ಮೈಸೂರು: "ನಾನು ಈ ಬಾರಿ ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಯಲ್ಲ. ಕೆಲವರು ಸುಮ್ಮನೆ ನನ್ನ ಹೆಸರನ್ನು ತೇಲಿಬಿಟ್ಟಿದ್ದಾರೆ" ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹಾದೇವಪ್ಪ ತಿಳಿಸಿದರು. ಇದೇ ವೇಳೆ ಮಗ ಸುನಿಲ್ ಬೋಸ್ ಚಾಮರಾಜನಗರದಿಂದ ಲೋಕಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದರು.
ಮೈಸೂರಿನ ಕಲಾಮಂದಿರದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ನನ್ನ ಮಗ ಕಳೆದ ಮೂರು ಚುನಾವಣೆಗಳಿಂದ ಟಿಕೆಟ್ಗಾಗಿ ಪ್ರಯತ್ನಿಸುತ್ತಿದ್ದಾನೆ. ಪಕ್ಷಕ್ಕಾಗಿ ಕೆಲಸ ಮಾಡುತ್ತಿರುವ ಆತ ಟಿಕೆಟ್ ಕೇಳುವುದರಲ್ಲಿ ತಪ್ಪೇನಿದೆ? ಅವನಿಗಿಂತ ಕಿರಿಯರು ಶಾಸಕರಾಗಿದ್ದಾರೆ. ಧೃವನಾರಾಯಣ್ ಅವರ ಮಗನನ್ನು ನಾನೇ ಮುಂದೆ ಅಭ್ಯರ್ಥಿಯ್ನಾಗಿ ಮಾಡಿದ್ದೇನೆ. ಯಾರಾದರೂ ಸ್ವಂತ ಮಗನನ್ನು ಬಿಟ್ಟು, ಬೇರೆಯವರಿಗೆ ಟಿಕೆಟ್ ಕೊಡಿ ಎಂದು ಕೇಳುವುದನ್ನು ನೋಡಿದ್ದೀರಾ? ಕಳಲೆ ಕೇಶವಮೂರ್ತಿ ಅವರಿಗೆ ನಮ್ಮ ಪಕ್ಷದ ಸದಸ್ಯತ್ವವೇ ಇರಲಿಲ್ಲ, ಅವರನ್ನು ಗೆಲ್ಲಿಸಲಿಲ್ವಾ?" ಎಂದು ಹೇಳಿದರು.
ವೈಯಕ್ತಿಕ ವಿಚಾರದಲ್ಲಿ ರಾಜಕಾರಣ ಬಿಜೆಪಿಗೆ ಶೋಭೆಯಲ್ಲ: ಮಂಡ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಬಂದ್ಗೆ ಕರೆ ನೀಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, "ಜನರ ವೈಯಕ್ತಿಕ ವಿಚಾರಗಳನ್ನು ರಾಜಕಾರಣಗೊಳಿಸುವುದು ಬಿಜೆಪಿಯವರಿಗೆ ಶೋಭೆ ತರುವಂಥದ್ದಲ್ಲ. ಮಂಡ್ಯ ಜಿಲ್ಲೆ ಪ್ರಗತಿಪರವಾದ ಜಿಲ್ಲೆ. ಕಾಂಗ್ರೆಸ್ ಪಕ್ಷ ಯಾವಾಗಲೂ ಸಂವಿಧಾನದ ಆಶಯಗಳನ್ನು ಹೊಂದಿದೆ. ಮುಗ್ಧ ಜನರನ್ನು ಎತ್ತಿಕಟ್ಟುವುದಿಲ್ಲ, ನಮ್ಮದು ಅಭಿವೃದ್ಧಿ ರಾಜಕಾರಣ ಮಾತ್ರ. ಮಂಡ್ಯ ಜನ ಪ್ರಬುದ್ಧರು, ಬಿಜೆಪಿಯ ಕುಚೋದ್ಯಗಳಿಗೆ ಅವಕಾಶ ನೀಡುವುದಿಲ್ಲ" ಎಂದರು.
"ಲೋಕಸಭಾ ಚುನಾವಣೆಗೆ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಪಕ್ಷದ ಹೈಕಮಾಂಡ್ ವಿಭಾಗವಾರು, ಕ್ಷೇತ್ರವಾರು ಉಸ್ತುವಾರಿಗಳನ್ನು ನೇಮಕ ಮಾಡಿ ವರದಿ ತರಿಸಿಕೊಳ್ಳುತ್ತಿದೆ. ಗೆಲ್ಲುವ ಅಭ್ಯರ್ಥಿಗಳನ್ನು ಪಕ್ಷ ಚುನಾವಣೆಗೆ ನಿಲ್ಲಿಸುತ್ತದೆ" ಎಂದು ಹೇಳಿದರು.
ಸಚಿವ ಕೆ.ಎಚ್.ಮುನಿಯಪ್ಪ ಅವರ ಮನೆಯಲ್ಲಿ ಕೆಲವು ಸಚಿವರು ಊಟಕ್ಕೆ ಸೇರಿದ್ದರಲ್ಲಾ ಎಂಬ ಮಾಧ್ಯಮದವರ ಪ್ರಶ್ನೆಗೆ, "ನಿನ್ನೆ ಮುನಿಯಪ್ಪ ಮನೆಯಲ್ಲಿ ಸಚಿವರನ್ನು ಊಟಕ್ಕೆ ಕರೆದಿದ್ದರು, ಹಾಗಾಗಿ ಹೋಗಿದ್ದಾರೆ. ಇದಕ್ಕೆಲ್ಲಾ ಬಣ್ಣ ಹಚ್ಚುವುದು ಸರಿಯಲ್ಲ. ಆಗಾಗ ಒಂದು ಕಡೆ ಊಟ ಮಾಡಲು ಸೇರುತ್ತಿರುತ್ತೇವೆ, ನನ್ನನ್ನು ಕರೆದರೆ ನಾನು ಹೋಗುತ್ತೆನೆ" ಎಂದು ಹೇಳಿಕೆ ನೀಡಿದರು.
ಸುತ್ತೂರು ಮಠಕ್ಕೆ ಸಿಎಂ ಮಾಂಸ ತಿಂದು ಹೋದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, "ಬಿಜೆಪಿಯವರು ಸಿಎಂಗೆ ಮಾಂಸ ತಂದು ಕೊಟ್ಟಿದ್ರಾ? ಇದೆಲ್ಲಾ ಕೀಳುಮಟ್ಟದ ರಾಜಕಾರಣ. ಏನು ತಿನ್ನುಬೇಕು, ತಿನ್ನಬಾರದು ಎಂಬುದನ್ನು ಇವರನ್ನು ಕೇಳಿ ತಿನ್ನಬೇಕಾ? ಜನರ ಭಾವನೆಗಳನ್ನು ಕೆರಳಿಸುವುದು ಬಿಟ್ಟು ಜನರಿಗೆ ಒಳ್ಳೆಯ ಕೆಲಸಗಳನ್ನು ಮಾಡಬೇಕು" ಎಂದರು.
ಬಿಜೆಪಿಯವರು ನಿಯಮಗಳನ್ನು ಗಾಳಿಗೆ ತೂರಿದ್ದಾರೆ: ಕೇಂದ್ರ ಸರ್ಕಾರ ಅನುದಾನ ನೀಡಿರುವ ವಿಚಾರವಾಗಿ ಶ್ವೇತಪತ್ರ ಬಿಡುಗಡೆ ಮಾಡಿದೆಯಲ್ಲಾ? ಎಂಬ ಪ್ರಶ್ನೆಗೆ ಉತ್ತರಿಸಿ, "ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಬರಬೇಕಾಗಿರುವ ಜಿಎಸ್ಟಿ ಹಣವನ್ನು ಕೊಟ್ಟಿಲ್ಲ. ಹಾಗಾಗಿ ನಾವು ದೆಹಲಿಯಲ್ಲಿ ಪ್ರತಿಭಟನೆ ಸಹ ಮಾಡಿದ್ದೇವೆ. ಎಷ್ಟು ಹಣ ಕೊಡಬೇಕು ಎಂಬುದರ ಬಗ್ಗೆ ಸಿಎಂ ಅಂಕಿಅಂಶಗಳ ಸಮೇತ ತಿಳಿಸಿದ್ದಾರೆ. 15ನೇ ಹಣಕಾಸು ಆಯೋಗವನ್ನು ನೋಡಿದರೆ ನಿಮಗೆ ಗೊತ್ತಾಗುತ್ತದೆ. ಕೊಟ್ಟಿದ್ದಾರೊ, ಇಲ್ಲವೋ ಎಂಬುದು ಗೊತ್ತಾಗುತ್ತದೆ. ಹಣಕಾಸು ಆಯೋಗದವರು 1.5% ಹಣ ಕಡಿತ ಸಹ ಮಾಡಿದ್ದಾರೆ. ಆದರೂ ಅವರು ಹೇಳಿರುವಷ್ಟನ್ನು ಕೊಟ್ಟಿಲ್ಲ. ನ್ಯಾಯ ಸಮ್ಮತವಾದ ನಮ್ಮ ರಾಜ್ಯದ ತೆರಿಗೆ ಹಣವನ್ನು ಕೊಡಿ ಎಂದು ಕೇಳುತ್ತಿದ್ದೇವೆ. ಮೇಕೆದಾಟು ಯೋಜನೆ, ಮಹಾದಾಯಿ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಅನುಮತಿ ಕೊಡುತ್ತಿಲ್ಲ. ಫೆಡರಲ್ ಸಿಸ್ಟಮ್ ಅನ್ನು ನಾವೇ ಒಪ್ಪಿಕೊಂಡಿದ್ದೇವೆ. ಆದರೆ ಬಿಜೆಪಿಯವರು ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಅದಕ್ಕಾಗಿಯೇ ನಾವು ಸಂವಿಧಾನ ಜಾಗೃತಿ ಮೂಡಿಸುತ್ತಿದ್ದೇವೆ" ಎಂದು ಹೇಳಿದರು.
ಜನರನ್ನು ದಿಕ್ಕು ತಪ್ಪಿಸುತ್ತಿರುವ ಬಿಜೆಪಿ: "ನಾವು ದೇಶದ ಸಂಸತ್ ಭವನ ಸೇರಿದಂತೆ ಎಲ್ಲಾ ಕಡೆ ಎಲ್ಲರನ್ನೊಳಗೊಳ್ಳುವ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದೇವೆ. ಆದರೆ ಬಿಜೆಪಿಯವರು ಆ ಬಾವುಟ ಹಾರಿಸಿ, ಈ ಬಾವುಟ ಹಾರಿಸಿ ಎಂದು ರಾಜಕಾರಣ ಮಾಡುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಇದು ದೇಶದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ" ಎಂದರು.
29 ರೂಪಾಯಿಗೆ ಜನರಿಗೆ ಅಕ್ಕಿ ಕೊಡುವ ಕೇಂದ್ರ ಸರ್ಕಾರದ ಹೇಳಿಕೆಗೆ ಪ್ರತಿಕ್ರಿಯಿಸಿ, "ನಮ್ಮ ಪಕ್ಷ ಯಾರೂ ಹಸಿವಿನಿಂದ ಮಲಗಬಾರದು ಎಂದು ಬಡವರಿಗೆ ಅಕ್ಕಿ ಕೊಡುತ್ತೇವೆಂದು ಘೋಷಣೆ ಮಾಡಿದಾಗ ಟೀಕೆ ಮಾಡಿದರು. ಈಗ ಚುನಾವಣೆ ಬರುತ್ತಿದೆ, ಜನ ನಮ್ಮ ಪಕ್ಷದ ಪರವಾಗಿ ಇದ್ದಾರೆ ಎಂಬುದು ಗೊತ್ತಾಗಿದೆ. ಹಾಗಾಗಿ ಈಗ ಬಿಜೆಪಿಯವರು ನಾವು ಕೂಡ ಕೊಡುತ್ತೇವೆ ಎಂದು ಹೊರಟಿದ್ದಾರೆ" ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಬಿಜೆಪಿ ಎಂದರೆ ಗೊಂದಲ ಸೃಷ್ಟಿಸುವವರು: ಎಂಎಲ್ಸಿ ಹೆಚ್.ವಿಶ್ವನಾಥ್