ಬೆಳಗಾವಿ: ಹೂಗಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದೂ ಸೇರಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿ ಇರುವ ಸುವರ್ಣ ಗಾರ್ಡನ್ ಬಳಿಯ ಟೆಂಟ್ನಲ್ಲಿ ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ವಿಧಾನಮಂಡಲ ಚಳಿಗಾಲ ಅಧಿವೇಶನದ ಮೊದಲ ದಿನವೇ ರಾಜ್ಯ ಸರ್ಕಾರಕ್ಕೆ ಪ್ರತಿಭಟನೆಗಳ ಬಿಸಿ ತಟ್ಟಿದೆ. ನಾವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದೇವೆ. ದೇವರ ಪೂಜೆ ಮಾಡುವುದು ಹಾಗೂ ಗ್ರಾಮಗಳಲ್ಲಿ ಮನೆ ಮನೆಗೆ ಹೂ ಪತ್ರಿ ನೀಡುವುದು ನಮ್ಮ ಕುಲಕಸುಬು ಆಗಿದೆ. ಆದರೆ, ನಮಗೆ ಯಾವುದೇ ಆರ್ಥಿಕ ಆದಾಯ ಇಲ್ಲ. ಕಾಳು, ಕಡಿ ಕೊಟ್ಟಿದ್ದನ್ನು ಪಡೆದುಕೊಂಡೇ ಜೀವನ ಸಾಗಿಸುತ್ತಿದ್ದೇವೆ. ಹಾಗಾಗಿ, ನಮಗೆ ಪರಿಶಿಷ್ಟ ಪಂಗಡ ಮೀಸಲಾತಿ ಕಲ್ಪಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಸಂಘದ ರಾಜ್ಯಾಧ್ಯಕ್ಷ ಬಸವರಾಜ ಹೂಗಾರ ಮಾತನಾಡಿ, ರಾಜ್ಯದ ವಿವಿಧ ಮೂಲೆಗಳಿಂದ ಇಂದು ಪ್ರತಿಭಟನೆಯಲ್ಲಿ ನಾವೆಲ್ಲಾ ಪಾಲ್ಗೊಂಡಿದ್ದೇವೆ. ನಮ್ಮ ಸಮಾಜದ ವಿದ್ಯಾವಂತ ಯುವಕರಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಗುತ್ತಿಲ್ಲ. ಸಣ್ಣ ಸಮಾಜದ ನಮ್ಮ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ಇತ್ತೀಚಿಗೆ ಮೂಡಲಗಿ ತಾಲೂಕಿನ ಕಳ್ಳಿಗುದ್ದಿ ಗ್ರಾಮದ ಹನುಮಾನ್ ದೇವಸ್ಥಾನದ ಅರ್ಚಕ ಬಾಳಕೃಷ್ಣನನ್ನು ಕೊಲೆ ಮಾಡಿದ್ದು, ಯಾದಗಿರಿ ಜಿಲ್ಲೆಯ ಶಂಕರೆಪ್ಪ ಹೂಗಾರ ಎಂಬ ಬುದ್ಧಿಮಾಂದ್ಯ ಯುವಕನ ಕೊಲೆ ಮಾಡಿ ಸುಟ್ಟು ಹಾಕಿದ್ದು, ಈ ಎರಡೂ ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕು. ಅದೇ ರೀತಿ ಸ್ಥಳಕ್ಕೆ ಸಂಬಂಧಿಸಿದ ಸಚಿವರು ಆಗಮಿಸಿ ನಮಗೆ ಸೂಕ್ತ ಸ್ಪಂದನೆ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನಾನಿರತ ಮಹಿಳೆ ಶಾಂತಾ ಹೂಗಾರ ಮಾತನಾಡಿ, ನಾವು ಎಷ್ಟು ದಿನ ಅಂತಾ ಹೋರಾಟ ಮಾಡುವುದು. ನಮಗೆ ನ್ಯಾಯ ಸಿಗುವುದು ಯಾವಾಗ? ಹೂವು ಮಾರಾಟ ಮಾಡಿ, ಮನೆ ಮನೆಗೆ ಪತ್ರಿ ಕೊಟ್ಟು ದುಡಿದು ತಿನ್ನುತ್ತೇವೆ. ನಮ್ಮ ಮಕ್ಕಳಿಗೆ ಸರ್ಕಾರಿ ನೌಕರಿ ಸಿಗುತ್ತಿಲ್ಲ. ದಯವಿಟ್ಟು ನಮ್ಮ ಸಮಾಜವನ್ನು ಎಸ್ಟಿಗೆ ಸೇರಿಸಿ ಎಂದು ಕೇಳಿಕೊಂಡರು.
ಪ್ರತಿಭಟನೆಯಲ್ಲಿ ಸಂಘದ ಗೌರವ ಅಧ್ಯಕ್ಷ ಗುರುದೇವ ಶರಣರು, ರಾಜ್ಯ ಪ್ರಧಾನ ಕಾರ್ಯದರ್ಶಿ ಬನ್ನಪ್ಪ ಪೂಜಾರ ಸೇರಿ ಮತ್ತಿತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ : ಪಂಚಮಸಾಲಿ ಮೀಸಲಾತಿ ಬಗ್ಗೆ ಸರ್ಕಾರದ ಸ್ಪಷ್ಟ ನಿಲುವು ನಾಳೆ ತಿಳಿಸುವೆ: ಸಿಎಂ ಸಿದ್ದರಾಮಯ್ಯ