ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನಡುರಸ್ತೆಯಲ್ಲೇ ಪತ್ನಿಗೆ ಚಾಕು ಇರಿದು ಹತ್ಯೆಗೈದಿದ್ದ ಪತಿಯನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೆಲ್ವಿನ್ ಫ್ರಾನ್ಸಿಸ್ ಬಂಧಿತ ಆರೋಪಿ. ಮೇ 2 ರಂದು ಮಧ್ಯಾಹ್ನ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಿಂದೂ (28) ಎಂಬ ಮಹಿಳೆಯ ಕೊಲೆ ನಡೆದಿತ್ತು.
12 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಹಿಂದೂ ಹಾಗೂ ಮೆಲ್ವಿನ್ ಫ್ರಾನ್ಸಿಸ್ ದಂಪತಿಗೆ ಇಬ್ಬರು ಮಕ್ಕಳಿದ್ದು, ಕೋರಮಂಗಲದ 6ನೇ ಬ್ಲಾಕ್ನಲ್ಲಿ ವಾಸವಾಗಿದ್ದರು. ದಂಪತಿಯ ಪೈಕಿ ಗಂಡ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದರೆ, ಹೆಂಡತಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. 5 ತಿಂಗಳ ಹಿಂದೆ ದಂಪತಿಯ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾದಾಗ ಮುನಿಸಿಕೊಂಡಿದ್ದ ಹಿಂದೂ ಇಬ್ಬರು ಮಕ್ಕಳೊಂದಿಗೆ ಆಸ್ಟಿನ್ ಟೌನ್‌ನಲ್ಲಿರುವ ತಾಯಿ ಮನೆಗೆ ತೆರಳಿ ಅಲ್ಲಿಯೇ ವಾಸವಾಗಿದ್ದಳು.
ಗಂಡನ ಮೇಲೆ ಬೇಸತ್ತಿದ್ದ ಹಿಂದೂ ಮೇ 2 ರಂದು ಕೋರಮಂಗಲ ಪೊಲೀಸ್ ಠಾಣೆಗೆ ತೆರಳಿ ಗಂಡನ ವಿರುದ್ಧ ದೂರು ನೀಡಿದ್ದಳು. ದೂರಿನ ಅನ್ವಯ ಪೊಲೀಸರು ಮೆಲ್ವಿನ್ನನ್ನು ಠಾಣೆಗೆ ಬರುವಂತೆ ತಿಳಿಸಿದ್ದರು. ಇದರಂತೆ ಠಾಣೆ ಸಮೀಪ ಬಳಿ ಬಂದಿದ್ದ ಮೆಲ್ವಿನ್, ದೂರು ನೀಡಿ ಹೊರಬಂದಿದ್ದ ಪತ್ನಿಯನ್ನು ಹಿಂಬಾಲಿಸಿಕೊಂಡು ಹೋಗಿ, ಆಕೆಗೆ ಚಾಕುವಿನಿಂದ ಹಲವು ಬಾರಿ ಇರಿದು ಹತ್ಯೆಗೈದು ಪರಾರಿಯಾಗಿದ್ದ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕೋರಮಂಗಲ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಡಿಸಿಪಿ ಕಚೇರಿ ಕೂಗಳತೆ ದೂರದಲ್ಲೇ ಪತ್ನಿ ಹತ್ಯೆಗೈದ ಪತಿ - Husband Kills Wife