ಹುಬ್ಬಳ್ಳಿ: ಅಮರಗೋಳ ಎಪಿಎಂಸಿಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ದರೋಡೆಗೆ ಯತ್ನಿಸಿದ 5 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಎಪಿಎಂಸಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಗುರುವಾರ ಸಂಜೆ ಅಪರಿಚಿತ ವ್ಯಕ್ತಿಯೊಬ್ಬ ಯೂನಿಯನ್ ಬ್ಯಾಂಕ್ನಲ್ಲಿ ಹಣ ಸುಲಿಗೆ ಮಾಡುವ ಉದ್ದೇಶದಿಂದ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಚಾಕು ಹಿಡಿದು ಬಂದಿದ್ದ. ಬ್ಯಾಂಕ್ ನೌಕರರೊಬ್ಬರ ಕುತ್ತಿಗೆಗೆ ಚಾಕು ಹಿಡಿದು 10 ಲಕ್ಷ ರೂ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದ. ಕ್ಯಾಶ್ ಕೌಂಟರ್ ಬಳಿ ನೌಕರನ ರಕ್ಷಣೆಗೆ ಬಂದವರನ್ನು ತಳ್ಳಿ ಆರೋಪಿ ಪಾರಾರಿಯಾಗಿದ್ದನು. ಈ ಕುರಿತು, ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಎಪಿಎಂಸಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಮಿವುಲ್ಲಾ ಕೆ. ಹಾಗೂ ಸಿಬ್ಬಂದಿ ಒಳಗೊಂಡ ತಂಡ, ಬ್ಯಾಂಕ್ ಸಿಬ್ಬಂದಿ ಸಹಾಯದಿಂದ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಘಟನೆ ನಡೆದ 5 ಗಂಟೆಗಳೊಳಗೆ ಆರೋಪಿ ಗೋಪನಕೊಪ್ಪ ನಿವಾಸಿ ಮಂಜುನಾಥ್ ಹಬೀಬ್ (28) ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದರೋಡೆಗೆ ಬಳಸಿದ್ದ ಎರಡು ಚಾಕು, ಬ್ಯಾಗ್ ಅನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರಿಂದ ಈ ದರೋಡೆಗೆ ಯತ್ನಿಸಿದ ಬಗ್ಗೆ ವಿಚಾರಣೆಯಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ: ಹೆದ್ದಾರಿಯಲ್ಲಿ ದರೋಡೆ ಯತ್ನ: 56 ಪ್ರಕರಣಗಳ ರೌಡಿಶೀಟರ್ ಕಾಲಿಗೆ ಗುಂಡೇಟು - Rowdy sheeter Shot