ಹಾವೇರಿ: "ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯವರು ಏನಾದರೂ ನಾನು, ನನ್ಮಗ, ನನ್ನ ಮೊಮ್ಮಗ, ನನ್ನ ಹೆಂಡತಿ ಎಂದು ವಂಶದ ಹಿನ್ನೆಲೆಯನ್ನು ಇಟ್ಟುಕೊಂಡು ಯಾರಿಗಾದರೂ ಟಿಕೆಟ್ ಕೊಟ್ಟರೆ, ಅಲ್ಲಿ ಶ್ರೀರಾಮಸೇನೆ ಹಿಂದೂ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ" ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು "ಬಿಜೆಪಿ ಪಕ್ಷ ನಿಮ್ಮ ವಂಶದ್ದಲ್ಲ. ಕಾರ್ಯಕರ್ತರ ಬೆವರು ರಕ್ತದಿಂದ ಕಟ್ಟಿದ ಬಿಜೆಪಿ ಪಕ್ಷವನ್ನು ನಿಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಹೋಗಬೇಡಿ. ಬಿಜೆಪಿ ಪಕ್ಷ ಕಟ್ಟುವಲ್ಲಿ ನಮ್ಮದೂ ಪಾತ್ರವಿದೆ. ನಾವೂ ರಕ್ತ ಸುರಿಸಿದ್ದೇವೆ, ಕೇಸ್ ಹಾಕಿಸಿಕೊಂಡಿದ್ದೇವೆ, ಕಾರಾಗೃಹಕ್ಕೆ ಹೋಗಿದ್ದೇವೆ. ಇಲ್ಲಿ ಅಪ್ಪ- ಮಕ್ಕಳದ್ದು ನಡೆಯುವುದಿಲ್ಲ. ಹೈಕಮಾಂಡ್, ಅದು - ಇದು ಎಂದು ಸಬೂಬು ಹೇಳುವುದಲ್ಲ. ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಆರಿಸಿ ಕಳುಹಿಸಬೇಕು. ಈ ರೀತಿ ಆದರೆ ಮಾತ್ರ ನಾವು ಬಿಜೆಪಿಗೆ ಬೆಂಬಲ ನೀಡುತ್ತೇವೆ. ಇಲ್ಲದಿದ್ದರೇ ಶ್ರೀರಾಮಸೇನೆ ಪ್ರತ್ಯೇಕವಾಗಿ ಹಿಂದೂ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ" ಎಂದು ಮುತಾಲಿಕ್ ಎಚ್ಚರಿಕೆ ನೀಡಿದರು.
ನೀವೆ ಸ್ಪರ್ಧಿಗೆ ಇಳಿಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನಮ್ಮ ಸಂಘಟನೆ ಈ ಕುರಿತಂತೆ ಏನು ನಿರ್ಣಯ ತೆಗೆದುಕೊಳ್ಳುತ್ತದೆಯೋ ನೋಡುತ್ತೇವೆ" ಎಂದರು.
"ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಒಬ್ಬ ವಾಲ್ಮೀಕಿ ಸಮುದಾಯದ ವಿದ್ಯಾರ್ಥಿನಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಡೆತ್‌ನೋಟ್‌ನಲ್ಲಿ ಸಮುದಾಯವೊಂದರ ಶಿಕ್ಷಕನ ಕುಟುಂಬದ ಕಿರುಕುಳ ಎಂದು ಬರೆದಿದ್ದಾಳೆ. ಆದರೆ ಇದುವರೆಗೂ ಪೊಲೀಸರು ಯಾವ ಆರೋಪಿಯನ್ನೂ ಬಂಧಿಸಿಲ್ಲ. ಈ ಕೂಡಲೇ ಆರೋಪಿಯನ್ನು ಬಂಧಿಸಬೇಕು. ಮತ್ತು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು" ಎಂದು ಒತ್ತಾಯಿಸಿದರು.
"ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕು ಬಂಕಾಪುರದಲ್ಲಿ ರಸ್ತೆ ಮಾಡುವಾಗ ರಸ್ತೆ ಮಧ್ಯದಲ್ಲಿದ್ದ 17 ಹಿಂದೂ ದೇವಾಲಯಗಳನ್ನು ತೆರವುಗೊಳಿಸಿದ್ದಾರೆ. ಆದರೆ ಪ್ರಾರ್ಥನಾ ಮಂದಿರ ತೆರುವು ಮಾಡಿಲ್ಲ. ಈ ಕುರಿತಂತೆ ಸರ್ವೋಚ್ಚ ನ್ಯಾಯಾಲಯದ ಆದೇಶವಿದ್ದರೂ ರಾಜಕಾರಣಿಗಳು ತಮ್ಮ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಈ ಕೂಡಲೇ ಪ್ರಾರ್ಥನಾ ಮಂದಿರ ತೆರವುಗೊಳಿಸಬೇಕು" ಎಂದು ಹೇಳಿದರು.
ಇದನ್ನೂ ಓದಿ: ಶಿಗ್ಗಾಂವ್ ಸವಣೂರು ಉಪಚುನಾವಣೆ: ಕ್ಷೇತ್ರ ಸಂಚಾರ ಆರಂಭಿಸಿದ ಸಿ.ಎಂ.ಇಬ್ರಾಹಿಂ ಪುತ್ರ ಫೈಜ್ - Shiggaon Savanur By Election