ಧಾರವಾಡ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿರುವ ವಿಚಾರಕ್ಕೆ ಸಂಬಂಧಿಸಿದ ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ. "ಯಡಿಯೂರಪ್ಪ ಅವರ ಮೇಲೆ ಪೋಕ್ಸೋ ಕೇಸ್ ದಾಖಲಾತಿ ವಿಚಾರ ಗೊತ್ತಿದೆ. ಅವರ ಮೇಲೆ ನನಗೆ ಅಪಾರವಾದ ನಂಬಿಕೆಯಿದೆ. ಈ ವಿಷಯದಲ್ಲಿ ಸಂತ್ರಸ್ತೆ ತಾಯಿ ದೂರು ದಾಖಲು ಮಾಡಿದ್ದಾರೆ. ಸ್ವಲ್ಪ ಕಾದು ನೋಡೋಣ. ನಾವು ಏನೂ ಮಾತನಾಡಲು ಆಗಲ್ಲ" ಎಂದು ಹೇಳಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಯಾವುದೇ ಸರ್ಕಾರ ಇದ್ದರೂ ದೂರು ಕೊಟ್ಟರೆ, ದಾಖಲು ಮಾಡಿಕೊಳ್ಳಲೇಬೇಕು. ಹೀಗಾಗಿ ದೂರು ದಾಖಲಾಗಿದೆ. ತನಿಖೆ ಬಳಿಕ ಎಲ್ಲಾ ಗೊತ್ತಾಗಲಿದೆ" ಎಂದರು.
ಕಾಂಗ್ರೆಸ್ ಟಿಕೆಟ್ ಘೋಷಣೆ ವಿಳಂಬ ವಿಚಾರಕ್ಕೆ ಮಾತನಾಡಿದ ಅವರು, "ಇನ್ನೆರಡು ದಿನಗಳಲ್ಲಿ ನಮ್ಮ ಅಭ್ಯರ್ಥಿಗಳ ಹೆಸರು ಅನೌನ್ಸ್ ಆಗುತ್ತದೆ. ಎರಡು ಮೂರು ದಿನಗಳಲ್ಲಿ ಟಿಕೆಟ್ ಗೊಂದಲ ಮುಗಿಯುತ್ತದೆ" ಎಂದು ಹೇಳಿದರು.
ಸಂಸದ ಜೋಶಿ ಅವರ ಧಾರವಾಡದಲ್ಲಿ ಮೂರು ಲಕ್ಷ ಲೀಡ್ನಿಂದ ಗೆಲುವು ಖಚಿತ ಹೇಳಿಕೆ ವಿಚಾರದ ಕುರಿತು ಮಾತನಾಡಿ, "ಒಂದು ತಿಂಗಳು ಟಿವಿ ಆಫ್ ಮಾಡಲಿಕ್ಕೆ ಹೇಳಿ ಅವರಿಗೆ. ಟಿವಿಗಳಲ್ಲಿ ಮೋದಿಯವರ ಕಾರ್ಯಕ್ರಮಗಳನ್ನು ನೋಡುವುದನ್ನು ಬಿಡಲಿ ನೋಡೋಣ. ಆಗ ಜೋಶಿ ಅವರ ಲೀಡ್ ನೋಡೋಣ. ಮಾಧ್ಯಮಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಟೈಂ ಸ್ಪೇಸ್ ಕೊಡ್ತಿಲ್ಲ. ನಮಗೂ ಟೈಂ ಸ್ಪೇಸ್ ಕೊಡಲಿ. ಇವರು ಸರ್ಕಾರದ ಹಣ ಖರ್ಚು ಮಾಡಿ ಪ್ರಚಾರ ಗಿಟ್ಟಿಸಿಕೊಳ್ತಾರೆ. ಭಾರತ ಸರ್ಕಾರ 6,500 ಕೋಟಿ ಖರ್ಚು ಮಾಡಿದ್ದಾರೆ" ಎಂದು ದೂರಿದರು.
ಕುಂದಗೋಳ ಸಭೆಯಲ್ಲಿ ನ್ಯೂಸ್ ಚಾನಲ್ ನೋಡಬೇಡಿ ಧಾರವಾಹಿ ನೋಡಿ ಎಂಬ ಲಾಡ್ ಹೇಳಿಕೆ ಬಗ್ಗೆ ಮಾತನಾಡಿ, "ನಾನು ನ್ಯೂಸ್ ಚಾನೆಲ್ನಲ್ಲಿ ಬರೀ ಮೋದಿ ಅವರನ್ನೇ ಪ್ರಚಾರ ಮಾಡುತ್ತಾರೆ. ಚಾನಲ್ ನೋಡಬೇಡಿ ಎಂದು ಕಾಮಿಡಿಯಾಗಿ ಹೇಳಿದ್ದೇನೆ" ಎಂದು ಸಮಜಾಯಿಸಿ ನೀಡಿದರು.
"ನಾವು ಯಾವ ಚಾನಲ್ ನೋಡಬೇಡಿ ಅಂತ ಹೇಳಿಲ್ಲ, ನಮಗೆ ಟೈಂ ಸ್ಪೇಸ್ ಕೊಡಿ ಎಂದು ಕೇಳಿದ್ದೇವೆ. ನಾವು ಕೇಂದ್ರದಲ್ಲಿ ಅಧಿಕಾರದಲ್ಲಿಲ್ಲ. ಬಿಜೆಪಿಯವರು ಅಧಿಕಾರದಲ್ಲಿದ್ದು, ಎಲ್ಲಾ ಮೀಡಿಯಾಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ನಮ್ಮ ಪಕ್ಷಕ್ಕೆ ಯಾರೆ ಬಂದ್ರು ಸ್ವಾಗತ. ನಮ್ಮ ಜಿಲ್ಲೆಯಲ್ಲಿ ಯಾರೂ ಬಿಜೆಪಿಯಿಂದ ಬರುತ್ತಿಲ್ಲ" ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಉಪಕಾರ ಮಾಡಿದವರ ವಿರುದ್ಧ ಆರೋಪ, ಮಹಿಳೆಯ ದೂರನ್ನು ಕಾನೂನು ರೀತಿ ಎದುರಿಸುತ್ತೇನೆ: ಬಿಎಸ್ ಯಡಿಯೂರಪ್ಪ