾಪ ವ್ಯಕ್ತಪಡಿಸಿದರು.
ಇದನ್ನೂ ಓದಿ: ನಾಲ್ಕು ಸ್ಥಾನ, ಐವರು ಅಭ್ಯರ್ಥಿಗಳು: ಕುತೂಹಲ ಕೆರಳಿಸಿದ ರಾಜ್ಯಸಭೆ ಚುನಾವಣಾ ಅಖಾಡ