ಶಿವಮೊಗ್ಗ: ನಟ ದರ್ಶನ್ ವಿರುದ್ಧದ ಕೂಲೆ ಆರೋಪ ಪ್ರಕರಣದ ತನಿಖೆ ನಡೆಯುತ್ತಿದೆ. ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇಂತಹ ಸಮಯದಲ್ಲಿ ನಾನು ಕಾಮೆಂಟ್ ಮಾಡಿದರೆ ತಪ್ಪಾಗುತ್ತದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದರು.
ನಗರದ ಪ್ರೆಸ್ ಟ್ರಸ್ಟ್ನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕರಣದ ಕುರಿತು ಮಾಧ್ಯಮಗಳಲ್ಲಿ ಕ್ಷಣಕ್ಷಣದ ವರದಿಯನ್ನು ನಾನೊಬ್ಬ ವೀಕ್ಷಕನಾಗಿ ನೋಡುತ್ತಿದ್ದೇನೆ ಎಂದರು.
ಇದೇ ವೇಳೆ, 'ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ. ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಯವರ ದು:ಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ' ಎಂದು ಬಸವಣ್ಣನವರ ವಚನ ಹೇಳುವ ಮೂಲಕ ಮಾರ್ಮಿಕವಾಗಿ ಉತ್ತರಿಸಿದರು. ಬಳಿಕ, ಈಗ ದರ್ಶನ್ ವಿಚಾರ ಬೇಡ. ನಮ್ಮ ಅಕ್ಕ ಗೌರಿ ಬಗ್ಗೆ ಮಾತನಾಡೋಣ. ಗೌರಿ ಸಿನಿಮಾ, ಲಂಕೇಶ್, ಕುವೆಂಪು ಅವರ ಬಗ್ಗೆ ಮಾತನಾಡೋಣ ಎಂದು ಹೇಳಿದರು.
ನನ್ನ ಮಗ ಸಮರ್ಜಿತ್ಗಾಗಿ, ನನ್ನ ಅಕ್ಕ ಗೌರಿ ಅವರ ನೆನಪಿಗಾಗಿ ಸಿನಿಮಾಗೆ ಗೌರಿ ಎಂದು ಹೆಸರಿಟ್ಟಿದ್ದೇನೆ. ನಾಯಕಿಯಾಗಿ ಸಾನ್ಯಾ ಅಯ್ಯರ್ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ 7 ಜನ ಸಂಗೀತ ನಿರ್ದೇಶಕರಿದ್ದಾರೆ. ನಮ್ಮ ಈ ಸಿನಿಮಾ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಹೊಸದಾಗಿ ಚಿತ್ರತಂಗಕ್ಕೆ ಬರುವ ನಟ-ನಟಿಯರು ಒಂದೆರಡು ಚಿತ್ರ ಸಕ್ಸಸ್ ಆದ ತಕ್ಷಣ ಆಕಾಶದಲ್ಲಿ ಹಾರಾಡದೆ, ನಿರ್ದೇಶಕರು ಹೇಳಿದಂತೆ ನಡೆದುಕೊಂಡರೆ ಚೆನ್ನಾಗಿರುತ್ತದೆ ಎಂದು ವಿನಂತಿಸಿದರು.
ಗೌರಿ ಸಿನಿಮಾದ ನಾಯಕ ಸಮರ್ಜಿತ್ ಹಾಗೂ ನಾಯಕಿ ಸಾನ್ಯಾ ಅಯ್ಯರ್ ಇದ್ದರು.
ಇದನ್ನೂ ಓದಿ: 'ಅಂತಿಮ ನಿರ್ಧಾರ ಸರಿಯಲ್ಲ, ದರ್ಶನ್-ಪವಿತ್ರಾ ನಿರಪರಾಧಿಗಳು': ವಕೀಲ ನಾರಾಯಣಸ್ವಾಮಿ - Darshan Advocate Narayanaswamy