ಶಿವಮೊಗ್ಗ: ಡೆಂಗ್ಯೂ ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸಿಬ್ಬಂದಿ ಬಲಿಯಾಗಿರುವ ಘಟನೆ ಗುರುವಾರ (ಇಂದು) ನಡೆದಿದೆ. ಸಾಗರ ತಾಲೂಕು ಉಪವಿಭಾಗೀಯ ಆಸ್ಪತ್ರೆಯ ಡಯಾಲಿಸಿಸ್ ವಿಭಾಗದ ನಾಗರಾಜ್ (34) ಮೃತರು.
ಕಳೆದ ನಾಲ್ಕು ದಿನಗಳಿಂದ ನಾಗರಾಜ್ ಜ್ವರದಿಂದ ಬಳಲುತ್ತಿದ್ದರು. ಭಾನುವಾರ ತೀವ್ರ ಜ್ವರ ಎಂದು ಸಾಗರದ ಉಪವಿಭಾಗಿಯ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ರಕ್ತ ಪರೀಕ್ಷೆ ನಡೆಸಿದಾಗ ಡೆಂಗ್ಯೂ ಸೋಂಕು ಇರುವುದು ಧೃಡಪಟ್ಟಿತ್ತು. ಸಾಗರ ಆಸ್ಪತ್ರೆಯಲ್ಲಿ ಎರಡು ದಿನ ಚಿಕಿತ್ಸೆಯನ್ನೂ ಕೊಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ.
ಈ ಕುರಿತು ಸಾಗರ ಉಪವಿಭಾಗೀಯ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಪರಪ್ಪ ದೂರವಾಣಿಯಲ್ಲಿ ಮಾಹಿತಿ ನೀಡಿದ್ದು, ನಾಗರಾಜ್ ನಮ್ಮ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ನೌಕರರಾಗಿದ್ದರು. ಇವರಿಗೆ ಜ್ವರ ಎಂದು ಬಂದಾಗ 51 ಸಾವಿರ ಪ್ಲೇಟ್ಲೇಟ್ ಇತ್ತು. ಇಲ್ಲಿ ಚಿಕಿತ್ಸೆಗೆ ಸ್ಪಂದಿಸದ ಕಾರಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲ್ಲೂ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ. ಇವರಿಗೆ ಶುಗರ್ ಇದ್ದು, ಸರಿಯಾಗಿ ಮಾತ್ರೆ ತೆಗೆದುಕೊಳ್ಳುತ್ತಿರಲಿಲ್ಲ ಎಂದು ಕೂಡ ತಿಳಿದು ಬಂದಿರುವುದಾಗಿ ಡಾ.ಪರಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದ 4 ವರ್ಷದ ಮಗುವಿನಲ್ಲಿ ಹಕ್ಕಿ ಜ್ವರ ಪತ್ತೆ: WHO - Bird Flu In India