ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀಕಂಠೇಶ್ವರನಗರದ ಮನೆಯೊಂದರಲ್ಲಿ ನಡೆದ ಗೃಹಿಣಿ ಅನುಮಾನಾಸ್ಪದ ಸಾವು ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಮಹಿಳೆಯದ್ದು ಆತ್ಮಹತ್ಯೆಯಲ್ಲ, ಪತಿಯೇ ಸುಪಾರಿ ನೀಡಿ ಕೊಲೆ ಮಾಡಿಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ಪತ್ನಿ ಹೇಮಲತಾ ಹತ್ಯೆಗೆ ಸುಪಾರಿ ನೀಡಿದ ಆರೋಪದಡಿ ಪತಿ ಶಿವಶಂಕರ್ ಹಾಗೂ ಈತನ ಸ್ನೇಹಿತ ಕೊಲೆ ಆರೋಪಿ, ನಗರದ ಹುಣಸಮಾರನಹಳ್ಳಿಯ ನಿವಾಸಿ ವಿನಯ್ ಎಂಬವನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ವಿನಯ್ ಈ ಹಿಂದೆ ತನ್ನ ಪತ್ನಿಯ ಶೀಲ ಶಂಕಿಸಿ ಕೊಲೆಗೈದ ಆರೋಪದಡಿ ಜೈಲಿಗೆ ಹೋಗಿ ಬಂದಿರುವುದು ಬಹಿರಂಗವಾಗಿದೆ.
ಪೊಲೀಸರಿಗೆ ಮೂಡಿತ್ತು ಅನುಮಾನ: ಫೆಬ್ರವರಿ 5ರಂದು ಪ್ರೇಮಲತಾ ಎಂಬವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರಿಗೆ ಪತಿ ಶಿವಶಂಕರ್ ಮಾಹಿತಿ ನೀಡಿದ್ದ. ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಸೇರಿದಂತೆ ಸಿನ್ ಆಫ್ ಕ್ರೈಂ ಅಧಿಕಾರಿಗಳು ತೆರಳಿ ಪರಿಶೀಲಿಸಿದ್ದರು. ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆಯಲ್ಲ ಎಂಬುದು ರುಜುವಾತಾಗಿತ್ತು. ಉದ್ದೇಶಪೂರ್ವಕವಾಗಿ ಹತ್ಯೆ ಮಾಡಲಾಗಿದೆ ಎಂಬುದನ್ನು ಪೊಲೀಸರು ಕಂಡುಕೊಂಡಿದ್ದರು.
ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಿವಶಂಕರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಎರಡು ದಿನವಾದರೂ ಸುಪಾರಿ ಹತ್ಯೆ ಸಂಗತಿ ಬಗ್ಗೆ ಬಾಯ್ಬಿಟ್ಟಿರಲಿಲ್ಲ. ಮನೆಯನ್ನು ಪರಿಶೀಲಿಸಿದಾಗ ಬೆಡ್ ರೂಮ್ ಸೇರಿದಂತೆ ಮೂಲೆಮೂಲೆಯಲ್ಲಿ ಸಿಸಿಟಿವಿ ಹಾಕಿಕೊಂಡಿದ್ದ. ಸಂಪೂರ್ಣವಾಗಿ ಪರಿಶೀಲನೆ ಜೊತೆಗೆ, ಏರಿಯಾ ಸುತ್ತಮುತ್ತಲಿನ ಸುಮಾರು 200 ಸಿಸಿಟಿವಿ ಕ್ಯಾಮರಾಗಳನ್ನು ಶೋಧಿಸಿದಾಗ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿ ಬಗ್ಗೆ ಶಿವಶಂಕರ್ಗೆ ಪೊಲೀಸರು ಪ್ರಶ್ನಿಸಿದ್ದಾರೆ. ಆಗ ಆತ ತನ್ನ ಸ್ನೇಹಿತ ವಿನಯ್ ಎಂದು ಒಪ್ಪಿಕೊಂಡಿದ್ದ. ಅದರ ಮೇರೆಗೆ ವಿನಯ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಗೆ ಸ್ನೇಹಿತ ಶಿವಶಂಕರ್ ಸುಪಾರಿ ನೀಡಿರುವುದನ್ನು ಬಾಯ್ಬಿಟ್ಟಿದ್ದಾನೆ.
ಪತ್ನಿ ಹತ್ಯೆಗೆ ಪತಿ ಸುಪಾರಿ ನೀಡಿದ್ಯಾಕೆ?: ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಪ್ರೇಮಲತಾ ಮೇಲೆ ಶಿವಶಂಕರ್ ಅನುಮಾನ ಹೊಂದಿದ್ದ. ಶೀಲ ಶಂಕಿಸಿ ಹೆಂಡ್ತಿಯ ಚಲನವಲನ ಅರಿಯಲು ಮನೆಯೊಳಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿಕೊಂಡಿದ್ದ. ಆಕೆಯನ್ನು ಸಾಯಿಸಲು ಮಾಟ-ಮಂತ್ರವನ್ನೂ ಮಾಡಿಸಿದ್ದ. ಅದು ಪ್ರಯೋಜನವಾಗದೆ ಸ್ವೀಟ್ನಲ್ಲಿ ಮರ್ಕ್ಯೂರಿ ಬೆರೆಸಿ ನೀಡಿದ್ದ. ಆದರೂ ಪತ್ನಿ ಸಾಯದ್ದರಿಂದ ರೋಸಿ ಹೋಗಿದ್ದ. ಬಳಿಕ ನೇರವಾಗಿ ಹತ್ಯೆ ಮಾಡುವಷ್ಟು ಧೈರ್ಯ ಇಲ್ಲದೆ, ಸ್ನೇಹಿತ ವಿನಯ್ ನೆರವು ಪಡೆದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ಐದು ವರ್ಷಗಳಿಂದ ಐಡಿಎಫ್ಸಿ ಬ್ಯಾಂಕ್ವೊಂದರಲ್ಲಿ ಇಬ್ಬರೂ ಕೆಲಸ ಮಾಡುತ್ತಿದ್ದರಿಂದ ಒಂದೆರಡು ಬಾರಿ ಶಿವಶಂಕರ್ನ ಮನೆಗೆ ವಿನಯ್ ಬಂದು ಹೋಗಿದ್ದ. ಪತ್ನಿಯನ್ನು ಸಾಯಿಸಲು 1 ಲಕ್ಷ ರೂ. ಸುಪಾರಿ ನೀಡಿದ್ದ ಶಿವಶಂಕರ್, ಕೊಲೆಯಾಗುವ ದಿನ ತಾನು ಮನೆಯಿಂದ ಹೊರಹೋಗಿದ್ದ. ಅಲ್ಲದೆ, ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಆಫ್ ಮಾಡಿದ್ದ. ಪೂರ್ವನಿಯೋಜಿತವಾದಂತೆ ಫೆಬ್ರವರಿ 5ರಂದು ಮನೆಗೆ ಬಂದ ವಿನಯ್, ಪ್ರೇಮಲತಾ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಬಳಿಕ ಶವವನ್ನು ವೇಲಿನಿಂದ ಕಿಟಕಿಗೆ ಕಟ್ಟಿ, ಆತ್ಮಹತ್ಯೆ ಎಂಬಂತೆ ಬಿಂಬಿಸಲು ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಂದುಕೊಂಡಂತೆ ಪತ್ನಿ ಕೊಲೆಯಾಗಿರುವುದು ಖಚಿತವಾಗುತ್ತಿದ್ದಂತೆ ಮನೆಗೆ ಬಂದ ಶಿವಶಂಕರ್, ಪೊಲೀಸರಿಗೆ ಮಾಹಿತಿ ನೀಡಿ ಹೈಡ್ರಾಮಾ ಮಾಡಿದ್ದ. ಪ್ರೇಮಲತಾ ಹತ್ಯೆ ಆರೋಪದಡಿ ವಿನಯ್ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆತ 2022ರಲ್ಲಿ ತುಮಕೂರಿನ ತುರುವೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಮಾಯಸಂದ್ರ ಕೆರೆಗೆ ಪತ್ನಿ ದರ್ಶಿನಿಯನ್ನು ತಳ್ಳಿ ಕೊಲೆ ಮಾಡಿದ್ದು, ಬಳಿಕ ಜೈಲು ಶಿಕ್ಷೆ ಅನುಭವಿಸಿದ್ದ ಎಂಬುದು ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಅಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಹೊಸಕೋಟೆಯಲ್ಲಿ ಬಾಲಕಿ ಕೊಲೆಗೈದ ದುರುಳ