ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಸ್ವೀಪ್ ಚಟುವಟಿಕೆಗಳನ್ನು ಹೆಚ್ಚಾಗಿ ನಡೆಸಲು ಯೋಜನೆಗಳನ್ನು ರೂಪಿಸಿಕೊಳ್ಳಲು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
![ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್](https://etvbharatimages.akamaized.net/etvbharat/prod-images/25-03-2024/kn-bng-02-bbmp-chief-comissioner-about-increasing-voter-turnout-by-sweep-7210969_25032024183411_2503f_1711371851_527.jpg)
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ವಿಡಿಯೋ ಸಂವಾದದ ಮೂಲಕ ನಡೆದ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಬರುವ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆಗಳನ್ನು ನಡೆಸಿ ಮೈಕ್ರೊ ಲೆವೆಲ್ ಯೋಜನೆಗಳನ್ನು ರೂಪಿಸಿಕೊಂಡು ಸ್ವೀಪ್ ಚಟುವಟಿಕೆಗಳನ್ನು ನಡೆಸುವ ಮೂಲಕ ಮತದಾನದ ಪ್ರಮಾಣ ಹೆಚ್ಚಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.
ಮತದಾನದ ಪ್ರಮಾಣವನ್ನು ಶೇಕಡಾವಾರು ಹೆಚ್ಚಿಸುವ ನಿಟ್ಟಿನಲ್ಲಿ ನಗರದಾದ್ಯಂತ ವ್ಯವಸ್ಥಿತ ಯೋಜನೆ ರೂಪಿಸಿಕೊಂಡು ವಿವಿಧ ರೀತಿಯಲ್ಲಿ ಸ್ವೀಪ್ ಚಟುವಟಿಕೆಗಳನ್ನು ನಡೆಸಲು ಕ್ರಮ ಕೈಗೊಳ್ಳಬೇಕು. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ಮಾತುಕತೆ ನಡೆಸಿ ಮತದಾನದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರೇಪಿಸಬೇಕು ಎಂದು ಹೇಳಿದರು.
ಚುನಾವಣೆಗೆ ಸಂಬಂಧಿಸಿದ ಅರ್ಜಿ ವಿಲೇವಾಗಳನ್ನು ತ್ವರಿತವಾಗಿ ಮುಗಿಸಬೇಕು. ಮತದಾನದ ಚೀಟಿಗಳನ್ನು ಮತದಾರ ಮನೆಗಳಿಗೆ ತ್ವರಿತವಾಗಿ ತಲುಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನರಿಗೆ ಹೆಚ್ಚು ಆದ್ಯತೆ ನೀಡಿ ಮನೆ - ಮನೆಗೆ ಭೇಟಿ ನೀಡಿ 12 ಡಿ ನಮೂನೆ ಮೂಲಕ ಭರ್ತಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
![ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್](https://etvbharatimages.akamaized.net/etvbharat/prod-images/25-03-2024/kn-bng-02-bbmp-chief-comissioner-about-increasing-voter-turnout-by-sweep-7210969_25032024183411_2503f_1711371851_49.jpg)
ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಮರಣ ಹೊಂದಿದವರ ಮನೆಯವರಿಂದ ಮರಣ ಹೊಂದಿರುವ ಬಗ್ಗೆ ಖಾತರಿಪಡಿಸಿಕೊಂಡು ಪತ್ರ, ಮರಣ ಪ್ರಮಾಣ ಪತ್ರವನ್ನು ಸಂಗ್ರಹಿಸುವುದು ಹಾಗೂ ಬೂತ್ ಮಟ್ಟದ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಮೃತಪಟ್ಟಿರುವ ಬಗ್ಗೆ ಖಾತರಿಪಡಿಸಿಕೊಂಡು ನಮೂನೆ -7 ಅನ್ನು ನೀಡಿ ಮತದಾರರ ಪಟ್ಟಿಯಿಂದ ತೆಗೆಯುವ ಕಾರ್ಯ ಸರಿಯಾಗಿ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
![ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್](https://etvbharatimages.akamaized.net/etvbharat/prod-images/25-03-2024/kn-bng-02-bbmp-chief-comissioner-about-increasing-voter-turnout-by-sweep-7210969_25032024183411_2503f_1711371851_315.jpg)
ನಗರದಲ್ಲಿರುವ ಎಲ್ಲ ಮತಗಟ್ಟೆಗಳಲ್ಲಿ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಅಲ್ಲದೇ ಬೂತ್ ಮಟ್ಟದಲ್ಲಿ ಚುನಾವಣಾ ನಿರ್ವಹಣಾ ಕಾರ್ಯಗಳನ್ನು ಸರಿಯಾಗಿರುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ವಿಡಿಯೋ ಸಂವಾದದಲ್ಲಿ ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ಕೆ. ಹರೀಶ್ ಕುಮಾರ್, ವಿನೋತ್ ಪ್ರಿಯಾ, ಸ್ನೇಹಲ್, ಡಾ. ಕೆ. ದಯಾನಂದ್, ಸ್ವೀಪ್ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಕಾಂತರಾಜು, ಚುನಾವಣಾ ವಿಭಾಗದ ಸಹಾಯಕ ಆಯುಕ್ತ ರವಿ ಚಂದ್ರ ನಾಯ್ಕ್, ಸಹಾಯಕ ಚುನಾವಣಾಧಿಕಾರಿಗಳು, ಮತದಾರರ ನೋಂದಣಾಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಮತದಾನ ಮಾಡದವರು ನಿಜವಾದ ದೇಶದ್ರೋಹಿಗಳು: ನಾನಾ ಪಾಟೇಕರ್ - Nana Patekar