ಮಂಗಳೂರು: ಇಲ್ಲಿನ ಕೋಡಿಕಲ್ ವಿವೇಕಾನಂದ ನಗರದಲ್ಲಿ ಕಳ್ಳರ ತಂಡವೊಂದು ರಾತ್ರಿ ವೇಳೆ ಮನೆ ಮಂದಿ ಮಲಗಿದ್ದಾಗಲೇ ಕಿಟಕಿ ಸರಳು ತುಂಡರಿಸಿ ಮನೆಯೊಳಗೆ ನುಗ್ಗಿ 10 ಸಾವಿರ ರೂ. ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶನಿವಾರ ನಸುಕಿನ ವೇಳೆ ಉರ್ವ ಠಾಣಾ ವ್ಯಾಪ್ತಿಯ ಕೋಡಿಕಲ್ ವಿವೇಕಾನಂದ ನಗರ ನಿವಾಸಿ ಪ್ರದೀಪ್ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ಮನೆಯವರು ಬೆಡ್‌ರೂಂನಲ್ಲಿ ಮಲಗಿದ್ದಾಗಲೇ ಕಿಟಕಿ ಸರಳು ತುಂಡರಿಸಿದ ಕಳ್ಳರ ಗುಂಪು ಮನೆಯೊಳಗೆ ನುಗ್ಗಿದೆ. ಬಳಿಕ ಕಪಾಟಿನಲ್ಲಿಟ್ಟಿದ್ದ ಹಣ ಎಗರಿಸಿ ಪರಾರಿಯಾಗಿದ್ದಾರೆ.
ಕಳ್ಳರ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಐವರಿದ್ದ ತಂಡ ಮುಖಕ್ಕೆ ಮಾಸ್ಕ್ ಧರಿಸಿ ಒಂದೇ ಮಾದರಿಯ ವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಳ್ಳರು ಮನೆಯ ಅಂಗಳ ಪ್ರವೇಶಿಸುವ ಮೊದಲು ಬೀದಿನಾಯಿಗಳು ಬೊಗಳುತ್ತಾ ಬಂದಿದೆ. ಆಗ ತಂಡದಲ್ಲೊಬ್ಬ ನಾಯಿಯನ್ನು ಓಡಿಸುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಚಿನ್ನಾಭರಣ ಕಳವು: ಮತ್ತೊಂದು ಪ್ರಕರಣದಲ್ಲಿ, ನಗರದ ಉಳ್ಳಾಲ ಠಾಣಾ ವ್ಯಾಪ್ತಿಯ ಧರ್ಮನಗರದಲ್ಲಿ ಮನೆಯೊಂದರ ಗಾಡ್ರೆಜ್‌ನೊಳಗಿದ್ದ 15 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾನೂನಿನ ಸಂಘರ್ಷಕ್ಕೊಳಗಾದ ಇಬ್ಬರು ಬಾಲಕರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ.
ಬೆಳ್ತಂಗಡಿ ನಿವಾಸಿಗಳಾದ ಶ್ರೇಯಸ್, ತೌಸೀಫ್ ಹಾಗೂ ಉರ್ವ ನಿವಾಸಿ ಪೃಥ್ವಿರಾಜ್ ಬಂಧಿತ ಮೂವರು ಆರೋಪಿಗಳು. ಧರ್ಮನಗರ ನಿವಾಸಿ ಶ್ರೀಧರ್ ಎಂಬವರ ಮನೆಯಲ್ಲಿ ಜೂನ್ 8ರ ಬೆಳಗ್ಗೆ 8ರಿಂದ ಜೂ.16ರ ಮಧ್ಯಾಹ್ನ 12ರ ನಡುವೆ 15 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿತ್ತು. ಉಳ್ಳಾಲ ಠಾಣೆಗೆ ಶ್ರೀಧರ್ ದೂರು ನೀಡಿದ್ದರು.
ತಮ್ಮ ಮನೆಯ ಬೆಡ್‌ರೂಮ್ ಕಪಾಟಿನಲ್ಲಿಟ್ಟಿದ್ದ ಚಿನ್ನದ ಕರಿಮಣಿ, ನೆಕ್ಲೇಸ್, ಚೈನ್, ಬ್ರಾಸ್‌ಲೈಟ್, ಉಂಗುರಗಳು, ಕಿವಿಯೋಲೆಗಳು, ಕೈಬಳೆಗಳು ಸೇರಿದಂತೆ ಅಂದಾಜು 15 ಲಕ್ಷಕ್ಕೂ ಅಧಿಕ ಮೌಲ್ಯದ 32 ಪವನ್‌ಗಿಂತಲೂ ಹೆಚ್ಚು ತೂಕದ ಚಿನ್ನಾಭರಣಗಳನ್ನು ಕಳವುಗೈದ ಬಗ್ಗೆ ದೂರಿನಲ್ಲಿ ತಿಳಿಸಿದ್ದರು. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳವಾದ ಚಿನ್ನಾಭರಣಗಳನ್ನು ಆರೋಪಿಗಳು ಅಂಗಡಿಗಳಿಗೆ ಮಾರಾಟ ಮಾಡಿದ್ದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಯಾಟರಿ ಕಳವು: ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಟವರ್ ಬ್ಯಾಟರಿಗಳನ್ನು ಕಳವು ಮಾಡಿದ ಆರೋಪದಡಿ ಕೇರಳ ಕೊಲ್ಲಂ ನಿವಾಸಿ ಇಟ್ಟಿ ಪನಿಕರ್ ಎಂಬಾತನನ್ನು (58) ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.
ಕಿಲ್ಪಾಡಿ ಗ್ರಾಮದ ಕೆ.ಎಸ್.ರಾವ್ ನಗರ, ತಾಳಿಪಾಡಿ ಗ್ರಾಮದ ಎಸ್.ಕೋಡಿ ಎಂಬಲ್ಲಿರುವ ಮೊಬೈಲ್ ಟವರ್ ಬ್ಯಾಟರಿ, ಐಕಳ ನೆಲ್ಲಿಗುಡ್ಡೆ ಕ್ರಾಸ್ ಎಂಬಲ್ಲಿ ಜಾಗಕ್ಕೆ ಅಳವಡಿಸಿರುವ 5 ಕಬ್ಬಿಣದ ಗೇಟ್‌ಗಳನ್ನು ಕಳವು ಮಾಡಿದ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ಜು.7ರಂದು ಆರೋಪಿ ಇಟ್ಟಿ ಪನಿಕರ್‌ನನ್ನು ಬಂಧಿಸಿದ್ದಾರೆ.
ಆರೋಪಿಯಿಂದ ಮೊಬೈಲ್ ಟವರ್ಗೆ ಸಂಬಂಧಿಸಿದ ಸುಮಾರು 2.56 ಲಕ್ಷ ರೂ. ಮೌಲ್ಯದ 39 ಬ್ಯಾಟರಿ, 52 ಸಾವಿರ ರೂ. ಮೌಲ್ಯದ ಕಬ್ಬಿಣ ಗೇಟ್‌ಗಳು, 3 ಪಿಕ್‌ಅಪ್ ಗೂಡ್ಸ್ ಟೆಂಪೋ ಸೇರಿದಂತೆ ಒಟ್ಟು 8.8ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕುಟುಂಬದ ಜೊತೆ ತೆರಳುತ್ತಿದ್ದವರ ಮೇಲೆ ಯುವಕರ ರ‍್ಯಾಗಿಂಗ್! - Ragging