ಮೈಸೂರು : ಜಿಲ್ಲೆಯ ನಂಜನಗೂಡು ತಾಲೂಕಿನ ದೇವಿರಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ಅನಾದಿ ಕಾಲದ ಮಣ್ಣಿನ ಗೋಡೆಯ ಮನೆ ಸುರಿದ ಜಿಟಿ ಜಿಟಿ ಮಳೆಯಿಂದ ಶಿಥಿಲಗೊಂಡು ನೆಲಸಮವಾಗಿದೆ. ಹೊಸಹಳ್ಳಿ ಗ್ರಾಮದ ಮಲ್ಲಿಗಮ್ಮ ಎಂಬುವರಿಗೆ ಸೇರಿದ ವಾಸದ ಮನೆ ಇದಾಗಿದ್ದು, ನಿವಾಸ ಕುಸಿದಿದ್ದರಿಂದ ಕೂದಲೆಳೆಯ ಅಂತರದಲ್ಲಿ ಬರೋಬ್ಬರಿ 7 ಜನರು ಜೀವ ಉಳಿಸಿಕೊಂಡಿದ್ದಾರೆ. ಆದರೆ ಮನೆಯಲ್ಲಿದ್ದ ಧವಸ ಧಾನ್ಯಗಳು ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಗೊಳಗಾಗಿವೆ.
ಕಳೆದ ಬಾರಿಯೂ ಮನೆ ಗೋಡೆ ಕುಸಿದು ಬಿದ್ದಿತ್ತು. ಸ್ಥಳಕ್ಕೆ ಬಂದ ಗ್ರಾಮ ಲೆಕ್ಕಾಧಿಕಾರಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪರಿಹಾರ ನೀಡುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಮತ್ತೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಂಪೂರ್ಣವಾಗಿ ಮನೆ ಕುಸಿದುಬಿದ್ದಿದೆ.
ಕಳೆದ ವರ್ಷ ಪರಿಹಾರ ನೀಡುತ್ತೇವೆ ಎಂದು ಭಾವಚಿತ್ರ ತೆಗೆದುಕೊಂಡು ಹೋದ ಕಂದಾಯ ಅಧಿಕಾರಿಗಳು ಇತ್ತ ಬರಲೂ ಇಲ್ಲ, ಪರಿಹಾರವೂ ಇಲ್ಲ. ವಾಸದ ಮನೆಯ ಸೌಲಭ್ಯವನ್ನು ಕೂಡ ನೀಡಿಲ್ಲ. ಏನಾದ್ರೂ ಜೀವ ಹಾನಿ ಆಗಿದ್ದರೆ ಯಾರು ಹೊಣೆ? ಎಂದು ಹೊಸಹಳ್ಳಿ ಗ್ರಾಮಸ್ಥರು ಮತ್ತು ಮನೆ ಕಳೆದುಕೊಂಡ ಕುಟುಂಬಸ್ಥರು ಕಂದಾಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂರು ದಿವಸದಿಂದ ಊಟವಿಲ್ಲ : ಮನೆ ಕುಸಿದ ಬಗ್ಗೆ ಮನೆಯ ಮಾಲೀಕರಾದ ಮಲ್ಲಿಗಮ್ಮ ಅವರು ಮಾತನಾಡಿ, 'ಮೂರು ನಾಲ್ಕು ದಿನಗಳಿಂದ ಮಳೆ ಸುರಿದು ನಮಗೆ ಇರಲು ಸ್ಥಳವಿಲ್ಲ. ಮಲಗಲು ನಮಗೆ ಸ್ಥಳವಿಲ್ಲ. ಯಾರೊಬ್ಬರು ಇಲ್ಲಿಗೆ ಬಂದಿಲ್ಲ. ರಾತ್ರಿಯೆಲ್ಲ ಟಾರ್ಪಲ್ ಕಟ್ಟಿಕೊಂಡು ಮಲಗಿದ್ವಿ. ಮಳೆಯಿಂದಾಗಿ ಮೂರು ದಿವಸದಿಂದ ಊಟವಿಲ್ಲ, ಬಟ್ಟೆಯಿಲ್ಲ, ಎಲ್ಲವೂ ನಾಶವಾಗಿವೆ' ಎಂದು ತಮ್ಮ ಸಮಸ್ಯೆಯನ್ನು ತೋಡಿಕೊಂಡಿದ್ದಾರೆ.
ಇದನ್ನೂ ಓದಿ : ಗಂಗಾವತಿ: ಮಳೆಗೆ ಮನೆ ಮೇಲ್ಛಾವಣಿ ಕುಸಿತ; ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ - House collapse