ಬೆಂಗಳೂರು: ಮುಂದೂಡಿದ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ಸದಸ್ಯರು ಬಾವಿಗಿಳಿದು ಧರಣಿ ಮುಂದುವರೆಸಿದರು. ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮೂಡಾ ಚರ್ಚೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ನಿಯಮಾವಳಿಯಂತೆ ಪರಿಶೀಲಿಸಿ ನಂತರ ತೀರ್ಮಾನ ನೀಡುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಕಾಂಗ್ರೆಸ್ ಸಚೇತಕ ಸಲೀಂ ಮಾತನಾಡಿ ನಿಲುವಳಿ ಸೂಚನೆ ಮಂಡನೆ ಬಗ್ಗೆ ನೀವು (ಸಭಾಪತಿ) ಈಗಾಗಲೇ ರೂಲಿಂಗ್ ನೀಡಿದ್ದೀರಿ. ಹೀಗಿದ್ದರೂ ಪ್ರತಿಪಕ್ಷದ ಸದಸ್ಯರು ಪುನರ್ ಪರಿಶೀಲಿಸುವಂತೆ ಮನವಿ ಮಾಡಿರುವುದು ಅವರ ಹಕ್ಕಾಗಿದೆ. ಅದನ್ನ ಅವರು ಮಾಡಿದ್ದಾರೆ. ಹೀಗಿದ್ದರೂ ನಿಲುವಳಿ ಮಂಡನೆ ಪಟ್ಟು ಹಿಡಿದಿರುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸದಸ್ಯ ಹರಿಪ್ರಸಾದ್ ಮಾತನಾಡಿ, ನಿಯಮಾವಳಿ ಪ್ರಕಾರ ಒಮ್ಮೆ ನಿಲುವಳಿ ಸೂಚನೆಯನ್ನ ಸಭಾಪತಿಗಳು ತಿರಸ್ಕೃತವಾದ ನಂತರ ಪುನರ್ ಪರಿಶೀಲಿಸಬಹುದು. ಆದರೆ, ಲಿಖಿತವಾಗಿ ಬೆಳಗ್ಗೆ 9 ಗಂಟೆಯೊಳಗೆ ಸಭಾಪತಿ ಕಚೇರಿಗೆ ನೀಡಿದ ನಂತರವಷ್ಟೇ ಸಭಾಪತಿಗಳು ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದರು.
ಇದಕ್ಕೆ ಆಕ್ಷೇಪಿಸಿದ ಬಿಜೆಪಿ ಸದಸ್ಯರು ಸರ್ಕಾರ ವಿರುದ್ಧ ಧಿಕ್ಕಾರ ಕೂಗಿದರು. ಮೂಡಾ ಸೈಟು ಗೋವಿಂದ ಗೋವಿಂದ ಘೋಷಣೆ ಮೊಳಗಿಸಿದರು. ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಸಹ ಧಿಕ್ಕಾರ ಕೂಗಿದರು. ಪ್ರತಿಪಕ್ಷ - ಆಡಳಿತ ಪಕ್ಷದವರ ಗದ್ದಲ ಹೆಚ್ಚಾಗಿದ್ದರಿಂದ ಸಹಜ ಸ್ಥಿತಿಗೆ ಬರದ ಕಾರಣ ನಾಳೆಗೆ ಸದನವನ್ನ ಮುಂದೂಡಲಾಯಿತು. ಸದನ ಮುಂದೂಡುತ್ತಿದ್ದಂತೆ ಬಿಜೆಪಿ ಸದಸ್ಯರು ಪೋಸ್ಟರ್ ಹಿಡಿದು ಪ್ರದರ್ಶಿಸಿದರು. ಸದನದ ಹೊರಗೆ ಬಂದು ಪೋಸ್ಟರ್ ಪ್ರದರ್ಶಿಸಿ ಧಿಕ್ಕಾರ ಕೂಗಿದರು.
ಓದಿ: ಮುಡಾ ಹಗರಣದ ಚರ್ಚೆಗೆ ಆಗ್ರಹ: ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿಗೆ ಬಿಜೆಪಿ, ಜೆಡಿಎಸ್ ನಿರ್ಧಾರ - Night Protest