ಬೆಂಗಳೂರು: ಪವಿತ್ರಾ ಗೌಡ ಅವರು ದರ್ಶನ್ ಸ್ನೇಹಿತೆಯಷ್ಟೇ. ಕಾನೂನು ಪ್ರಕಾರ ದರ್ಶನ್ ನನ್ನ ಗಂಡ. ಹೀಗಾಗಿ ಪೊಲೀಸ್ ಕಡತಗಳಲ್ಲಿ ಅಧಿಕೃತವಾಗಿ ಆಕೆಯನ್ನು ಹೆಂಡತಿ ಎಂಬುದಾಗಿ ನಮೂದಿಸಕೂಡದು ಎಂದು ವಿಜಯಲಕ್ಷ್ಮೀ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರಿಗೆ ಪತ್ರ ಬರೆದಿದ್ದಾರೆ.
ನಾವಿಬ್ಬರು 2003ರಲ್ಲಿ ಧರ್ಮಸ್ಥಳದಲ್ಲಿ ಹಿಂದೂ ಧರ್ಮದ ವಿಧಿವಿಧಾನದಂತೆ ಮದುವೆಯಾಗಿದ್ದೆವು. ಈ ನೆಲದ ಕಾನೂನಿನಂತೆ ನಾನು ನಿಜವಾದ ಹೆಂಡತಿ. ಮಾಧ್ಯಮಗಳ ಮುಂದೆ ತಾವು (ಆಯುಕ್ತರು) ಹೇಳಿಕೆ ಕೊಡುವಾಗ ಪವಿತ್ರಾಳನ್ನು ದರ್ಶನ್ ಹೆಂಡತಿ ಎಂದಿದ್ದರಿಂದ ಈ ಸ್ಪಷ್ಟನೆ ನೀಡಬೇಕಾಯಿತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನನ್ನ ಗಂಡ ದರ್ಶನ್ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ನನಗೆ ನ್ಯಾಯಾಂಗದ ಮೇಲೆ ನಂಬಿಕೆಯಿದೆ. ದರ್ಶನ್ ತಮ್ಮ ಮೇಲಿರುವ ಆರೋಪಗಳಿಂದ ಹೊರಬರಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ತಾವು ಮಾಧ್ಯಮಗಳ ಮುಂದೆ ತಪ್ಪಾಗಿ ಅರ್ಥೈಸಿಕೊಂಡು ಹೇಳಿಕೆ ನೀಡಿದ್ದೀರಿ. ಇದೇ ಹೇಳಿಕೆ ಆಧರಿಸಿ ಗೃಹ ಸಚಿವರು ಮಾತನಾಡಿದ್ದರು. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿದೆ. ನನಗೆ ಒಬ್ಬ ಮಗನಿದ್ದಾನೆ. ಅಲ್ಲದೇ, ಪವಿತ್ರಾಳಿಗೆ ಸಂಜಯ್ ಸಿಂಗ್ ಎಂಬಾತನೊಂದಿಗೆ ಮದುವೆಯಾಗಿ ಮಗಳಿದ್ದಾಳೆ. ಹೀಗಾಗಿ ಪೊಲೀಸ್ ಕಡತಗಳಲ್ಲಿ ಆಕೆಯ ಹೆಸರನ್ನು ದರ್ಶನ್ ಹೆಂಡತಿ ಎಂದು ನಮೂದಿಸಕೂಡದು ಎಂದು ಕೋರಿದ್ದಾರೆ.
ಇದನ್ನೂ ಓದಿ: 'ನ್ಯಾಯದ ಮೇಲೆ ಭರವಸೆಯಿಡೋಣ': ಅಭಿಮಾನಿಗಳಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮನವಿ