ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವ್ಹೀಲಿಂಗ್ ಹಾವಳಿ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಪ್ರಾಪ್ತರು ಸೇರಿ ಕಳೆದ ಏಳು ತಿಂಗಳಲ್ಲಿ 325 ಮಂದಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪ್ರಾಪ್ತರ ಕೈಗೆ ದ್ವಿಚಕ್ರವಾಹನ ನೀಡಿ ಪರೋಕ್ಷವಾಗಿ ವ್ಹೀಲಿಂಗ್‌ಗೆ ಕಾರಣರಾದ 74 ಮಂದಿ ಪೋಷಕರು ಹಾಗೂ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.
ಈ ವರ್ಷ ದಾಖಲಾಗಿದ್ದ 325 ಪ್ರಕರಣಗಳ ಪೈಕಿ 72 ಮಂದಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವ ಸಂಚಾರ ಪೊಲೀಸರು ಒಟ್ಟು 5.15 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಪ್ರಕರಣ ದಾಖಲಾದ ಪೈಕಿ 283 ಮಂದಿ ಯುವಕರಾಗಿದ್ದು, 283 ದ್ವಿಚಕ್ರವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ. ವ್ಹೀಲಿಂಗ್ ಮಾಡುತ್ತಿದ್ದ 75 ಮಂದಿ ಅಪ್ರಾಪ್ತರಾಗಿದ್ದಾರೆ. ಒಟ್ಟಾರೆ 325 ಪ್ರಕರಣ ದಾಖಲಿಸಿ 12.21 ಲಕ್ಷ ದಂಡ ಸಂಗ್ರಹಿಸಿದ್ದಾರೆ.
ಕಳೆದ ವರ್ಷ ವರ್ಷ ದಾಖಲಾದ 219 ಪ್ರಕರಣಗಳ ಪೈಕಿ 214 ಮಂದಿ ವಿರುದ್ಧ ವ್ಹೀಲಿಂಗ್ ಕೇಸ್ ದಾಖಲಿಸಿ 209 ದ್ವಿಚಕ್ರವಾಹನ ಜಪ್ತಿ ಮಾಡಲಾಗಿತ್ತು. 74 ಮಂದಿ ಅಪ್ರಾಪ್ತರು ವ್ಹೀಲಿಂಗ್ ಪ್ರಕರಣದಲ್ಲಿ ಕಂಡುಬಂದಿದ್ದು, ವ್ಹೀಲಿಂಗ್ ಮಾಡಲು ಪರೋಕ್ಷ ಕಾರಣರಾದ 71 ಮಂದಿ ವಿರುದ್ಧ ಕಾನೂನು ಕ್ರಮ ಕೈಗೊಂಡು 10.39 ಲಕ್ಷ ರೂ.ದಂಡ ವಸೂಲಿ ಮಾಡಿದ್ದರು.
75 ಮಂದಿ ಪೋಷಕರಿಂದ ಸರಾಸರಿ 7 ಸಾವಿರ ದಂಡ: ಕಳೆದ ಜುಲೈ 31ರ ಪ್ರಕಾರ, ನಗರದಲ್ಲಿ ದಾಖಲಾದ ಅಪ್ರಾಪ್ತರ ವಿರುದ್ದ ಪ್ರಕರಣಗಳಲ್ಲಿ ಪೋಷಕರು 5.15 ಲಕ್ಷ ದಂಡ ಕಟ್ಟಿದ್ದಾರೆ. ಪೋಷಕರಿಂದ ತಲಾ ಸರಾಸರಿ 7 ಸಾವಿರ ದಂಡ ತೆತ್ತಿದ್ದಾರೆ. ಕಳೆದ ವರ್ಷ ಇಷ್ಟೇ ಪ್ರಮಾಣದಲ್ಲಿ ಪೊಲೀಸರು ದಂಡ ವಸೂಲಿ ಮಾಡಿಕೊಂಡಿದ್ದರು. ಗ್ಯಾರೇಜ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಳ್ಳುವ ಯುವಕರೇ ವ್ಹೀಲಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದು, ಬಹುತೇಕ ಪೋಷಕರಿಗೆ ಅಥವಾ ದ್ವಿಚಕ್ರ ವಾಹನ ಮಾಲೀಕರಿಗೆ ಅಪಾಯಕಾರಿ ವ್ಹೀಲಿಂಗ್ನಲ್ಲಿ ತೊಡಗಿಸಿಕೊಂಡಿರುವುದು ಅರಿವಿರುವುದಿಲ್ಲ. ಪ್ರಕರಣದಲ್ಲಿ ಸಿಕ್ಕಿಬಿದ್ದ ನಂತರವಷ್ಟೇ ತಮ್ಮ ಮಕ್ಕಳ ವ್ಹೀಲಿಂಗ್ ದುಶ್ಚಟ ಬಗ್ಗೆ ಪೋಷಕರಿಗೆ ಗೊತ್ತಾಗಿದೆ. ನಿರ್ಲಕ್ಷ್ಯದಿಂದಲೋ ಅಥವಾ ತಮಗರಿವಿಲ್ಲದಂತೆ ವ್ಹೀಲಿಂಗ್ನಲ್ಲಿ ತಮ್ಮ ಮಕ್ಕಳು ಸಿಕ್ಕಿಬಿದ್ದಿದ್ದರಿಂದ ಅನ್ಯದಾರಿ ಕಾಣದೆ ದಂಡ ವಿಧಿಸಿದ್ದಾರೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಅಪ್ರಾಪ್ತರ ಕೈಗೆ ಬೈಕ್ ಕೊಡಬೇಡಿ. ತಮ್ಮ ಮಕ್ಕಳು ಮಾಡುವ ಎಡವಟ್ಟಿನಿಂದ ಪೋಷಕರು ಪರಿತಪಿಸಬೇಕಾಗುತ್ತದೆ. ಬೈಕ್ ನೀಡುವ ಮುನ್ನ ಹತ್ತಾರು ಬಾರಿ ಯೋಚಿಸಿ. ಅಪ್ರಾಪ್ತರಾದರೆ ದ್ವಿಚಕ್ರವಾಹನ ನೀಡಲೇಬೇಡಿ. ಅಪಘಾತ ಅಥವಾ ವ್ಹೀಲಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದರೆ ಇದರ ನೇರ ಹೊಣೆ ನಿಮ್ಮದಾಗಲಿದೆ. 18 ವರ್ಷ ದಾಟಿದ ನಂತರ ವಾಹನ ಪರವಾನಗಿ ಪಡೆದ ಬಳಿಕವಷ್ಟೇ ವಾಹನ ನೀಡಿ. ಇಲ್ಲದಿದ್ದರೆ ನಿಮ್ಮ ಮಕ್ಕಳು ಮಾಡುವ ತಪ್ಪಿಗೆ ನೀವೇ ಜವಾಬ್ದಾರಿ ಎಂದು ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ವ್ಹೀಲಿಂಗ್ನಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಅಪ್ರಾಪ್ತರು ಭಾಗಿಯಾಗುತ್ತಿರುವುದು ಆತಂಕಕಾರಿ. ಇವರ ಆಟಾಟೋಪಕ್ಕೆ ಕಡಿವಾಣ ಹಾಕಲಾಗುತ್ತಿದೆ. ತಮ್ಮ ಮಕ್ಕಳಿಗೆ ಬೈಕ್ ನೀಡುವ ಮುನ್ನ ಪೋಷಕರು ಯೋಚಿಸಬೇಕಿದ್ದು, ಈ ಬಗ್ಗೆ ನಿರಂತರವಾಗಿ ಸ್ಥಳೀಯ ಸಂಚಾರ ಪೊಲೀಸರು ಜಾಗೃತಿ ಮೂಡಿಸಲಾಗುತ್ತಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ದಾಖಲಾದ ವ್ಹೀಲಿಂಗ್ ಪ್ರಕರಣಗಳು:
ಕ್ರ.ಸಂ. | ವರ್ಷ | ಪ್ರಕರಣಗಳು | ಅಪ್ರಾಪ್ತರ ಸಂಖ್ಯೆ | ದಂಡ ವಸೂಲಿ |
1 | 2022 | 283 | 22 | 2,37,500 ರೂ. |
2 | 2023 | 219 | 74 | 10,39,850 ರೂ. |
3 | 2024 | 325 | 75 | 5,15,250 ರೂ. (ಜುಲೈ ಅಂತ್ಯಕ್ಕೆ) |
ಇದನ್ನೂ ಓದಿ: ವಯನಾಡ್ ಭೂಕುಸಿತ ಸಂತ್ರಸ್ತರಿಗೆ ಸಹಾಯಹಸ್ತ; ಹೃದಯ ಗೆದ್ದ ಆಟೋ ಚಾಲಕಿಯ ನಿರ್ಧಾರ - Wayanad Landslides