ತುಮಕೂರು: ಜಿಲ್ಲಾ ಪೊಲೀಸ್ ಕೇಂದ್ರದ ಆವರಣದಲ್ಲಿ ಜರುಗಿದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸೋಮಣ್ಣ ಪಾಲ್ಗೊಂಡಿದ್ದರು. ಸಾಮೂಹಿಕ ಯೋಗಾಸನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅನೇಕ ಆಸನಗಳನ್ನು ಮಾಡಿದರು.
ಬಳಿಕ ಮಾತನಾಡಿದ ಸಚಿವರು, ಅಂದು ಪ್ರಧಾನಿ ಮೋದಿಯವರು ಯೋಗ ದಿನಾಚರಣೆ ಕುರಿತು ಪ್ರಸ್ತಾಪಿಸಿದ ವೇಳೆ ಇಡೀ ವಿಶ್ವಸಂಸ್ಥೆಯು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನವನ್ನು ಆಚರಿಸುವ ನಿರ್ಧಾರಕ್ಕೆ ಬಂತು ಎಂದು ಅವರು ತಿಳಿಸಿದರು. ಇಂದು ಏಕಕಾಲದಲ್ಲಿ ಪ್ರಪಂಚದ 176 ದೇಶಗಳು ಯೋಗ ದಿನವನ್ನು ಆಚರಿಸುತ್ತಿವೆ ಎಂದು ಹೇಳಿದರು.
ಸಿದ್ದರಬೆಟ್ಟದ ಶ್ರೀ ರಂಭಾಪುರಿ ಪೀಠದ ಸ್ವಾಮೀಜಿಯಿಂದ ಯೋಗಾಸನ: ಮಧುಗಿರಿಯ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಯೋಗ ದಿನಾಚರಣೆಯಲ್ಲಿ ಸಿದ್ದರಬೆಟ್ಟದ ಶ್ರೀ ರಂಭಾಪುರಿ ಶಾಖ ಪೀಠದ ಸ್ವಾಮೀಜಿ ಭಾಗಿಯಾಗಿ, ಯೋಗಾಸನ ಮಾಡಿದರು. ಇದೇ ವೇಳೆ ಮಾತನಾಡಿದ ಸ್ವಾಮೀಜಿ, ಯೋಗ ನಮ್ಮ ದೈನಂದಿನ ಬದುಕಿಗೆ ಅಗತ್ಯವಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಇದನ್ನು ಅಳವಡಿಸಿಕೊಳ್ಳಬೇಕು. ಯೋಗಾಸನವನ್ನು ನಿಯಮಿತವಾಗಿ ಮಾಡುವ ಮೂಲಕ ಅನೇಕ ಕಾಯಿಲೆಗಳನ್ನು ದೂರ ಮಾಡಬಹುದಾಗಿದೆ. ಅಲ್ಲದೇ ಆರೋಗ್ಯಕರ ಸಮಾಜಕ್ಕೂ ಕೂಡ ಇದು ಪೂರಕ ಎಂದು ಹೇಳಿದರು
ಶಿವಮೊಗ್ಗ ಯೋಗ ದಿನಾಚರಣೆ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ 10ನೇ ಯೋಗ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು. ಶಿವಮೊಗ್ಗ ಜಿಲ್ಲಾ ಅಯುಷ್ ಇಲಾಖೆಯು 'ಸ್ವಯಂ ಹಾಗೂ ಸಮಾಜಕ್ಕಾಗಿ ಯೋಗ' ಎಂಬ ಧ್ಯೇಯದೊಂದಿಗೆ ಯೋಗ ದಿನಾಚರಣೆಯನ್ನು ಆಚರಿಸಿತು. ಜಿಲ್ಲಾಡಳಿತ, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಆರ್ಯವೇದ ಆಸ್ಪತ್ರೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಡಿ ನಗರದ ನೆಹರು ಒಳಗಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಜರುಗಿತು.
ಸುಮಾರು 45 ನಿಮಿಷಗಳ ಕಾಲ ಯೋಗಾಭ್ಯಾಸ ಮಾಡಲಾಯಿತು. ಯೋಗದ ವಿವಿಧ ಆಸನಗಳನ್ನು ಯೋಗಪಟುಗಳು ಪ್ರದರ್ಶಿಸಿದರು. ಯೋಗಾಭ್ಯಾಸ ನಡೆಸುವ ವೇಳೆ ಪ್ರತೀ ಆಸನಕ್ಕೂ ಇರುವ ವಿಶೇಷತೆ, ಹಾಗೂ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದನ್ನು ಹೇಳಲಾಗುತ್ತಿತ್ತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಡಿ ಆರ್ ವಿಭಾಗ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿ - ವಿದ್ಯಾರ್ಥಿನಿಯರು ಭಾಗಿಯಾಗಿದ್ದರು. ಅಲ್ಲದೇ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಜಿಲ್ಲಾ ಕ್ರೀಡಾ ಇಲಾಖೆಯ ಮಂಜುನಾಥ ಸ್ವಾಮಿ ನುರಿತ ಯೋಗಾಪಟುಗಳ ಜೊತೆ ಯೋಗಾಭ್ಯಾಸ ನಡೆಸಿ, ಎಲ್ಲರ ಗಮನ ಸೆಳೆದರು. ಕಾರ್ಯಕ್ರಮವನ್ನು ಆಯುಷ್ ಇಲಾಖೆಯ ಡಾ. ಲಿಂಗರಾಜ್ ಹಿಂಡಸಕಟ್ಟಿ ಅವರ ನೇತೃತ್ವದಲ್ಲಿ ನಡೆಸಲಾಯಿತು.