ಹುಬ್ಬಳ್ಳಿ: ಹಿಟ್ಲರ್ ತನಗೆ ಬೇಡವಾದವರನ್ನು ತುಳಿಯುತ್ತಿದ್ದ, ಆದರೆ ಪ್ರಹ್ಲಾದ್ ಜೋಶಿಯವರು ತಮಗೆ ಬೇಕಾದವರನ್ನು ತುಳಿಯುತ್ತಿದ್ದಾರೆ. ಹಿಟ್ಲರ್ ಜೋಶಿಯವರಿಂದ ಟ್ರೇನಿಂಗ್ ತೆಗೆದುಕೊಳ್ಳಬೇಕಿತ್ತು ಎಂದು ಪಕ್ಷೇತರ ಅಭ್ಯರ್ಥಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಅವರ ಮಗಳ ತೊಟ್ಟಿಲು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೋಶಿ ಹಿಟ್ಲರ್ಗಿಂತಲೂ ಹೆಚ್ಚಿನ ವ್ಯಕ್ತಿತ್ವದವರು. ನಮ್ಮ ಜನಾಂಗವನ್ನು ಒಡೆಯುವ ಷಡ್ಯಂತ್ರ ಮಾಡುತ್ತಿದ್ದಾರೆ. ಜೋಶಿಯವರ ಈ ಷಡ್ಯಂತ್ರದ ವಿರುದ್ಧವೇ ನಾನು ಚುನಾವಣೆಗೆ ಸ್ಪರ್ಧೆ ಮಾಡುವ ಅವಶ್ಯಕತೆ ಬಂದಿದೆ ಎಂದರು.
ಕಾಂಗ್ರೆಸ್ನಿಂದ ದಿಂಗಾಲೇಶ್ವರ ಸ್ವಾಮೀಜಿಗೆ ಬಾಹ್ಯ ಬೆಂಬಲ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆ ಬಗ್ಗೆ ಚರ್ಚೆ ಮಾಡಿದಾಗ ನೋಡೋಣ. ನಾನು ನನ್ನ ನಿರ್ಧಾರದ ಮೂಲಕ ಕಾರ್ಯೋನ್ಮುಖನಾಗಿದ್ದೇನೆ. ನನ್ನನ್ನು ತೇಜೋವಧೆ ಮಾಡುವ ಪ್ರಯತ್ನಗಳಾಗುತ್ತಿವೆ. ಪ್ರಹ್ಲಾದ್ ಜೋಶಿಯವರು ಮೇಲಿಂದ ಮೇಲೆ ತಪ್ಪುಗಳನ್ನು ಮಾಡುತ್ತಾ ಹೊರಟಿದ್ದಾರೆ. ಈ ಜಿಲ್ಲೆ ಹಾಗೂ ರಾಜ್ಯಕ್ಕೆ ಜೋಶಿಯವರ ಕೊಡುಗೆ ಏನೂ ಇಲ್ಲ. ದೊಡ್ಡವರ ಹೆಸರಿನಲ್ಲಿ ಜೋಶಿ ದುರಾಡಳಿತ ಮಾಡುತ್ತಿದ್ದಾರೆ. ಅವರು ಪಕ್ಷ ಬಿಟ್ಟು ಪಕ್ಷೇತರವಾಗಿ ಸ್ಪರ್ಧೆ ಮಾಡಿ ತೋರಿಸಲಿ ಎಂದು ಆಗ್ರಹಿಸಿದರು.
ಮೋದಿಯವರಿಗೆ ಇವರ ನಡೆ ಬಗ್ಗೆ ಗೊತ್ತಾಗದ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಜೋಶಿಯವರ ಕಿರಿಕಿರಿಯಿಂದ ಅನೇಕ ಜನ ಹಿರಿಯ ನಾಯಕರು ಅನ್ಯಾಯಕ್ಕೊಳಗಾಗಿದ್ದಾರೆ. ಕರಡಿ ಸಂಗಣ್ಣ, ಸಿಎಂ ಉದಾಸಿ, ಜಿ.ಎಂ.ಸಿದ್ದೇಶ್ವರ ಅವರು ಜೋಶಿಯವರ ಕಿರಿಕಿರಿಗೆ ಬೇಸತ್ತಿದ್ದಾರೆ. ಅನೇಕ ಜನ ನಾಯಕರನ್ನು ಮಾನಸಿಕ ಹಾಗೂ ಆರ್ಥಿಕವಾಗಿ ಮೂಲೆಗುಂಪು ಮಾಡಿದ್ದಾರೆ. ಚುನಾವಣೆ ಆಸೆ ತೋರಿಸಿ ಸಾಕಷ್ಟು ಜನರನ್ನ ಆರ್ಥಿಕವಾಗಿ ಮೂಲೆಗುಂಪು ಮಾಡಿದ್ದಾರೆ ಎಂದು ಆರೋಪಿಸಿದರು.
ರಜತ್ ಉಳ್ಳಾಗಡ್ಡಿಮಠ ಮನೆಯ ಗುರುಗಳಾಗಿ ಭೇಟಿ ನೀಡಿದ್ದೇನೆ. ರಜತ್ ಉಳ್ಳಾಗಡ್ಡಿಮಠ ಅವರ ಕೊಡುಗೆ ಅವರ ಪಕ್ಷಕ್ಕೆ ಬಹಳ ಇದೆ. ಅವರು ಪಕ್ಷಕ್ಕೆ ದುಡಿದರೂ ಅವರನ್ನು ಪಕ್ಷ ಗುರುತಿಸಲಿಲ್ಲ ಅನ್ನೋ ನೋವು ಇದೆ. ಅವರ ನೋವನ್ನು ನನ್ನ ಮುಖಾಂತರ ಹೇಳುವುದಷ್ಟೇ ಅಲ್ಲ. ಇಡೀ ಕ್ಷೇತ್ರದ ಜನರ ಭಾವನೆ. ಅವರನ್ನು ಗುರುತಿಸುವ ಭಾವನೆ ಇತ್ತು. ಆದ್ರೆ ಅವರಿಗೆ ಅನ್ಯಾಯವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ನಾನು ಸ್ವಾಮೀಜಿಯೂ ಹೌದು, ರಾಜಕಾರಣಿಯೂ ಹೌದು ಎಂದರು.
ಬಿಜೆಪಿ ಪಕ್ಷದ ನಾಯಕರಿಂದ ಸ್ವಾಮೀಜಿ ಮನವೊಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವುದೇ ವ್ಯಕ್ತಿಗಳಿಂದ ನಮ್ಮನ್ನು ಹತ್ತಿಕ್ಕಲು ಸಾಧ್ಯವಿಲ್ಲ. ವದಂತಿಗಳನ್ನು ಹಬ್ಬಿಸುವ ಮೂಲಕ ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಜೋಶಿಯವರು ಎಲ್ಲ ಜಾತಿಯ ಜನರನ್ನು ವ್ಯವಸ್ಥಿತವಾಗಿ ತುಳಿಯುವ ಕೆಲಸ ಮಾಡುತ್ತಿದ್ದಾರೆ. ಅವರು ದುಡಿದು ತಿನ್ನುವವರಲ್ಲ, ಬಡಿದು ತಿನ್ನುವವರು ಎಂದು ವಾಗ್ದಾಳಿ ನಡೆಸಿದರು.
ಶಿರಹಟ್ಟಿಮಠಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧ: ಶಿರಹಟ್ಟಿ ಫಕಿರೇಶ್ವರ ಮಠಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಹೇಳಿದರು. ನನ್ನ ಮಗಳ ತೊಟ್ಟಿಲು ಕಾರಣಕ್ಕಾಗಿ ದಿಂಗಾಲೇಶ್ವರ ಸ್ವಾಮೀಜಿ ನಮ್ಮ ಮನೆಗೆ ಆಗಮಿಸಿದ್ದರು. ಅವರ ಜತೆ ಯಾವುದೇ ರಾಜಕೀಯ ಚರ್ಚೆಗಳಾಗಿಲ್ಲ ಎಂದು ತಿಳಿಸಿದರು.
ಇದನ್ನೂಓದಿ: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ನಾನೇ ಮುಖ್ಯಮಂತ್ರಿ: ಯತ್ನಾಳ್ - Basangouda Patil Yatnal