ಬೆಂಗಳೂರು: ವಿಧಾನಸೌಧದಲ್ಲಿ ಇಂದು ನಡೆದ ಮುಖ್ಯಮಂತ್ರಿಗಳ ಜನಸ್ಪಂದನಾ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಜನರು, ಸಿಎಂ ಸಿದ್ದರಾಮಯ್ಯ ಬಳಿ ತಮ್ಮ ಅಹವಾಲು ಹೇಳಿಕೊಂಡರು.
ಈ ವೇಳೆ ಪರಿಹಾರ ಕೋರಿ ಆಗಮಿಸಿದ ಕೆಲ ಜನರು ತಮ್ಮ ಅಳಲು, ಅಹವಾಲನ್ನು 'ಈಟಿವಿ ಭಾರತ'ದ ಜೊತೆ ಹಂಚಿಕೊಂಡರು. ಕಲಬುರಗಿ ಮೂಲದ 68 ವರ್ಷದ ಗಂಗಾಧರ್ ಎಂಬವರು ಮಾತನಾಡಿ, "ಕೃಷಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ 2012ರಲ್ಲಿ ನಿವೃತ್ತನಾಗಿದ್ದೇನೆ. ಅಲ್ಲಿಂದ ಇಲ್ಲಿಯವರೆಗೆ ಪಿಂಚಣಿ ಹಣ ಸಿಕ್ಕಿಲ್ಲ. ಬೆಂಗಳೂರಿನ ಆಯುಕ್ತರ ಕಚೇರಿಗೆ ಅರ್ಜಿ ಸಲ್ಲಿಸಿದ್ದೇನೆ. ಆದರೆ, ಅವರು ಕಚೇರಿಯಿಂದ ಕಚೇರಿಗೆ ಸುತ್ತಾಡಿಸುತ್ತಿದ್ದು, ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಒಳ್ಳೆಯವರಿದ್ದಾರೆ. ಆದರೆ, ಕೆಳಗಿನ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ" ಎಂದು ದೂರಿದರು.
30 ವರ್ಷದಿಂದ ಸಾಗುವಳಿ ಚೀಟಿ ಕೊಡಿಸಿಲ್ಲ: ಚನ್ನಗಿರಿ ತಾಲೂಕಿನಿಂದ ಬಂದಿದ್ದ ಮುಜೀದ್ ರಹಮಾನ್ ಮಾತನಾಡಿ, "10 ವರ್ಷದಿಂದ ರೈತರಿಗೆ ಯಾವುದೇ ಕೆಲಸ ಆಗುತ್ತಿಲ್ಲ. ಜನಸ್ಪಂದನವು ಉತ್ತಮ ಕಾರ್ಯ್ರಕಮವಾಗಿದೆ. ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯವರು ಕೆಲಸ ಮಾಡುತ್ತಿಲ್ಲ. ಬಗರಹುಕುಂ ಎಸಿ ಕೋರ್ಟ್ನಿಂದ ಆದೇಶವಿದ್ದರೂ ಮಾಡಿಕೊಡುತ್ತಿಲ್ಲ. ಕಳೆದ 30 ವರ್ಷದಿಂದ ಬಗರ್ ಹುಕುಂ ಜಮೀನಿನ ಸಾಗುವಳಿ ಚೀಟಿ ಮಾಡಿಲ್ಲ" ಎಂದು ಅಸಮಾಧಾನ ಹೊರಹಾಕಿದರು.
"ಸ್ಥಳೀಯ ಮಟ್ಟದ ಅಧಿಕಾರಿಗಳು ದುಡ್ಡು ಕೇಳುತ್ತಿದ್ದಾರೆ. ಹಣ ಕೊಟ್ಟರೆ ಮಾತ್ರ ಕೆಲಸ ಮಾಡುತ್ತಾರೆ. ಇದಕ್ಕಾಗಿ ಹೆಂಡತಿಯ ತಾಳಿ ಮಾರಿದ್ದೇನೆ. ನಾನು ಇನ್ನೂ ಏನು ಮಾರಬೇಕು? ಹತ್ತು ವರ್ಷದಿಂದ ಪರದಾಡುವಂತಾಗಿದೆ. ಸಿಎಂ ಸ್ಪಂದಿಸುತ್ತಾರೆ ಎಂಬ ವಿಶ್ವಾಸ ಇದೆ. ರಾತ್ರಿ ನಿದ್ದೆ ಬಿಟ್ಟು ಇಲ್ಲಿಗೆ ಬಂದಿದ್ದೇನೆ" ಎಂದರು.
ಹೆತ್ತ ಮಕ್ಕಳೇ ಹೊರಹಾಕಿದ್ದಾರೆ: ಚನ್ನಗಿರಿ ತಾಲೂಕಿನ ದೊಡ್ಡಬ್ಬೆಗೆರೆಯ 64 ವರ್ಷದ ರುದ್ರಮ್ಮ ಎಂಬುವರು ಹೆತ್ತ ಮಕ್ಕಳಿಂದಲೇ ಮನೆಯಿಂದ ಹೊರಹಾಕಲ್ಪಟ್ಟಿದ್ದು, ನ್ಯಾಯ ಕೊಡಿಸುವಂತೆ ಮನವಿ ಮಾಡಿದರು. "2006ರಲ್ಲಿ ತೋಟದಲ್ಲಿ ಮನೆ ಕಟ್ಟಿದ್ದೆವು. ಪತಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು. 2020ರಲ್ಲಿ ಅವರು ನಿಧನರಾದರು. 3.20 ಎಕರೆ ತೋಟ ಹಾಕಿ ಜೀವನ ಮಾಡುತ್ತಿದ್ದೆವು. ಇಬ್ಬರು ಗಂಡು ಮಕ್ಕಳಿಗೂ 2009ರಲ್ಲಿ ಮದುವೆ ಮಾಡಿದ್ದೆವು. ಮಕ್ಕಳನ್ನು ಕಷ್ಟಪಟ್ಟು ಬೆಳೆಸಿದ್ದೇವೆ" ಎಂದು ಕಣ್ಣೀರು ಹಾಕಿದರು.
"ದೊಡ್ಡಮಗ ನನ್ನ ಹೆಸರಿಗೆ ಎರಡೂವರೆ ಎಕರೆ ತೋಟ ಬರೆಸಿಕೊಟ್ಟಿದ್ದ. ಆದರೆ, ಚಿಕ್ಕಮಗ ಹಾಗೂ ಸೊಸೆ ಫ್ಯಾಕ್ಟರಿ ಮಾಡಿಸುತ್ತೇನೆ ಎಂದು ಹೇಳಿ ನನ್ನ ಹೆಸರಿನಲ್ಲಿದ್ದ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿ, ಅದರಿಂದ ಬಂದ ದುಡ್ಡಿನಿಂದ ಫ್ಯಾಕ್ಟರಿ ಮಾಡಿದ್ದಾರೆ. ಬಳಿಕ ಅದರಿಂದ ಬಂದ ದುಡ್ಡಿನಿಂದ ಜಮೀನು ಬಿಡಿಸಿ ಕೊಡಿಸುತ್ತೇನೆ ಎಂದಿದ್ದರು. ಆದರೆ, ಈಗ ಮಗ- ಸೊಸೆ ಇಬ್ಬರೂ ಸೇರಿ ನನಗೆ ಹೊಡೆದು ಮನೆಯಿಂದ ಹೊರಹಾಕಿದ್ದಾರೆ. ಮೂರು ವರ್ಷದಿಂದ ನಾನು ಅನಾಥಾಶ್ರಮದಲ್ಲಿದ್ದೇನೆ. ಈಗ ಬೆಂಗಳೂರಿಗೆ ಬಂದು ಮನೆಗಳಲ್ಲಿ ಪಾತ್ರೆ ತೊಳೆದು ಜೀವನ ನಡೆಸುತ್ತಿದ್ದೇನೆ. ನನಗೆ ಆರೋಗ್ಯ ಸಮಸ್ಯೆ ಇದೆ. ಪತಿಯ ಪಿಂಚಣಿಯೂ ಬರುತ್ತಿಲ್ಲ. ತೋಟವನ್ನೂ ಬಿಡಿಸಿ ಕೊಡುತ್ತಿಲ್ಲ" ಎಂದು ಅಲವತ್ತುಕೊಂಡರು.
ನಿವೇಶನ ಕೊಡಿಸಿ: ಲಗ್ಗೆರೆಯ ಲವಕುಶನಗರದ ನಿವಾಸಿ ಮಹಾಲಕ್ಷ್ಮಿ ಎಂಬ ವಿಶೇಷ ಚೇತನ ಮಹಿಳೆಯು ಸಿಎಂಗೆ ಮನವಿ ಸಲ್ಲಿಸಲು ಆಗಮಿಸಿದ್ದರು. "ತಾನು ಅಂಧೆ ಅಂತ ಸುಮ್ಮನಿರಬಾರದು ಎಂದು ಪೃಥ್ವಿ ಹೆಲ್ತ್ ಅಂಡ್ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ನಡೆಸುತ್ತಿದ್ದೇನೆ. ಕೊರೊನಾ ವೇಳೆ ಹಾಸ್ಟೆಲ್ ಕಟ್ಟಿದ್ದೆ. ಒಟ್ಟು 20 ಮಕ್ಕಳು ಅದರಲ್ಲಿದ್ದಾರೆ. ಆದರೆ, ಬಳಿಕ ಆರ್ಥಿಕ ಮುಗ್ಗಟ್ಟು ಬಂದು ಹುಡುಗರನ್ನು ಬೇರೆ ಬೇರೆ ಕಡೆ ಕಳಿಸಿದ್ದೇನೆ. ಈಗ ಹುಡುಗರು ನಿಮ್ಮ ಹಾಸ್ಟೆಲ್ನಲ್ಲೇ ಇರಬೇಕು ಎಂದು ಕೇಳುತ್ತಿದ್ದಾರೆ. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ಹಾಸ್ಟೆಲ್ ಕಟ್ಟಡ ನಿರ್ಮಿಸಿ ಕೊಡಲಿ, ಇಲ್ಲವಾದರೆ ಖಾಲಿ ನಿವೇಶನವನ್ನಾದರೂ ನೀಡಬೇಕು" ಎಂದು ಮನವಿ ಮಾಡಿದರು.
ಮಕ್ಕಳನ್ನು ಓದಿಸಬೇಕು, ಕೆಲಸ ಕೊಡಿ: ಲಗ್ಗೆರೆಯ ಶಾಲಿನಿ ಎಂಬವರು ಜನಸ್ಪಂದನಾಗೆ ಆಗಮಿಸಿ ಕೆಲಸ ಕೊಡಿಸುವಂತೆ ಮನವಿ ಮಾಡಿದರು. "ಗಂಡ- ಹೆಂಡತಿ ಇಬ್ಬರೂ ಅಂಧರಾಗಿದ್ದೇವೆ. ಒಬ್ಬಳು ಮಗಳಿದ್ದಾಳೆ. ಕೆಲಸವಿಲ್ಲದೆ ಜೀವನ ಕಷ್ಟವಾಗಿದೆ. ಕೆಲಸ ಕೋರಿ ಸಿಎಂ ಬಳಿ ಬಂದಿದ್ದೇನೆ. ನನಗೆ ಎಲ್ಲಾದರೂ ಸಿಎಂ ಕೆಲಸ ಕೊಡಿಸಲಿ. ಗೃಹ ಲಕ್ಷ್ಮಿ ಯೋಜನೆಯಲ್ಲಿ ಹಣ ಬರುತ್ತಿದೆ. ಆದರೆ, ಮಕ್ಕಳನ್ನು ಓದಿಸಬೇಕು. ಕೆಲಸ ಕೊಡಿಸಿದರೆ ಜೀವನ ಸುಗಮವಾಗುತ್ತದೆ" ಎಂದು ಕೋರಿದರು.
ಗೃಹಲಕ್ಷ್ಮಿ ಹಣ ಬರುತ್ತಿಲ್ಲ: ನಂದಿನಿ ಲೇಔಟ್ ನಿವಾಸಿ ಆಶಾ ಎಂಬವರು, "ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ. ಅರ್ಜಿ ಹಾಕಿದಾಗಿನಿಂದ ಒಂದು ನಯಾ ಪೈಸೆ ಕೂಡ ಬಂದಿಲ್ಲ. ಯಲಹಂಕ ಕಚೇರಿ ಸೇರಿ ಎಲ್ಲಾ ಆಫೀಸ್ಗಳಿಗೆ ಓಡಾಡಿದ್ದೇನೆ. ಹೀಗಾಗಿ. ಸಿಎಂ ಜನಸ್ಪಂದನಾ ಕಾರ್ಯಕ್ರಮಕ್ಕೆ ಅಹವಾಲು ಹಿಡಿದುಕೊಂಡು ಬಂದಿದ್ದೇನೆ. ಎಲ್ಲಾ ದಾಖಲಾತಿಗಳನ್ನು ಕೊಟ್ಟರೂ ಹಣ ಬಂದಿಲ್ಲ" ಎಂದು ಅಲವತ್ತುಕೊಂಡರು.
ಬೆಂಗಳೂರಿನ ಮಹಾಭೋದಿ ಸಂಶೋಧನಾ ಕೇಂದ್ರ ಇವರು ಬೌದ್ಧ ಜನಾಂಗದ ಅಧ್ಯಾತ್ಮಿಕ ಗ್ರಂಥಾಲಯದ ನವೀಕರಣಕ್ಕಾಗಿ 20 ಲಕ್ಷ ರೂ.ಗಳ ಅನುದಾನ ಕೋರಿ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಬೌದ್ಧರಿಗೆ ಪ್ರತ್ಯೇಕ ನಿಗಮ ಮಂಡಳಿಗೆ ಆಗ್ರಹ: ಬೆಂಗಳೂರಿನ ಮಹಾಬೋಧಿ ಲುಂಬಿನಿ ಬುದ್ಧ ವಿಹಾರ ಸಂಸ್ಥೆಯವರು 2024-25ನೇ ಆಯವ್ಯಯದಲ್ಲಿ ಬೌದ್ಧ ಸಮುದಾಯದ ಅಭಿವೃದ್ಧಿಗಾಗಿ 100 ಕೋಟಿ ರೂ.ಗಳ ಅನುದಾನ ನೀಡಬೇಕು. ಬೌದ್ಧ ಜನಾಂಗಕ್ಕೆ ಪ್ರತ್ಯೇಕ ನಿಗಮ ಮಂಡಳಿ ರಚಿಸುವಂತೆ ಕೋರಿ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿಗಳು ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಬೆಳಗಾವಿ ಜಿಲ್ಲೆಯ ಸುರೇಶ್ ತುಕಾರಾಂ ಫೋಂಡೆ ತಮ್ಮ ಜಮೀನಿನಲ್ಲಿ ದೀಪಕ್ ಪಾಟೀಲ್ ಎಂಬುವರು ಮಣ್ಣು ತೆಗೆಯುತ್ತಿದ್ದು, ಕಳವು ಪ್ರಕರಣ ದಾಖಲಿಸಿಲ್ಲ ಎಂದು ದೂರಿದರು. ಸ್ಥಳದಲ್ಲಿಯೇ ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ಪ್ರಕರಣ ಪರಿಶೀಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ದಯಾನಂದ್ ಅವರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸ್ಥಳದಲ್ಲಿಯೇ ಮಾತನಾಡಿ ಕ್ರಮ ವಹಿಸಲು ಸೂಚಿಸಿದರು.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಾಗರಾಜಯ್ಯ ಅವರು ಶಿರಾದಲ್ಲಿ ರೂಢಿಯಲ್ಲಿದ್ದ ದಾರಿಯನ್ನು ಕತ್ತರಿಸಿರುವುದರಿಂದ 5 ಕಿ.ಮೀ ಬಳಸಿಕೊಂಡು ಓಡಾಡಬೇಕಿದೆ. ಇದನ್ನು ಸರಿಪಡಿಸುವಂತೆ ಕೋರಿದರು. ಅರ್ಜಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸ್ಥಳದಲ್ಲೇ ಪರಿಹಾರ ಘೋಷಣೆ: ಇದೇ ವೇಳೆ ಮೂವರ ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸಿಎಂ ಒಟ್ಟು 10 ಲಕ್ಷ ರೂ ಪರಿಹಾರ ಘೋಷಿಸಿದರು. ರಾಮನಗರ ಜಿಲ್ಲೆಯ ವಿಜಯಕುಮಾರ್ ಬಿನ್ ನರಸಿಂಹಮೂರ್ತಿ ಎಂಬುವರಿಗೆ ಕಿಡ್ನಿ ಕಸಿ ಚಿಕಿತ್ಸೆಗಾಗಿ 4 ಲಕ್ಷ ರೂ., ವಿಜಯಪುರದ ಸಿಂದಗಿ ತಾಲೂಕಿನ ಬಸನಗೌಡ ಬಿರಾದಾರ್ ಬೋನ್ ಮ್ಯಾರೋ ಕಸಿಗಾಗಿ 4 ಲಕ್ಷ ರೂ. ಹಾಗೂ ತುಮಕೂರು ಜಿಲ್ಲೆಯ 8 ವರ್ಷದ ಬಾಲಕಿಯ ಶ್ರವಣ ಸಾಧನಕ್ಕಾಗಿ 50 ಸಾವಿರ ರೂ.ಗಳನ್ನು ಮುಖ್ಯಮಂತ್ರಿಗಳು ಸ್ಥಳದಲ್ಲಿಯೇ ಮಂಜೂರು ಮಾಡಿದರು.
ಇದನ್ನೂ ಓದಿ: ಇಂದು ಸಲ್ಲಿಕೆಯಾದ ಅರ್ಜಿಗಳನ್ನು ಒಂದು ತಿಂಗಳಲ್ಲಿ ವಿಲೇವಾರಿ ಮಾಡಬೇಕು: ಸಿಎಂ ಸಿದ್ದರಾಮಯ್ಯ