ಶಿವಮೊಗ್ಗ: ಗಂಡ - ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಶಿಕಾರಿಪುರದಲ್ಲಿ ನಡೆದಿದೆ. ಪಟ್ಟಣದ ರಾಘವೇಂದ್ರ ಬಡಾವಣೆ ನಿವಾಸಿ ನಾಗರಾಜ್(45) ತನ್ನ ಹೆಂಡತಿ ರೇಣುಕಾ(40)ಳನ್ನು ಬುಧವಾರ ಬೆಳಗ್ಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇವರಿಬ್ಬರ ಮದುವೆಯಾಗಿ 15 ವರ್ಷಗಳಾಗಿದ್ದು, ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇಂದು ಬೆಳಗ್ಗೆ ಕೂಡ ಜಗಳ ನಡೆದಿತ್ತು. ಹೊಡೆದಾಟ ಅತಿರೇಕಕ್ಕೆ ಹೋಗಿದ್ದು, ಪತ್ನಿ ಮನೆಯಿಂದ ಹೊರ ಬಂದಾಗ ಪತಿ ಮಚ್ಚಿನಲ್ಲಿ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದು, ದಂಪತಿಯ ಚೀರಾಟ - ಕೂಗಾಟ ಕೇಳಿ ಸ್ಥಳೀಯರು ಪೊಲಿಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಶಿಕಾರಿಪುರ ಟೌನ್ ಪೊಲೀಸರು ಪರಿಶೀಲಿಸಿದ ಬಳಿಕ ಪತಿ ನಾಗರಾಜನನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯ ಪ್ರಭಾರ ಪಿಐ ಎಸ್.ಆರ್.ಪಾಟೀಲ್ ಅವರು ಪ್ರಕರಣದ ತನಿಖೆ ಕೈಗೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಮ್ಮ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಗೃಹಿಣಿಯನ್ನು ಮಕ್ಕಳೆದುರೇ ಚೂರಿಯಿಂದ ಇರಿದು, ಸಾಯದೇ ಇದ್ದಾಗ ಕೆರೆಗೆ ಎಸೆದ ಪ್ರಿಯಕರ!