ಹುಬ್ಬಳ್ಳಿ: ನಾನು ಸದ್ಯಕ್ಕೆ ಸೈಲೆಂಟ್ ಆಗುತ್ತೇನೆ. ಮುಂದೆ ಒಬ್ಬೊಬ್ಬರಾಗಿ ವೈಲೆಂಟ್ ಆಗುತ್ತಾ ಹೋಗುತ್ತೇವೆ. ಆ ರೀತಿಯ ಪ್ಲಾನ್ ಹಾಕಿಕೊಂಡಿದ್ದೇವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ನಿನ್ನೆ ನನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, "ನನ್ನ ಮೇಲೆ ಹೈಕಮಾಂಡ್ಗೆ ಯಾವಾಗಲೂ ಪ್ರೀತಿ. ಯತ್ನಾಳ್ನನ್ನು ಮುಗಿಸುತ್ತೇನೆ ಅನ್ನುವವರಿಂದ ಏನೂ ಆಗುವುದಿಲ್ಲ. ಯಾರಿಂದಲೂ ನನಗೆ ಏನು ಮಾಡಲು ಆಗಲ್ಲ. ಯಾರು ಯಾರು ಉತ್ತರ ಕೊಡುತ್ತಾರೋ ನೋಡೋಣ. ಎಲ್ಲರಿಗೂ ಉತ್ತರ ಕೊಡಲು ನಾನು ಸದಾ ಸಿದ್ಧ. ನಾನು ಅಂಜಿಲ್ಲ, ಅಳುಕಿಲ್ಲ, ಮುಖ ಸಪ್ಪಗೆ ಮಾಡಿಲ್ಲ. ದೆಹಲಿಯಿಂದ ಹಸನ್ಮುಖಿಯಾಗಿ ಬರುತ್ತಿದ್ದೇನೆ ಅನ್ನೋದನ್ನು ಅರ್ಥ ಮಾಡಿಕೊಳ್ಳಿ. ನನ್ನನ್ನು ಯಾರು ತರಾಟೆಗೆ ತೆಗೆದುಕೊಂಡಿಲ್ಲ. ದೆಹಲಿ ನಾಯಕರು ನನಗೆ ಶಹಬಾಸ್ ಗಿರಿ ಕೊಟ್ಟಿದ್ದಾರೆ. ಹೈಕಮಾಂಡ್ ಕೊಟ್ಟ ನೋಟಿಸ್ಗೆ ನಾನು ಉತ್ತರ ಕೊಟ್ಟಿದ್ದೇನೆ" ಎಂದು ತಿಳಿಸಿದರು.
ನಮ್ಮ ನಡುವೆ ಯಾರು ಸಂಧಾನ ಮಾಡುವವರಿದ್ದಾರೆ? "ಶಿಸ್ತು ಸಮಿತಿ ಅಧ್ಯಕ್ಷ ಮತ್ತು ರಾಜನಾಥ್ ಸಿಂಗ್ರನ್ನು ಬಿಟ್ಟರೆ ಬೇರೆ ಯಾರನ್ನು ಭೇಟಿಯಾಗಿಲ್ಲ. ವಕ್ಫ್ ಕಾನೂನಿನ ಬಗ್ಗೆ ನಾವು ಹೆಚ್ಚು ಗಮನ ಕೊಟ್ಟಿದ್ದೇವೆ. ನನಗೆ ಶಾಶ್ವತನಾಗಿ ಸುಮ್ಮನಿರಲು ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸುತ್ತೇವೆ. ನಮ್ಮ ನಾಯಕರ ವಿರುದ್ಧ ಗುಪ್ತ ಪತ್ರಗಳನ್ನು ಬರೆಯುತ್ತೇನೆ. ವಿಜಯೇಂದ್ರ ಸೇರಿ ಎಲ್ಲರ ಬಗ್ಗೆಯೂ ಬರೆಯುತ್ತೇವೆ. ನಮ್ಮ ಟಾರ್ಗೆಟ್ ವಿಜಯೇಂದ್ರ ಅಲ್ಲ. ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಅನ್ನುವುದು ನಮ್ಮ ಗುರಿ. ನಾವು ಅಧಿಕಾರಕ್ಕೆ ಬಂದಾಗ ಪ್ರಾಮಾಣಿಕರನ್ನು ಸಿಎಂ ಮಾಡೋ ಗುರಿಯಿದೆ. ಭ್ರಷ್ಟರು ಸಿಎಂ ಆಗಬಾರದು ಅನ್ನುವ ಉದ್ದೇಶವಿದೆ. ದಾಂಧಲೆ ಮಾಡಬೇಡ ಅಂತ ಮನೆಯಲ್ಲಿ ಹೇಳುತ್ತಾರೆ ಅಲ್ವಾ..? ಹಾಗೆ ನನಗೂ ಹೇಳಿ ಕಳಿಸಿದ್ದಾರೆ".
ಮುಂದುವರೆದ ಯತ್ನಾಳ್ ಅವರು, ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರಾಗಿ ಒಪ್ಪಲ್ಲ ಎಂದಿರುವ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಸದ್ಯ ನಾನು ಸೈಲೆಂಟ್, ಜಾರಕಿಹೊಳಿ ವೈಲೆಂಟ್ ಅವರಿಗೆ ಒಂದು ಪಿರಿಯೇಡ್ ಕೊಟ್ಟಿದ್ದೇವೆ. ಅವರ ನಂತರ ಮತ್ತೊಬ್ಬರು ವೈಲೆಂಟ್ ಆಗುತ್ತಾರೆ. ಯತ್ನಾಳ್ ತಣ್ಣಗಾಗಿದ್ದರೆ ಅಂತ ಹೇಳುವ ಬದಲಿಗೆ ಬರ್ಪ್ ಆಗಿದ್ದಾರೆ ಅಂತ ಬರೆಯಿರಿ. ನನ್ನಲ್ಲಿರುವ ಹುರುಪನ್ನು ನೋಡಿಯಾದರೂ ಬರೆಯಿರಿ. 35 ವರ್ಷದ ರಾಜಕೀಯ ಜೀವನವಿದೆ. ಕೆಟ್ಟ ಕಾಲದಲ್ಲಿ ಏನಾದರೂ ಆಗಿರಬಹುದು. ಆದರೆ ಯತ್ನಾಳ್ರನ್ನು ಹೊರಗೆ ಹಾಕುತ್ತೇನೆ ಅನ್ನುವುದು ಮೂರ್ಖತನ. ನನ್ನ ವಿರುದ್ಧ ಶಿಸ್ತು ಕ್ರಮದ ಪ್ರಶ್ನೆಯೇ ಇಲ್ಲ. ಒಳ್ಳೆಯ ಕೆಲಸ ಮಾಡಲು ಹೇಳಿದ್ದಾರೆ. ಮುಂದೆ ಒಳ್ಳೆಯ ಭವಿಷ್ಯವಿದೆ ಎಂದೂ ಹೇಳಿದ್ದಾರೆ" ಎಂದು ತಿಳಿಸಿದರು.
"ಸರ್ಕಾರ ನಮ್ಮ ಮೇಲೆ ದಬ್ಬಾಳಿಕೆ, ಗುಂಡು ಹಾರಿಸುವುದು ಮಾಡಿದರೆ 24 ಗಂಟೆಗಳಲ್ಲಿ ಸರ್ಕಾರ ರಾಜ್ಯದಲ್ಲಿ ಇರುವುದಿಲ್ಲ. ನಾನು ಗಂಭೀರವಾಗಿ ಎಚ್ಚರಿಕೆ ಕೊಡುತ್ತಿದ್ದೇನೆ. ಕಾಂಗ್ರೆಸ್ನಲ್ಲಿರುವಂತಹ ನಮ್ಮ ಸಮಾಜದ ಶಾಸಕರಿಗೆ ಅಗ್ನಿ ಪರೀಕ್ಷೆ ಇದೆ. ಚಳಿಗಾಳ ಅಧಿವೇಶನದಲ್ಲಿ ವಕ್ಫ್ ವಿಚಾರ ಹಾಗೂ ಪಂಚಮಸಾಲಿ ಮೀಸಲಾತಿ 2ಎ ಅಥವಾ 2ಡಿ ಕೊಡಬೇಕು, ಕುರುಬ ಸಮಾಜ ಎಸ್.ಟಿ. ಯಲ್ಲಿ ಸೇರಿಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡುತ್ತೇನೆ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಒಂದುವರೆ ಲಕ್ಷ ಕೋಟಿ ಮೀಸಲಿಡಲಾಗಿದೆ. ಸ್ಪೀಕರ್ಗೆ ಈಗಾಗಲೇ ನಾನು ಪತ್ರ ಬರೆದಿದ್ದೇನೆ. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗಬೇಕು. ಪ್ರತಿ ಬಾರಿ ವಿಧಾನ ಮಂಡಲದಲ್ಲಿ ಉತ್ತರ ಕರ್ನಾಟಕದ ಚರ್ಚೆ ಕೊನೆಗೆ ಇಡುತ್ತಾರೆ. ಆ ವೇಳೆ ಯಾವ ಶಾಸಕರು ಕೂಡ ಇರುವುದಿಲ್ಲ".
"ನಮಗೆ ಒಮ್ಮೊಮ್ಮೆ ಕೋರಂ ಆಗುವಷ್ಟು ಶಾಸಕರು ಇರುವುದಿಲ್ಲ. ಉತ್ತರ ಕರ್ನಾಟಕದ ಬಗ್ಗೆ ಕೇವಲ ನಾಮಕಾವಸ್ಥೆ ಚರ್ಚೆ ಆಗುತ್ತಿದೆ. ಸದನ ಆರಂಭವಾಗುತ್ತಿದ್ದಂತೆಯೇ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗಬೇಕು. ಆ ಮೇಲೆ ಬೇರೆ ವಿಷಯದ ಬಗ್ಗೆ ಚರ್ಚೆ ಆಗಲಿ. ನಾಳೆ ಮತ್ತೆ ಪಂಚಮಸಾಲಿ ಹೋರಾಟದ ಬಗ್ಗೆ ಸಭೆ ಕರೆದಿದ್ದಾರೆ, ಹೋಗುತ್ತೇವೆ. ನಾನು ವಿಧಾನಸಭಾದಲ್ಲಿ ಧ್ವನಿ ಎತ್ತುತ್ತೇನೆ. ಕಾಂಗ್ರೆಸ್ನಲ್ಲಿರುವ ಪಂಚಮಸಾಲಿ ಶಾಸಕರು ಬರಬೇಕು. ಬರದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಮತ ಕೇಳಲು ನಮ್ಮ ಸಮಾಜದ ಮುಂದೆ ಬಂದೇ ಬರ್ತಾರೆ. ಅವಾಗ ನಮ್ಮ ಸಮಾಜದವರು ತಕ್ಕ ಪಾಠ ಕಲಿಸುತ್ತಾರೆ" ಎಂದು ಟಾಂಗ್ ನೀಡಿದರು.
ಬಳಿಕ, ನನ್ನನ್ನು ಚುನಾವಣೆಯಲ್ಲಿ ಸೋಲಿಸುತ್ತೇನೆ ಅನ್ನುವವರು ಡುಪ್ಲಿಕೇಟ್ ಸ್ವಾಮೀಜಿಗಳು ಎನ್ನುತ್ತಾ ಮಠಾಧೀಶರ ವಿರುದ್ಧ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು. "ನನ್ನ ಹೇಳಿಕೆ ಬಗ್ಗೆ ಮಾತನಾಡುತ್ತಿರುವ ಮಠಾದೀಶರು ಮೊದಲು ಸರ್ವಜ್ಞನ ವಚನಗಳನ್ನು ಓದಲಿ. ನಂದಿಯ ಹೆಸರಿನವ, ನೊಂದು ರಾಜ್ಯವನಾಳಿದ, ಬಂಧನಪಟ್ಟು ಭಯಪಟ್ಟು ನೀರಿನೊಳು ಸಂದು ಹೋದನು ಅಂತ ಸರ್ವಜ್ಞರು ಹೇಳಿದ್ದಾರೆ. ಇದರ ಬಗ್ಗೆ ಸಾಕಷ್ಟು ಚರ್ಚೆಯಾಗಲಿ. ನಾನು ಕ್ಷಮೆ ಕೋರುವುದರಿಂದ ಏನು ಆಗಲ್ಲ. ನನ್ನ ನಾಲಿಗೆ ಕತ್ತರಿಸುತ್ತೇನೆ ಅಂತಾರೆ. ನಾಲಿಗೆ ಕತ್ತರಿಸುತ್ತೇನೆ ಅನ್ನುವವರು ಬಸವಣ್ಣನ ಅನುಯಾಯಿಗಳೇ ಅಲ್ಲ. ಬಸವಣ್ಣನ ವಚನ ಹೇಳುವವರು ನಾಲಿಗೆ ಕತ್ತರಿಸುತ್ತೇನೆ, ಬಾಯಿ ಬಂದ್ ಮಾಡುತ್ತೇನೆ ಅಂದರೆ ಹೇಗೆ..? ನನ್ನನ್ನು ಚುನಾಚವಣೆಯಲ್ಲಿ ಸೋಲಿಸುತ್ತೇನೆ ಅನ್ನುವವರು ಡುಪ್ಲಿಕೇಟ್ ಸ್ವಾಮಿಗಳು. ಶ್ಯಾಮನೂರು ಶಿವಶಂಕರಪ್ಪ ಅವರು ಬಸವಣ್ಣನ ಬಗ್ಗೆ ಬಹಳ ಮಾತಾಡುತ್ತಾರೆ. ಆದರೆ ಅವರು ಒಂದಾದರೂ ಬಸವ ಭವನ ಕಟ್ಟಿದ್ದಾರಾ..? ಶಿಕ್ಷಣ ಸಂಸ್ಥೆಗಳಿಗೆ ಬಸವಣ್ಣನ ಹೆಸರು ಇಟ್ಟಿದ್ದಾರಾ" ಎಂದು ಪ್ರಶ್ನಿಸಿದರು.
ಹಾಸನ ಕಾಂಗ್ರೆಸ್ ಸಮಾವೇಶಕ್ಕೆ ಪ್ರತಿಕ್ರಿಯಿಸಿ, "ಹಾಸನದಲ್ಲಿ ನಡೆದದ್ದು ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶ ಅಲ್ಲ, ದುರಾಭಿಮಾನಿ ಸಮಾವೇಶ. ಡಿಕೆಶಿ ಸುಡುಗಾಡ ಬಂಡೆ ಎಂದು ಯತ್ನಾಳ್ ಲೇವಡಿ ಮಾಡಿದರು. ಮೂರು ವರ್ಷ ಸರ್ಕಾರ ಇರುತ್ತದಾ ಇಲ್ಲವಾ ನೋಡೋಣ. ಡಿ.ಕೆ. ಶಿವಕುಮಾರ್ ಏನು ಮಾಡುತ್ತಾರೆ ನೋಡೋಣ. ನಿನ್ನೆ ಎಲ್ಲಾ ಕಡೆ ಸಿದ್ದರಾಮಯ್ಯ ಫೋಟೋನೇ ಇದೆ. ಡಿ.ಕೆ. ಶಿವಕುಮಾರ್ ಫೋಟೋನೇ ಇಲ್ಲ. ಅದನ್ನು ನೋಡಿ ಬಿಟ್ಟರೆ ಅದರಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಅಂತ ಅರ್ಥ ಆಗುತ್ತೆ ಎಂದರು. ಸಿದ್ದು ಹಿಂದೆ ಡಿಕೆಶಿ ಬಂಡೆಯಾಗಿ ನಿಲ್ಲುತ್ತೇನೆ ಎಂಬ ಹೇಳಿಕೆಗೆ ಯತ್ನಾಳ್ ಟಾಂಗ್ ನೀಡಿ, ಕನಕಪುರ ಬಂಡೆ ಹೇಗೆ ಒಡೆಯುತ್ತದೆ ಹಾಗೆ ಒಡೆಯುತ್ತೆ. ಆದರೆ ನಮ್ಮ ಉತ್ತರ ಕರ್ನಾಟಕ ಬಂಡೆ ಒಡೆಯುವುದಿಲ್ಲ. ಅದು ಸುಡುಗಾಡ ಬಂಡೆ" ಎಂದು ಗೇಲಿ ಮಾಡಿದರು.
ಕರ್ನಾಟದಲ್ಲಿ ಮೂರು ಪಾಕಿಸ್ತಾನ ಆಗುವಷ್ಟು ವಕ್ಫ್ ಮಂಡಳಿ ಕ್ಲೇಮ್ ಮಾಡುತ್ತಿದೆ. ಇದರ ವಿರುದ್ಧ ಎರಡನೇ ಹಂತದ ಹೋರಾಟ ಶೀಘ್ರವೇ ಆರಂಭವಾಗಲಿದೆ. ವಕ್ಫ ಬಗ್ಗೆ ಕರ್ನಾಟಕದಲ್ಲಿ ಒಂದೂವರೆ ಲಕ್ಷಕ್ಕಿಂತ ಹೆಚ್ಚು ಎಕರೆ ಭೂಮಿ ಕಬಾಳಿಸುವ ಹುನ್ನಾರ ನಡೆದಿದೆ. ಇದರ ವರದಿ ಕೊಡಲು ನಮ್ಮ ತಂಡದಿಂದ ದೆಹಲಿಗೆ ಹೋಗಿದ್ದೆವು. ಜಂಟಿ ಸಮಿತಿ ಅಧ್ಯಕ್ಷರಾದ ಜಗದಂಬಿಕ ಪಾಲ್ ಎರಡು ಗಂಟೆ ನಮ್ಮ ಜೊತೆಗೆ ಚರ್ಚೆ ಮಾಡಿದರು. ಜಂಟಿ ಸಮಿತಿಯಲ್ಲಿರುವ ಅಧಿಕಾರಿಗಳ ಜೊತೆ ಕೂಡ ಚರ್ಚೆ ಮಾಡಿದ್ದೇವೆ. ನಮ್ಮ ಬ್ಯಾಂಕ್ ಸಮಿತಿ ಚೇರ್ಮನರು ಮತ್ತು ಸದಸ್ಯರುಗಳು ಅಭಿನಂದನೆ ಸಲ್ಲಿಸಿದರು. ದೇಶಕ್ಕೆ ಮಾರಕವಾದ ಕಾನೂನು ಕಾಂಗ್ರೆಸ್ ಸರ್ಕಾರ ತಂದಿದೆ. ಸಂಪೂರ್ಣ ಕಾನೂನು ರದ್ದು ಮಾಡಬೇಕು ಅನ್ನುವುದು ನಮ್ಮ ಆಗ್ರಹವಾಗಿದೆ.
ಈ ಅಧಿವೇಶನದಲ್ಲಿ ಈ ಚರ್ಚೆ ಆಗೋದಿಲ್ಲ, ಬಜೆಟ್ನಲ್ಲಿ ತೆಗೆದುಕೊಳ್ಳುತ್ತೇವೆ ಅಂತ ಹೇಳಿದ್ದಾರೆ. ಎರಡನೇ ಹಂತ, ಮೂರನೇ ಹಂತ ಇಡೀ ಕರ್ನಾಟಕವನ್ನು ಸುತ್ತಬೇಕು. ಚಾಮರಾಜನಗರವರೆಗೆ ನಮ್ಮ ಟೀಮ್ ಪ್ರವಾಸ ಮಾಡುತ್ತದೆ. ರಮೇಶ್ ಜಾರಕಿಹೊಳಿ, ಅರವಿಂದ ನಿಂಬಾವಳಿ, ಅಣ್ಣಾಸಾಬ್ ಜೊಲ್ಲೆ, ಕುಮಾರ್ ಬಂಗಾರಪ್ಪ ಸೇರಿ ಹಲವರು ಇದ್ದಾರೆ. ದಿನದಿಂದ ದಿನಕ್ಕೆ ನಮ್ಮ ತಂಡ ಶಕ್ತಿಯುತವಾಗುತ್ತಿದೆ. ನಾವೆಲ್ಲರೂ ಕೂಡಿ ದೇಶಕ್ಕೆ ಮಾರಕವಾದ ವಕ್ಫ್ ಕಾನೂನನ್ನು ರದ್ದು ಮಾಡಲು ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದರು.
ಎರಡನೇ ಹಂತವನ್ನು ಬರುವ ಸೋಮವಾರ ಹೊಸಪೇಟೆಯಲ್ಲಿ ಆರಂಭ ಮಾಡುತ್ತೇವೆ. ಹಂತ ಹಂತವಾಗಿ ಹೋರಾಟ ನಡೆಯುತ್ತೆ. ಕರ್ನಾಟಕದ ಚಿತ್ರದುರ್ಗ, ದಾವಣಗೆರೆ, ಹಾವೇರಿಗೆ ಹೋಗುತ್ತೇವೆ. ನಂತರ ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ನಗರ, ಗ್ರಾಮೀಣ, ಕೋಲಾರಕ್ಕೆ ನಮ್ಮ ತಂಡ ಹೋಗುತ್ತದೆ. ಇದೆಲ್ಲ ಮುಗಿದ ನಂತರ ಪ್ರಧಾನ ಮಂತ್ರಿಗಳನ್ನು ಕೂಡ ಭೇಟಿಯಾಗಬೇಕು ಅಂತ ನಿರ್ಧಾರ ಮಾಡಿದ್ದೇವೆ. ನಂತರ ದಾವಣಗೆರೆಯಲ್ಲಿ ದೊಡ್ಡ ಸಮಾವೇಶ ಮಾಡಲು ನಿರ್ಧರಿಸಿದ್ದೇವೆ" ಎಂದು ಯತ್ನಾಳ್ ಮಾಹಿತಿ ನೀಡಿದರು.
ಇದನ್ನೂ ಓದಿ: ಬಿಜೆಪಿಯೊಳಗಿನ ಎಲ್ಲ ಗೊಂದಲಗಳಿಗೆ ನಾಳೆ ತೆರೆ: ಬಿ.ಎಸ್.ಯಡಿಯೂರಪ್ಪ