ಹುಬ್ಬಳ್ಳಿ: ತಾಯಿಯ ಸಾವಿನ ಸುದ್ದಿ ನಡುವೆಯೂ ಕರ್ತವ್ಯಕ್ಕೆ ಹಾಜರಾಗಿ ಕರ್ತವ್ಯ ಪ್ರಜ್ಞೆ ಮೆರೆಯುವ ಮೂಲಕ ಪೊಲೀಸ್ ಅಧಿಕಾರಿಯೊಬ್ಬರು ಇತರರಿಗೆ ಮಾದರಿಯಾಗಿದ್ದಾರೆ. ಯಲ್ಲಪ್ಪ ಕಾಶಪ್ಪನವರ ಎಂಬಾತರೇ ಕರ್ತವ್ಯ ಪ್ರಜ್ಞೆ ಮೆರೆದವರಾಗಿದ್ದು, ಇವರು ಹು-ಧಾ ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಸಶಸ್ತ್ರ ಮಿಸಲು ಪಡೆಯ ಡಿಸಿಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಯಲ್ಲಪ್ಪ ಕಾಶಪ್ಪನವರ ಅವರ ತಾಯಿ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ವಯೋಸಹಜ ಕಾಯಿಲೆಯಿಂದ ಬುಧವಾರ ಮೃತಪಟ್ಟಿದ್ದರು. ವಿಷಯ ತಿಳಿಯುತ್ತಿದ್ದಂತೆ ಬೆಳಗ್ಗೆ 4 ಗಂಟೆಗೆ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಲ್ಲದೇ ಪುನಃ ಅದೇ ದಿನ ಬುಧವಾರ ಮಧ್ಯಾಹ್ನ 12 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ತಾಯಿಯ ಅಗಲಿಕೆ ನೋವಿನ ನಡುವೆಯೂ ಅಮಿತ್ ಶಾ ಅವರ ಕಾರ್ಯಕ್ರಮದ ಭದ್ರತೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕರ್ತವ್ಯ ಪಾಲನೆ ಮಾಡಿದ್ದಾರೆ.
ಈ ಬಗ್ಗೆ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಪ್ರಶಂಸೆ ವ್ಯಕ್ತಪಡಿಸಿದ್ದು, ತಾಯಿಯ ಅಗಲಿಕೆಯ ನೋವಿನಲ್ಲೂ ಕರ್ತವ್ಯಕ್ಕೆ ಹಾಜರಾದ ಯಲ್ಲಪ್ಪ ಕಾಶಪ್ಪನವರ್ ಅವರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಯಲ್ಲಪ್ಪ ಅವರ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆಗೆ ತುಂಬು ಹೃದಯದಿಂದ ಸಿಬ್ಬಂದಿ ಕೂಡ ಶುಭ ಕೋರಿದ್ದಾರೆ.
ತಾಯಿಯ ಅಗಲಿಕೆ ನೋವು ಇರುವುದರಿಂದ ರಜೆ ತೆಗೆದುಕೊಳ್ಳಲು ಸೂಚಿಸಲಾಗಿತ್ತು. ಆದರೆ, ಅವರು ರಜೆ ತೆಗೆದುಕೊಳ್ಳದೆ ಕರ್ತವ್ಯಕ್ಕೆ ಹಾಜರಾಗಿ ಇತರಿಗೆ ಮಾದರಿಯಾಗಿದ್ದಾರೆ ಎಂದು ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಅವರು ವಾಕಿಟಾಕಿಯಲ್ಲಿ ಕೊಂಡಾಡಿದ್ದಾರೆ.
ಇದಕ್ಕೆ ಪ್ರತಿಯಾಗಿ ವಾಕಿಟಾಕಿಯಲ್ಲಿಯೇ ಪ್ರತಿಕ್ರಿಯೆ ನೀಡಿದ ಯಲ್ಲಪ್ಪ ಅವರು ನಾನು ನನ್ನ ಕರ್ತವ್ಯ ಮಾಡಿದ್ದೇನೆ ಎಂದು ವಿನಮ್ರತೆಯಿಂದ ನುಡಿದಿದ್ದಾರೆ. ಇದಕ್ಕೆ ವಾಕಿಟಾಕಿಯಲ್ಲಿದ್ದ ಹಿರಿಯ ಅಧಿಕಾರಿಗಳು ಅವರ ಕರ್ತವ್ಯ ನಿಷ್ಠೆಗೆ ಸೆಲ್ಯೂಟ್ ಹೇಳಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದ ನಿವೃತ್ತ ಪೊಲೀಸ್ ನಟನೆಯ 'ಪವರ್ ಆಫ್ ವೋಟ್' ಕಿರುಚಿತ್ರಕ್ಕೆ ಪ್ರಥಮ ಬಹುಮಾನ - Voting Awareness