ಮೈಸೂರು: ಗೆದ್ದ ಕ್ಷೇತ್ರವನ್ನೇ ಅದರಲ್ಲೂ ಅಂಬರೀಶ್ ಬೆಂಬಲಿಗರಿದ್ದ ಕ್ಷೇತ್ರವನ್ನೇ ಬಿಟ್ಟುಕೊಟ್ಟು ಬಿಜೆಪಿ ಬೆಂಬಲಿಸಿದ್ದೇನೆ. ಹೀಗಿರುವಾಗ ಮಂಡ್ಯ ಅಭ್ಯರ್ಥಿ ಕುಮಾರಸ್ವಾಮಿ ಅವರಿಗೂ ನನ್ನ ಬೆಂಬಲ ಇದೆ. ಪಕ್ಷ ಎಲ್ಲಿ ಹೇಳುತ್ತೋ ಅಲ್ಲಿ ಹೋಗಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ. ಮಂಡ್ಯದಲ್ಲಿ ಪ್ರಚಾರ ಮಾಡುವಂತೆ ಪಕ್ಷ ಅಥವಾ ಅಭ್ಯರ್ಥಿ ಕರೆದರೆ ಹೋಗುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದರು.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಬೆಂಬಲಿಗರು ಈಗಾಗಲೇ ಮಂಡ್ಯದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಪಕ್ಷದಿಂದ ಸೂಚನೆ ಬಂದಲ್ಲಿ ನಾನೂ ಪ್ರಚಾರಕ್ಕೆ ಹೋಗುತ್ತೇನೆ. ಇದರಲ್ಲಿ ಯಾವ ಗೊಂದಲವೂ ಇಲ್ಲ ಎಂದರು.
ಹೆಚ್.ಡಿ.ಕುಮಾರಸ್ವಾಮಿ ವಾರದ ಹಿಂದೆ ನಮ್ಮ ಮನೆಗೆ ಬಂದು ಸಹಕಾರ ಕೇಳಿದ್ದಾರೆ. ನಾನು ಬಿಜೆಪಿಗೆ ಸೇರ್ಪಡೆಗೊಳ್ಳುವುದಲ್ಲದೇ ಮನಃಪೂರ್ವಕವಾಗಿ ನನ್ನ ಸ್ಥಾನವನ್ನೇ ಬಿಟ್ಟುಕೊಟ್ಟಿದ್ದೇನೆ. ಗೆದ್ದ ಸೀಟನ್ನೇ ಬಿಟ್ಟುಕೊಟ್ಟಿದ್ದೇನೆ ಎಂದ ಮೇಲೆ ಅದಕ್ಕಿಂತ ದೊಡ್ಡ ಸಹಕಾರ ಏನಿದೆ ಎಂದು ಪ್ರಶ್ನಿಸಿದರು.
ಮಳವಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ್ ಪ್ರಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಚಾರ ಮಾಡುವುದು ದರ್ಶನ್ ಅವರ ವೈಯಕ್ತಿಕ ವಿಚಾರ. ಕಳೆದ ಬಾರಿಯೂ ನಾನಾ ಪಕ್ಷಗಳ ಪರ ಪ್ರಚಾರ ಮಾಡಿದ್ದರು. ದರ್ಶನ್ ವ್ಯಕ್ತಿ ಪರ ಪ್ರಚಾರ ಮಾಡುತ್ತಾರೆ, ಪಕ್ಷಗಳ ಪರ ಅಲ್ಲ ಎಂದರು.
ಇದನ್ನೂ ಓದಿ: ನನ್ನನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ದೇಶ-ವಿದೇಶದ ದೊಡ್ಡ ಶಕ್ತಿಗಳಿಂದ ಹುನ್ನಾರ: ಮೋದಿ - PM Modi
ಅಂಬರೀಶ್ ಅವರಿಗೂ ಅರಸರ ಕುಟುಂಬಕ್ಕೂ ಅವಿನಾಭಾವ ಸಂಬಂಧವಿತ್ತು. ಅಲ್ಲದೇ ಅಂಬರೀಶ್ ಅವರ ತಾತ ಚೌಡಯ್ಯ ಅವರು ಮೈಸೂರು ಆಸ್ಥಾನದ ಕಲಾವಿದರಾಗಿದ್ದರು. ಇದೀಗ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅಭ್ಯರ್ಥಿಯಾಗಿದ್ದಾರೆ. ಅವರ ಪರವಾಗಿ ಮತಯಾಚಿಸುವುದು ಹೆಮ್ಮೆಯ ವಿಚಾರ. ರಾಜವಂಶಸ್ಥರು ರಾಜ್ಯಕ್ಕೆ ಅಪರಿಮಿತ ಕೊಡುಗೆ ನೀಡಿದ್ದಾರೆ. ಹೀಗಾಗಿ ಮೈಸೂರು ಕ್ಷೇತ್ರದ ಜನರ ಮೇಲೆ ಅರಸರ ಋಣ ಇದೆ. ಅದನ್ನು ಪರಿಗಣಿಸಿ ಯದುವೀರ್ ಅವರನ್ನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸುವಂತೆ ಮನವಿ ಮಾಡಿದರು.
ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಹತ್ಯೆ ಪ್ರಕರಣ ಅತ್ಯಂತ ಖಂಡನೀಯ. ಕೊಲೆಗೂ ಸಮುದಾಯಕ್ಕೂ ಸಂಬಂಧವಿಲ್ಲ. ಹೀಗಾಗಿ ಒಬ್ಬ ವ್ಯಕ್ತಿ ಮಾಡಿದ ಕೃತ್ಯಕ್ಕೆ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಬಾರದು. ಹಾಗೆಯೇ ಒಂದು ಸಮುದಾಯದ ತಪ್ಪನ್ನು ಸಮರ್ಥನೆ ಮಾಡುವುದೂ ಸರಿಯಲ್ಲ. ಅಲ್ಲದೇ ಈ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದರು.
ಶಾಸಕ ಟಿ.ಎಸ್.ಶ್ರೀವತ್ಸ, ಮುಖಂಡರಾದ ಮೋಹನ್, ದೇವರಾಜು, ಮಹೇಶ್ ರಾಜ ಅರಸ್, ವಸಂತಕುಮಾರ್ ಹಾಗೂ ಇತರರು ಇದ್ದರು.
ಇದನ್ನೂ ಓದಿ: 25 ಸ್ಥಾನ ಗೆಲ್ಲಿಸಿದ ಕರ್ನಾಟಕಕ್ಕೆ ಒಂದೇ ಸಂಪುಟ ಸ್ಥಾನ ನೀಡಿದ್ದು ರಾಜ್ಯಕ್ಕೆ ಮಾಡಿದ ಅವಮಾನ: ತೆಲಂಗಾಣ ಸಿಎಂ - Revanta Reddy