ಬೆಂಗಳೂರು: ಯಾದಗಿರಿ ಪಿಎಸ್ಐ ಪರಶುರಾಮ್ ಸಾವಿನ ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿರುವುದಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತಮ್ಮ ನಿವಾಸದ ಬಳಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಪಿಎಸ್ಐ ಪರಶುರಾಮ್ ಪತ್ನಿ ಶ್ವೇತಾ ಅವರ ಆರೋಪವನ್ನು ತನಿಖೆಯಲ್ಲಿ ಪರಿಗಣಿಸುವಂತೆ ನಿರ್ದೇಶಿಸಲಾಗಿದೆ. ವರ್ಗಾವಣೆ ವಿಚಾರವಾಗಿ ಸ್ಥಳೀಯ ಶಾಸಕರೊಬ್ಬರ ಮೇಲೆ ಪರಶುರಾಮ್ ಪತ್ನಿ ಆರೋಪ ಮಾಡಿದ್ದಾರೆ. ಅದು ಆರೋಪ ಮಾತ್ರ. ತನಿಖೆ ನಡೆಯಬೇಕು. ಆರೋಪ ಮಾಡಿದ ತಕ್ಷಣವೇ ಅದು ಸತ್ಯ ಎಂದಾಗಲಿ ಅಥವಾ ಸುಳ್ಳು ಎಂದಾಗಲಿ ಹೇಳಲಾಗುವುದಿಲ್ಲ, ತನಿಖೆಯಾಗಲಿ' ಎಂದು ಹೇಳಿದರು.
'ಪರಶುರಾಮ್ ಸಾವು ಸಹಜವಾಗಿದೆ. ಆತ್ಮಹತ್ಯೆ ಅಲ್ಲ. ಮರಣದ ಮುನ್ನ ಬರೆದಿರುವ ಯಾವುದೇ ಪತ್ರಗಳು ದೊರೆತಿಲ್ಲ. ಕುಟುಂಬದ ಸದಸ್ಯರು ವರ್ಗಾವಣೆ ಹಿನ್ನೆಲೆಯಲ್ಲಿ ಒತ್ತಡಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಅದನ್ನು ನಾವು ತಳ್ಳಿಹಾಕುವುದಿಲ್ಲ. ತನಿಖೆ ಮಾಡಲು ಸೂಚಿಸಿದ್ದೇನೆ' ಎಂದರು.
Cash For Posting - ಕರ್ನಾಟಕದಲ್ಲಿ ವರ್ಗಾವಣೆ ದಂಧೆಗೆ ಮತ್ತೊಂದು ಬಲಿಯನ್ನು ಕಾಂಗ್ರೆಸ್ ಸರ್ಕಾರ ಪಡೆದುಕೊಂಡಿದೆ.
— Basanagouda R Patil (Yatnal) (@BasanagoudaBJP) August 3, 2024
PSI ಪರಶುರಾಮ್ ರವರಿಗೆ ಕಿರುಕುಳ ನೀಡಿ, ಹಣಕ್ಕಾಗಿ ಪೀಡಿಸಿ ಅವರ ಸಾವಿಗೆ ಯಾದಗರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಮತ್ತು ಅವರ ಮಗ ಸನ್ನಿ ಗೌಡ ಕಾರಣರಾಗಿದ್ದಾರೆ.
ಕಳೆದ ಏಳು ತಿಂಗಳ ಹಿಂದಷ್ಟೇ 30 ಲಕ್ಷ ಹಣ… pic.twitter.com/fE5R0yfUhu
'ಪ್ರಾಥಮಿಕ ಸಾಕ್ಷ್ಯ ಹಾಗೂ ಮಾಹಿತಿ ಕಲೆ ಹಾಕಿದ ಬಳಿಕ ಎಫ್‍ಐಆರ್ ದಾಖಲಿಸುತ್ತಾರೆ. ಹಾಗಾಗಿ ವಿಳಂಬವಾಗಿ ಪ್ರಕರಣ ದಾಖಲಿಸಲಾಗುತ್ತಿದೆ ಎಂಬುದು ಸರಿಯಲ್ಲ. ಪ್ರಕರಣದಲ್ಲಿ ಕಾನೂನಿನ ಪಾಲನೆಯನ್ನಷ್ಟೇ ನಾವು ಮಾಡುತ್ತೇವೆ. ಅಧಿಕಾರಿಯ ಸಮುದಾಯ ಅಥವಾ ಜಾತಿಯನ್ನು ನಾವು ಪರಿಗಣಿಸುವುದಿಲ್ಲ. ಬಿಜೆಪಿ ನಾಯಕರು ಆರೋಪ ಮಾಡುವ ವಿಚಾರ ಕುರಿತಂತೆ ತಾವು ಪ್ರತಿಕ್ರಿಯಿಸುವುದಿಲ್ಲ. ಒಂದು ವೇಳೆ ಪ್ರಕರಣದಲ್ಲಿ ಶಾಸಕರು ಭಾಗಿಯಾಗಿದ್ದರೂ ಕೂಡ ಎಫ್‍ಐಆರ್ ದಾಖಲಾದ ಬಳಿಕ ತನಿಖೆ ಮುಂದುವರೆಯಲಿದೆ' ಎಂದು ತಿಳಿಸಿದರು.
ಪಾದಯಾತ್ರೆಗೆ ಎಚ್ಚರಿಕೆ: 'ಬಿಜೆಪಿ-ಜೆಡಿಎಸ್ ಜಂಟಿ ಪಾದಯಾತ್ರೆಗೆ ಷರತ್ತುಗಳನ್ನು ವಿಧಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯಬಾರದು. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಎಚ್ಚರಿಕೆ ನೀಡಲಾಗಿದೆ. ಅವರು ನ್ಯಾಯಾಲಯಕ್ಕೆ ಹೋಗುವ ಮುನ್ನವೇ ನಾವೇ ಅನುಮತಿ ನೀಡುವುದಾಗಿ ಹೇಳಿದ್ದೆವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು' ಎಂದು ಹೇಳಿದರು.
ಯತ್ನಾಳ್ ಆರೋಪ: ರಾಜ್ಯದಲ್ಲಿ ವರ್ಗಾವಣೆ ದಂಧೆಗೆ ಮತ್ತೊಂದು ಬಲಿಯನ್ನು ಕಾಂಗ್ರೆಸ್ ಸರ್ಕಾರ ಪಡೆದುಕೊಂಡಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಕಿರುಕುಳ ನೀಡಿ, ಹಣಕ್ಕಾಗಿ ಪೀಡಿಸಿ ಪಿಎಸ್ಐ ಪರಶುರಾಮ್ ಸಾವಿಗೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಮತ್ತು ಅವರ ಮಗ ಸನ್ನಿ ಗೌಡ ಕಾರಣರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವಿಜಯಪುರ ಶಾಸಕರು ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ಏಳು ತಿಂಗಳ ಹಿಂದಷ್ಟೇ 30 ಲಕ್ಷ ರೂ ನೀಡಿ ನಗರ ಠಾಣೆಗೆ ವರ್ಗ ಮಾಡಿಸಿಕೊಂಡಿದ್ದ ಪರಶುರಾಮ್ ಅವರು ಸಾಲದ ಸುಳಿಗೆ ಸಿಲುಕಿದ್ದರು, ಇದೀಗ ಮತ್ತೆ ನಿಯಮಬಾಹಿರ ವರ್ಗಾವಣೆ ಮಾಡಿಸಿ ಹಣಕ್ಕಾಗಿ ಕಿರುಕುಳ ನೀಡಿದ್ದಾರೆ. ಈ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದು ಯತ್ನಾಳ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಯಾದಗಿರಿ: ಪಿಎಸ್ಐ ಪರಶುರಾಮ್ ಹೃದಯಾಘಾತದಿಂದ ಸಾವು - PSI died of heart attack