ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಮಹಾಗರ ಪಾಲಿಕೆ 23ನೇ ಅವಧಿಗೆ ಮೇಯರ್ ಹಾಗೂ ಉಪಮೇಯರ್ ಆಯ್ಕೆಗಾಗಿ ಇಂದು (ಶನಿವಾರ) ಚುನಾವಣೆ ನಡೆಯಿತು. ಪಾಲಿಕೆಯ ಮೇಯರ್ ಆಗಿ ಬಿಜೆಪಿಯ ರಾಮಪ್ಪ ಬಡಿಗೇರ ಹಾಗೂ ಉಪ ಮೇಯರ್ ಆಗಿ ಬಿಜೆಪಿಯ ದುರ್ಗಮ್ಮ ಬಿಜವಾಡ ಚುನಾಯಿತರಾಗಿದ್ದಾರೆ. ಮೇಯರ್ ಸ್ಥಾನ ಹಿಂದುಳಿದ ವರ್ಗ ಎ ಹಾಗೂ ಉಪ ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು.
ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟಣ್ಣವರ, ಹೆಚ್ಚುವರಿ ಆಯುಕ್ತ ಎಸ್.ಎಸ್. ಬಿರಾದಾರ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿಯ ರಾಮಪ್ಪ ಬಡಿಗೇರ 47 ಕಾಂಗ್ರೆಸ್ನ ಇಮ್ರಾನ್ ಎಲಿಗಾರ 36, ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿಯ ದುರ್ಗಮ್ಮ ಬಿಜವಾಡ 47 ಹಾಗೂ ಕಾಂಗ್ರೆಸ್ ನ ಮಂಗಳಮ್ಮ ಹಿರೇಮನಿ 36 ಮತಗಳನ್ನು ಪಡೆದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ಪ್ರದೀಪ್ ಶೆಟ್ಟರ್, ಎಸ್.ವಿ. ಸಂಕನೂರ ಉಪಸ್ಥಿತರಿದ್ದರು.
ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗ್ಗೆ ಕರೆದ ಪಾಲಿಕೆಯ ಬಿಜೆಪಿ ಹಾಗೂ ಬೆಂಬಲಿತ ಸದಸ್ಯರ ಸಭೆಯಲ್ಲಿ ಮೇಯರ್ ಸ್ಥಾನಕ್ಕೆ ರಾಮಪ್ಪ ಬಡಿಗೇರ ಹಾಗೂ ಉಪ ಮೇಯರ್ ಸ್ಥಾನಕ್ಕೆ ದುರ್ಗಮ್ಮ ಬಿಜವಾಡ ಹೆಸರನ್ನು ಅಂತಿಮಗೊಳಿಸಲಾಗಿತ್ತು.
ಮೇಯರ್ ಅಭ್ಯರ್ಥಿಗಳು ಪಡೆದ ಮತಗಳು:
ರಾಮಪ್ಪ ಬಡಿಗೇರ
- ಪರ - 47
- ವಿರೋಧ- 36
- ತಟಸ್ಥ-3
- ಗೈರು- 4
ಇಮಾಮ್ ಹುಸೇನ್ ಎಲಿಗಾರ
- ಪರ - 36
- ವಿರೋಧ- 47
- ತಟಸ್ಥ- 3
- ಗೈರು- 4
ಹುಸೇನಬಿ ನಾಲತವಾಡ
- ಪರ- 3
- ವಿರೋಧ- 81
- ತಟಸ್ಥ- 2
- ಗೈರು -4
ಉಪಮೇಯರ್ ಅಭ್ಯರ್ಥಿಗಳು ಪಡೆದ ಮತಗಳು:
ಮಂಗಳಮ್ಮ ಹಿರೇಮನಿ
- ಪರ - 36
- ವಿರೋಧ- 47
- ತಟಸ್ಥ- 3
- ಗೈರು- 4
ದುರ್ಗಮ್ಮ ಬಿಜವಾಡ
- ಪರ - 47
- ವಿರೋಧ- 36
- ತಟಸ್ಥ-3
- ಗೈರು- 4
ಅವಳಿನಗರದ ಜ್ವಲಂತ ಸಮಸ್ಯೆಗೆ ಸ್ಪಂದನೆ: ಮೇಯರ್, ಉಪಮೇಯರ್
ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಗೆ ಮೇಯರ್ ಆಗಿ ಆಯ್ಕೆಯಾಗಿರುವುದು ಸಾಕಷ್ಟು ಖುಷಿ ತಂದಿದೆ ಎಂದು ನೂತನ ಮೇಯರ್ ರಾಮಪ್ಪ ಬಡಿಗೇರ ಹೇಳಿದರು. ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಅವಳಿ ನಗರದಲ್ಲಿ ಸಾಕಷ್ಟು ಸವಾಲುಗಳಿವೆ. ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಎಲ್ಲವನ್ನೂ ಹಂತಹಂತವಾಗಿ ಪರಿಹರಿಸಲಾಗುವುದು. ಪಾಲಿಕೆಗೆ ಬರಬೇಕಿರುವ ಅನುದಾನ ಹಾಗೂ ತೆರಿಗೆ ಬಾಕಿ ವಿಚಾರದಲ್ಲಿ ಸೂಕ್ತ ಕ್ರಮಕೈಗೊಳ್ಳಾಗುವುದು. ಅವಳಿನಗರದ ಸಮಗ್ರ ಅಭಿವೃದ್ದಿಗಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಲಿದ್ದೇವೆ ಎಂದು ಅವರು ಭರವಸೆ ನೀಡಿದರು.
ಇದೇ ವೇಳೆ ಮಾತನಾಡಿದ ಉಪಮೇಯರ್ ದುರ್ಗಮ್ಮ ಬಿಜವಾಡ, ನಾನು ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮೇಯರ್ ಹಾಗೂ ಉಪಮೇಯರ್ ಎನ್ನದೆ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ತಿಳಿಸಿದರು.