ಬೆಂಗಳೂರು: ನಿರ್ಜನ ಪ್ರದೇಶದಲ್ಲಿ ಪತ್ನಿಯನ್ನು ಹತ್ಯೆಗೈದು ಸ್ಥಳದಿಂದ ಕಾಲ್ಕಿತ್ತ ಆರೋಪಿ ಪತಿಯನ್ನು ಕೆಂಗೇರಿ ಠಾಣಾ ಪೊಲೀಸರು ಸೆರೆ ಹಿಡಿದಿದ್ದಾರೆ. ಕಲ್ಲಿನಿಂದ ಜಜ್ಜಿ ಗೌರಿ (30) ಎಂಬಾಕೆಯನ್ನು ಹತ್ಯೆಗೈದಿದ್ದ ನಾಗೇಶ್ (32) ಎಂಬಾತನನ್ನು ಬಂಧಿಸಲಾಗಿದೆ. ಮಂಗಳವಾರ ರಾತ್ರಿ ಜಟ್ಟಿಗನಹಳ್ಳಿಯ ನಿರ್ಜನ ಪ್ರದೇಶದಲ್ಲಿ ಘಟನೆ ನಡೆದಿತ್ತು.
7-8 ವರ್ಷಗಳ ಹಿಂದೆ ನಾಗೇಶ್ ಹಾಗೂ ಗೌರಿಯ ಮದುವೆಯಾಗಿತ್ತು. ಮೊದಲ ಗಂಡನಿಂದ ದೂರವಾಗಿದ್ದ ಗೌರಿಯನ್ನು ವರಿಸಿದ್ದ ನಾಗೇಶ್, ಬೆಂಗಳೂರಿನಲ್ಲಿ ಆ್ಯಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಪತ್ನಿಯ ಮೇಲೆ ಸಂಶಯ ವ್ಯಕ್ತಪಡಿಸುತ್ತಿದ್ದ ಆರೋಪಿ, ಕೆಲ ವರ್ಷಗಳಿಂದ ಆಕೆಯನ್ನು ಬೇರೆಡೆ ಬಿಟ್ಟು ಒಬ್ಬನೇ ವಾಸವಾಗಿದ್ದ.
ಒಂದು ವಾರದ ಹಿಂದೆ ಪತ್ನಿಯನ್ನು ಪುನಃ ಕರೆತಂದು ಮಂಗಳವಾರ ರಾತ್ರಿ ಜಟ್ಟಿಗನಹಳ್ಳಿಯ ಸ್ಮಶಾನದ ಬಳಿ ಕರೆದೊಯ್ದಿದ್ದಾನೆ. ಈ ವೇಲೆ ಆಕೆಯ ತಲೆಗೆ ಕಲ್ಲಿನಿಂದ ಹೊಡೆದು ಹತ್ಯೆಗೈದಿದ್ದ. ಬಳಿಕ ಕೆಲ ಸಂಬಂಧಿಕರು, ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿ ಪರಾರಿಯಾಗಿದ್ದ. ಬುಧವಾರ ಬೆಳಿಗ್ಗೆ ಸ್ಥಳೀಯರೊಬ್ಬರು ಮೃತದೇಹ ಗಮನಿಸಿದಾಗ ಘಟನೆ ಬೆಳಕಿಗೆ ಬಂದಿತ್ತು.
ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡ ಕೆಂಗೇರಿ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪತ್ನಿಯನ್ನು ಸ್ಮಶಾನದ ಬಳಿ ಕರೆದೊಯ್ದ ಕಿರಾತಕ; ಹೆಂಡ್ತಿ ಕೊಂದು ಪರಾರಿ - Husband Kills Wife