ಶಿವಮೊಗ್ಗ: "ಯಡಿಯೂರಪ್ಪ ಅವರ ಕುಟುಂಬದ ಕೈಯಲ್ಲಿ ಸಿಲುಕಿರುವ ಬಿಜೆಪಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲುತ್ತದೆ ಎಂಬ ಭಯ ಉಂಟಾಗುತ್ತಿದೆ" ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಇಂದು ಮಲ್ಲೇಶ್ವರ ನಗರದದಲ್ಲಿರುವ ತಮ್ಮ ನಿವಾಸದ ಪಕ್ಕದಲ್ಲಿ ಚುನಾವಣಾ ಪ್ರಚಾರ ಕಾರ್ಯಾಲಯ ಉದ್ಘಾಟನೆಗೂ ಮುನ್ನ ಹೋಮ ನಡೆಸಿ ಮಾತನಾಡಿದ ಅವರು, "ನನ್ನ ಪರವಾಗಿ ಇಷ್ಟು ಜನರು ಬಂದಿದ್ದನ್ನು ಕಂಡು ಹೃದಯ ತುಂಬಿ ಬಂದಿದೆ. ನಾನು ಆಶೀರ್ವಾದ ತೆಗೆದುಕೊಂಡು ಬಂದ ಸ್ವಾಮೀಜಿಗಳಿಗೆಲ್ಲ ಕಣ್ಣೀರು ಹಾಕಿಸಿದ್ದಾರೆ. ಸ್ವಾಮೀಜಿಗಳಿಗೆ ಕಣ್ಣೀರು ಹಾಕಿಸುತ್ತಾರೆ ಎಂದು ಗೊತ್ತಿರಲಿಲ್ಲ. ಗೊತ್ತಿದ್ದರೆ ನಾನು ಹೋಗುತ್ತಿರಲಿಲ್ಲ. ಫೋನ್ನಲ್ಲೇ ಆಶೀರ್ವಾದ ತೆಗೆದುಕೊಳ್ಳುತ್ತಿದ್ದೆ. ಈಗ ಸ್ವಾಮೀಜಿಗಳು ನನಗೆ ಫೋನ್ ಮಾಡಿ ಹೇಳುತ್ತಿದ್ದಾರೆ. ನಮಗೆ ಕಣ್ಣೀರು ಹಾಕಿಸಿದವರಿಗೆ ಒಳ್ಳೆಯದಾಗಲ್ಲ ಎನ್ನುತ್ತಿದ್ದಾರೆ. ಸ್ವಾಮೀಜಿಗಳಿಗೂ ಬೆದರಿಕೆ ಹಾಕುತ್ತಾರೆ ಎಂದರೆ ಇವರ ದರ್ಪ ಎಷ್ಟಿರಬಹುದು?" ಎಂದು ಈಶ್ವರಪ್ಪ ಪ್ರಶ್ನಿಸಿದರು.
"ನನಗೆ ಕೇಸರಿ ನಾಯಕ ಎಂದು ಕರೆಯುತ್ತಾರೆ. ನನಗೆ ಬಿಜೆಪಿಯಿಂದ ತೆಗೆಯುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಆದರೆ ನನನ್ನು ಕೇಸರಿ ನಾಯಕ ಎಂದು ಕಮ್ಯುನಿಸ್ಟ್ನವರು ಒಪ್ಪಿಕೊಂಡಿದ್ದಾರೆ. ನನಗೆ ನನ್ನ ಪಕ್ಷದವರು ಒಪ್ಪಿಕೊಂಡರೂ, ಬಿಟ್ಟರೂ ಪರವಾಗಿಲ್ಲ. ಬೈಂದೂರಿನಲ್ಲಿ ಬಿಜೆಪಿ ಬಿಟ್ಟು ಜನರು ಹೊರಬರಲ್ಲ. ಆದರೆ, ಈಗ ಬೈಂದೂರಿನಲ್ಲೂ ಕೂಡ ನನ್ನ ಪರ ಒಲವು ವ್ಯಕ್ತವಾಗುತ್ತಿದೆ. ಬಿಜೆಪಿ ಮುಖಂಡರು ಹಾಗೂ ಬೂತ್ ಮಟ್ಟದ ಕಾರ್ಯಕರ್ತರು ನನಗೆ ಬೆಂಬಲ ನೀಡುತ್ತಿದ್ದಾರೆ. ಬೈಂದೂರಿನಲ್ಲಿ ಮಾರ್ಚ್ 30 ರಂದು ಬೃಹತ್ ಕಾರ್ಯಕರ್ತರ ಸಭೆ ನಡೆಸುತ್ತಿದ್ದೇನೆ" ಎಂದರು.
ಯಡಿಯೂರಪ್ಪ ಡಮ್ಮಿ ಕ್ಯಾಡಿಡೇಟ್ ಹಾಕಿಸಿಕೊಂಡು ಗೆಲ್ಲುತ್ತಾರೆ: "ಯಡಿಯೂರಪ್ಪ ಡಮ್ಮಿ ಕ್ಯಾಂಡಿಡೇಟ್ ಹಾಕಿಸಿಕೊಂಡು ಗೆಲ್ಲುತ್ತಾರೆ. ಯಡಿಯೂರಪ್ಪ ಅವರದ್ದು ಕೇವಲ ಹೊಂದಾಣಿಕೆ ರಾಜಕೀಯ. ಯಡಿಯೂರಪ್ಪ ಇನ್ಮುಂದೆ ಈ ಆಟ ನಡೆಯಲ್ಲ. ಕಳೆದ ವಿಧಾನಸಭಾ ಚುನಾವಣೆಗೆ ಇದು ಕೊನೆಯಾಗಲಿದೆ. ಲಿಂಗಾಯತ ನಾಯಕನಿಗೆ ಹಣಿದು ಡಮ್ಮಿ ಕ್ಯಾಂಡಿಡೇಟ್ ಹಾಕಿಸಿ ಗೆದ್ದರು. ಚಿತ್ರದುರ್ಗ, ಕೋಲಾರದಲ್ಲೂ ಮಾತು ಕೊಟ್ಟು ಮುರಿದಿದ್ದಾರೆ. ನಿಮಗೆ ಟಿಕೆಟ್ ನೀಡುತ್ತೇನೆ ಎಂದು ಹಲವರನ್ನು ಮೋಸ ಮಾಡಿದ್ದಾರೆ. ಯಡಿಯೂರಪ್ಪ ಮೋಸ ಮಾಡುತ್ತಲೇ ಬಂದಿದ್ದಾರೆ. ಇವರಿಗೆ ಹೇಗೆ ನಂಬುವುದು? ಎಂದು ಕೇಳಿದರು.
"ಇದರಿಂದಾಗಿ ನಾನು ತಿರುಗಿ ಬಿದ್ದಿದ್ದೇನೆ. ಮೋದಿ ಅಲ್ಲ ಬ್ರಹ್ಮ ಬಂದು ಹೇಳಿದರೂ ನಾನು ಸ್ಪರ್ಧಿಸುವುದು ಖಚಿತ. ಶಿವಮೊಗ್ಗ ನಗರದಲ್ಲಿ ಪ್ರತಿ ವಾರ್ಡ್ಗೂ ಹತ್ತತ್ತು ಜನರಿಗೆ ಕಾರ್ಪೊರೇಷನ್ ಚುನಾವಣೆಗೆ ನಿಲ್ಲಲು ಭರವಸೆ ನೀಡಿದ್ದಾರೆ. ನನಗೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ. ಇಂದು ನನ್ನ ಜೊತೆ ಕೆಲವರು ಬಾರದೆ ಇರಬಹುದು. ಆದರೆ, ವಿಜಯೋತ್ಸವದಲ್ಲಿ ಅವರು ಭಾಗಿಯಾಗುತ್ತಾರೆ. ನಾನು ಆರ್ಎಸ್ಎಸ್ನ ಮಾತು ಎಂದೂ ಮೀರಿಲ್ಲ" ಎಂದು ಹೇಳಿದರು.
"ಮೊನ್ನೆ ನನ್ನ ಜೊತೆ ಮಾತನಾಡಲು ಬಂದಿದ್ದರು. ಆಗ ನಾನು ಹೇಗೆ ಮೋಸವಾಗುತ್ತಿದೆ ಎಂದು ವಿವರಿಸಿದೆ. ಆದರೂ ಅವರು, ನೀನು ಚುನಾವಣೆಗೆ ನಿಲ್ಲಬೇಡ ಎಂದು ಹೇಳಿದರು. ನಮ್ಮಂತಹವರಿಗೆ ಮೋಸವಾಗುವುದನ್ನು ನೋಡುತ್ತಾ ಕೂರಲ್ಲ, ನಾನು ಯಾರಿಗೂ ಕಾಲಿಗೆ ಬಿದ್ದಿಲ್ಲ. ನಿಮಗೆ ಕಾಲಿಗೆ ಬಿದ್ದು ಹೇಳುತ್ತಿದ್ದೇನೆ. ಮೊದಲು ಬಾರಿಗೆ ನಿಮ್ಮ ಸೂಚನೆ ಮೀರುತ್ತಿದ್ದೇನೆ. ನಾನು ಸ್ಪರ್ಧೆ ಮಾಡುತ್ತೇನೆ. ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುತ್ತೇನೆ ಎಂದು ಹೇಳಿ ಕಳುಹಿಸಿದ್ದೇನೆ" ಎಂದರು.
"ಯಡಿಯೂರಪ್ಪ ಅವರು ಈಶ್ವರಪ್ಪ ಅವರ ಮನವೊಲಿಸಲು ಆಗಲ್ಲ. ಕೇಂದ್ರದಿಂದ ನಾಯಕರು ಬರುತ್ತಾರೆ ಎಂದು ಹೇಳಿದ್ದಾರೆ. ನಾನು ಮೋದಿಯವರಿಗೆ ಮೆಸೇಜ್ ಮಾಡಿದ ಅರ್ಧ ಗಂಟೆಯಲ್ಲಿ ನನಗೆ ಮೆಸೇಜ್ ಬಂದಿತ್ತು. ಮೋದಿಯವರಿಗೆ ಮೆಸೇಜ್ ಮಾಡಿದರೆ ನನಗೆ ಅವರ ಕಚೇರಿಯಿಂದ ಫೋನ್ ಬಂದಿತ್ತು. ನನನ್ನು ಅವರು ದೆಹಲಿಗೆ ಕರೆದಿದ್ದರು. ಕರ್ನಾಟಕ ರಾಜ್ಯದ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳಿದ್ದೆನು. ಅಮಿತ್ ಶಾ ಮನೆಯಲ್ಲಿ ಕೂತು ಒಂದು ಗಂಟೆಗಳ ಕಾಲ ಅವರಿಗೆ ವಿಷಯ ತಿಳಿಸಿ ಹೇಳಿದೆ" ಎಂದರು.
"ಪ್ರಸ್ತುತ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಸರಿ ಇಲ್ಲ ಎಂದು ಹೇಳಿ ಬಂದಿದ್ದೇನೆ. ಇದರಿಂದಾಗಿ ನನಗೆ ಭಯ ಶುರುವಾಗಿದೆ. ರಾಜ್ಯದಲ್ಲಿ ಎಷ್ಟು ಸೀಟು ತೆಗೆದುಕೊಳ್ಳುತ್ತೆವೆಯೋ ಎಂಬ ಭಯ ಶುರುವಾಗಿದೆ. ರಾಜ್ಯದ ಬಿಜೆಪಿಯಲ್ಲಿ ಕಾಂಗ್ರೆಸ್ ಸಂಸ್ಕೃತಿ ಬರುತ್ತಿದೆ. ಏಪ್ರಿಲ್ 12 ರಂದು ಸಾವಿರಾರು ಮಹಿಳೆಯರು ಹಾಗೂ ಅಭಿಮಾನಿಗಳ ಜೊತೆ ಬಂದು ನಾಮಪತ್ರ ಸಲ್ಲಿಸುತ್ತೇನೆ" ಎಂದರು.
ರಾಜ್ಯದಲ್ಲಿ ಎನ್ಡಿಎ 27 ಸ್ಥಾನ ಗೆಲ್ಲಬೇಕು, ಪಕ್ಷೇತರನಾಗಿ ನಾನೂ ಗೆಲ್ಲಬೇಕು: ರಾಜ್ಯದಲ್ಲಿ ಎನ್ಡಿಎ 27 ಸ್ಥಾನಗಳನ್ನು ಗೆಲ್ಲಬೇಕು. ನಾನು ಪಕ್ಷೇತರನಾಗಿ ಗೆಲ್ಲಬೇಕು. ರಾಜ್ಯದಲ್ಲಿ ಒಂದೂ ಸ್ಥಾನವನ್ನೂ ಕಾಂಗ್ರೆಸ್ ಗೆಲ್ಲಬಾರದು ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನನ್ನನ್ನು ಇನ್ನೂ ಬಿಜೆಪಿಯಿಂದ ತೆಗೆದು ಹಾಕಿಲ್ಲ. ನನ್ನನ್ನು ತೆಗೆದು ಹಾಕಿದ್ರೆ, ಗೊತ್ತಿಲ್ಲ. ತೆಗೆದು ಹಾಕಿಲ್ಲ ಅಂದ್ರೆ ಗೆದ್ದ ನಂತರ ಬಿಜೆಪಿಯಲ್ಲೇ ಮುಂದುವರಿಯುತ್ತೇನೆ. ಒಂದು ವೇಳೆ ತೆಗೆದು ಹಾಕಿದ್ರೆ, ಗೆದ್ದು ಬಿಜೆಪಿಗೆ ಹೋಗುತ್ತೇನೆ. ನನ್ನ ತಾಯಿ ಬಿಜೆಪಿ. ಅವರ ರೀತಿ ದ್ರೋಹ ಮಾಡಿ ಕೆಜೆಪಿ ಕಟ್ಟಲಿಲ್ಲ ನಾನು. ನಾನು ನನ್ನ ಕ್ಷೇತ್ರದಲ್ಲಿ ಗೆಲ್ಲಬೇಕು. ಇದರಿಂದ ನಾನು ಬೇರೆ ಕಡೆ ಪ್ರಚಾರಕ್ಕೆ ಹೋಗಲ್ಲ. ಮೋದಿ ಸೇರಿ ಬ್ರಹ್ಮ ಬಂದು ಹೇಳಿದರೂ ನಾನು ಚುನಾವಣೆಗೆ ನಿಲ್ಲುವವನೇ ಎಂದರು.
ಇದನ್ನೂ ಓದಿ: ನನ್ನ ಮತ್ತು ನನ್ನ ಕುಟುಂಬ ಮುಗಿಸುವುದಾಗಿ ಲೆಟರ್ ಬಂದಿದೆ: ಸಚಿವ ಪ್ರಿಯಾಂಕ್ ಖರ್ಗೆ - Minister Priyank Kharge