ದಾವಣಗೆರೆ : ಅವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟು ಒಂದೂವರೆ ವರ್ಷ ಕಳೆದಿತ್ತು. ದಂಪತಿಗೆ ಮುದ್ದಾದ ಮಗು ಕೂಡಾ ಇತ್ತು. ಆದರೆ ಕುಡಿತಕ್ಕೆ ಜೋತು ಬಿದ್ದಿದ್ದ ಪತಿರಾಯ ಮನೆಯಲ್ಲಿ ಪತ್ನಿಯೊಂದಿಗೆ ನಿತ್ಯ ಜಗಳವಾಡ್ತಿದ್ದ. ಇಡೀ ಊರಿಗೆ ಊರೇ ಗ್ರಾಮ ದೇವತೆಯ ಹಬ್ಬ ಆಚರಣೆ ಮಾಡ್ತಿದ್ರೆ ಇತ್ತ ಆ ಪಾಪಿ ಪತಿರಾಯ ಕುಡಿದ ಮತ್ತಿನಲ್ಲಿ ತನ್ನ ಪತ್ನಿಯ ಕಥೆ ಮುಗಿಸಿದ್ದಾನೆ. ಅಲ್ಲದೇ ಪತ್ನಿ ಸತ್ತಿದ್ದಾಳೆ ಎಂದು ಖಾತರಿಪಡಿಸಿಕೊಂಡು ಮನೆಗೆ ಬೀಗಾ ಹಾಕಿ ಕಾಲ್ಕಿತ್ತಿದ್ದ ಪತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಹೌದು, ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ನಡೆಯಬಾರದ್ದು ನಡೆದು ಹೋಗಿದೆ. ಇಡೀ ಗ್ರಾಮದಲ್ಲಿ ಊರಮ್ಮನ ಹಬ್ಬವನ್ನು ಇಡೀ ಗ್ರಾಮಸ್ಥರು ಆಚರಿಸುತ್ತಿದ್ರೆ ಇತ್ತ ಪತಿ ಕುಡಿದ ಅಮಲಿನಲ್ಲಿ ಪತ್ನಿಯನ್ನು ಹೊಡೆದು ಕೊಲೆ ಮಾಡಿದ್ದಾನೆ. ಕೈಯಿಂದ ಪತ್ನಿ ಮೇಲೆ ಹಲ್ಲೆ ಮಾಡಿದ ಪರಿಣಾಮ ಪತ್ನಿಯ ಕಿವಿಯಲ್ಲಿ ರಕ್ತ ಸ್ರಾವವಾಗಿ ಸ್ಥಳದಲ್ಲೇ ಆಕೆ ಕೊನೆಯುಸಿರೆಳೆದಿದ್ದಾರೆ. ಅರ್ಪಿತಾ (24) ಕೊಲೆಯಾದ ಪತ್ನಿ. ಹನಮಂತ (28) ಕೊಲೆ ಮಾಡಿದ ಆರೋಪಿ ಪತಿ. ಗ್ರಾಮದ ದೇವಿ ಜಾತ್ರೆಯ ದಿನ ಈ ಕೊಲೆ ನಡೆದು ಹೋಗಿದೆ.
ಆಗಿದ್ದೇನು?: ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದು ಬಂದ ಆರೋಪಿ ಪತಿ ಹನುಮಂತ ಮೃತ ಪತ್ನಿ ಅರ್ಪಿತಳೊಂದಿಗೆ ಖ್ಯಾತೆ ತೆಗೆದಿದ್ದಾನೆ. ಕುಡಿದ ಅಮಲಿನಲ್ಲಿ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಬಲವಾಗಿ ಪತ್ನಿಯ ಕಪಾಳಕ್ಕೆ ಹೊಡೆದ ಪರಿಣಾಮ ಅರ್ಪಿತಾ ಕೊನೆಯುಸಿರೆಳೆದಿದ್ದಾಳೆ. ಘಟನೆ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ದಾವಣಗೆರೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತಳ ಸಂಬಂಧಿಕರು ಹೇಳಿದಿಷ್ಟು: "ಅವರಿಬ್ಬರ ನಡುವೆ ಏನ್ ಆಗಿದೆ ನಮಗೆ ಗೊತ್ತಿಲ್ಲ. ಮೃತ ಅರ್ಪಿತಾಳಿಗೆ ಪೋಷಕರಿಲ್ಲದ್ದರಿಂದ ನಮ್ಮ ತಮ್ಮ ಸಾಕ್ತಿದ್ದ. ಹನುಮಂತನನ್ನು ಬಿಟ್ಟು ಯಾರನ್ನು ಮದುವೆಯಾಗಲ್ಲ ಎಂದು ಮೃತ ಅರ್ಪಿತಾ ಹಠ ಹಿಡಿದ ಬೆನ್ನಲ್ಲೇ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ಬಳಿಕ ಗಲಾಟೆ ಸರ್ವೆ ಸಾಮಾನ್ಯ ಆಗಿತ್ತು. ರಾಜಿ ಪಂಚಾಯಿತಿ ಕೂಡ ಮಾಡಿದ್ವಿ. ಆದ್ರೂ ದುರಳ ಪತಿ ಹೊಡೆದು ಈ ರೀತಿ ಮಾಡಿದ್ದಾನೆ. ಮದುವೆಯಾಗಿ ಒಂದೂವರೆ ವರ್ಷ ಆಗಿದೆ ಅಷ್ಟೇ. ಅವನಿಗೆ ಶಿಕ್ಷೆ ಆಗ್ಬೇಕು. ನಮಗೆ ನ್ಯಾಯ ಸಿಗ್ಬೇಕು. ಇಡೀ ಊರಿಗೆ ಊರೇ ಹಬ್ಬ ಮಾಡ್ತಿದ್ರೆ, ಇತ್ತಾ ಕೊಲೆ ಮಾಡಿ ಮನೆಗೆ ಬೀಗ ಹಾಕಿಕೊಂಡು ಕಾಲ್ಕಿತ್ತಿದ್ದಾರೆ'' ಎಂದು ಮೃತಳ ದೊಡ್ಡಮ್ಮ ಮಂಜಮ್ಮ ಅಳಲು ತೋಡಿಕೊಂಡರು.
ಗ್ರಾಮಾಂತರ ಠಾಣೆಯ ಪಿಐ ಹೇಳಿದ್ದಿಷ್ಟು : ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಗ್ರಾಮಾಂತರ ಠಾಣೆಯ ಪಿಐ ಕಿರಣ್ ಕುಮಾರ್ ಅವರು ದೂರವಾಣಿಯಲ್ಲಿ ಪ್ರತಿಕ್ರಿಯಿಸಿ, ಆರೋಪಿ ಹನುಮಂತ, ಮೃತ ಅರ್ಪಿತಾಳ ನಡುವೆ ದಿನನಿತ್ಯ ಗಲಾಟೆ ಆಗ್ತಿತ್ತು. ಕಳೆದ ದಿನ ಹನುಮಂತ ಕುಡಿದು ಜಗಳ ತೆಗೆದಿದ್ದಾನೆ. ಈ ವೇಳೆ ಕುಡಿದ ಮತ್ತಿನಲ್ಲಿ ಪತ್ನಿ ಅರ್ಪಿತಾಳ ಕಪಾಳಕ್ಕೆ ಬಲವಾಗಿ ಹೊಡೆದಿದ್ದಾನೆ. ಹಲ್ಲೆ ಮಾಡಿದ ಪರಿಣಾಮ ಪತ್ನಿ ಅರ್ಪಿತಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಹನುಮಂತನನ್ನ ಬಂಧಿಸಿದ್ದೇವೆ. ಪ್ರಕರಣ ದಾಖಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಅಥಣಿಯಲ್ಲಿ ನವ ದಂಪತಿ ಕೊಲೆ ಪ್ರಕರಣ; ಪೊಲೀಸರು ಹೇಳಿದ್ದೇನು?