ಬೆಂಗಳೂರು: ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧಿಸಿದ್ದ ಸರ್ಕಾರದ ಆದೇಶವನ್ನು ಎತ್ತಿಹಿಡಿದಿರುವ ಹೈಕೋರ್ಟ್, ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಳಿಸಿ ಆದೇಶಿಸಿತು. ಹುಕ್ಕಾ ನಿಷೇಧ ಪ್ರಶ್ನಿಸಿ ಆರ್.ಭರತ್ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಇಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ನಡೆಸಿತು. ಅರ್ಜಿ ಕುರಿತಂತೆ ಸುದೀರ್ಘ ವಿಚಾರಣೆ ನಡೆಸಿದ್ದ ಕೋರ್ಟ್, ತೀರ್ಪು ಕಾಯ್ದಿರಿಸಿತ್ತು.
ಹೈಕೋರ್ಟ್ ಹೇಳಿದ್ದೇನು?: ಮಧ್ಯಂತರ ಅರ್ಜಿದಾರರು ಹೈಕೋರ್ಟ್ ನಿಗದಿತ ಪ್ರದೇಶದಲ್ಲಿ ಮಾತ್ರ ಹುಕ್ಕಾ ಸೇವನೆಗೆ ಅವಕಾಶ ನೀಡಿದ್ದರೂ ಸಹ ಎಲ್ಲಾ ಪ್ರದೇಶದಲ್ಲಿ, ರೆಸ್ಟೋರೆಂಟ್‌ಗಳನ್ನು ಸೇವನೆಗೆ ಅವಕಾಶ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಹರ್ಬಲ್ ಹುಕ್ಕಾ ಮಾರಾಟ ಮಾಡಲಾಗುತ್ತಿದೆ ಎಂದು ಅರ್ಜಿದಾರರು ಸಮರ್ಥಿಸಿಕೊಂಡಿದ್ದಾರೆ. ಆಫ್ರೀನ್ ಹೆಸರಿನಲ್ಲಿ ಹರ್ಬಲ್ ಹುಕ್ಕಾ ಸೇವೆನೆ ಅವಕಾಶ ನೀಡಲಾಗಿದೆ. ಅದನ್ನು ಲೇವರ್ಡ್ ಹುಕ್ಕಾ ಮೊಲಾಸಿಸ್ ಎಂದು ಹೇಳಲಾಗುತ್ತಿದೆ. ಆದರೆ ಮೊಲಾಸಿಸ್ ನಿಷೇಧ ಉತ್ಪನ್ನ, ಆದರೆ ಅದನ್ನು ಮುಕ್ತವಾಗಿ ಮಾರಲಾಗುತ್ತಿದೆ. ಹುಕ್ಕಾ ಸೇವನೆ ಆರೋಗ್ಯಕ್ಕೆ ಹಾನಿಕಾರಕ, ಒಂದು ಬಾರಿ ಹುಕ್ಕಾ ಸೇವನೆ ಮಾಡಿದರೆ ಅದು 100 ಸಿಗರೇಟಿಗೆ ಸಮ. ಹರ್ಬಲ್ ಹುಕ್ಕಾದಲ್ಲಿ ವಿಷಕಾರಕ ಕಾರ್ಬನ್ ಮೋನಾಕ್ಸೈಡ್ ಸೇರಿಸಲಾಗಿರಲಿದೆ ಎಂದು ಪೀಠ ತಿಳಿಸಿದೆ.
ಹುಕ್ಕಾ ಸೇವನೆ ಹಾನಿಕಾರಕ ಎಂದು ತಿಳಿದಿದ್ದರೂ ಸಹ ಸರ್ಕಾರ ಇಷ್ಟು ದಿನಗಳ ಕಾಲೇ ಯಾವ ಕಾರಣಕ್ಕೆ ಮೌನವಾಗಿತ್ತು ಎಂಬುದು ತಿಳಿಯಲಾಗುತ್ತಿಲ್ಲ. ನೂರಾರು ಹುಕ್ಕಾ ಪಾರ್ಲರ್‌ಗಳು ತಲೆ ಎತ್ತಲು ಏಕೆ ಅವಕಾಶ ನೀಡಲಾಗಿದೆ ಎಂದು ಪ್ರಶ್ನಿಸಿರುವ ನ್ಯಾಯಾಲಯ, ರಾಜ್ಯಾದ್ಯಂತ 800ಕ್ಕೂ ಅಧಿಕ ಹುಕ್ಕಾ ಪಾರ್ಲರ್‌ಗಳಿವೆ ಎಂದು ಹೇಳಲಾಗುತ್ತಿದೆ. ಅವು ಈವರೆಗೆ ಸಂಪೂರ್ಣ ಅನಿಯಂತ್ರಣದಲ್ಲಿದ್ದವು ಎಂದು ಪೀಠ ಹೇಳಿದೆ.
ಅರ್ಜಿದಾರರು ಹುಕ್ಕಾ ಸಿಗರೇಟಿಗಿಂತ ಕಡಿಮೆ ಹಾನಿಕಾರಕ ಎಂದು ಹೇಳುತ್ತಿದ್ದಾರೆ. ಆದರೆ ಅಧ್ಯಯನಗಳ ಪ್ರಕಾರ ಹುಕ್ಕಾ ಸೇವನೆದಾರರು ನಿಕೋಟಿನ್ ಸೇವಿಸುತ್ತಾರೆ, ಅದು ಚಟಕಾರಿ ರಾಸಾಯನಿಕವಾಗಿದೆ. ಹುಕ್ಕಾದಲ್ಲಿ ಸಿಗರೇಟಿಗಿಂತ ಅಧಿಕ ಪ್ರಮಾಣದ ಅರ್ಸೆನಿಕ್, ಲಿಡ್, ನಿಕಲ್ ಮತ್ತು 15 ಪಟ್ಟು ಹೆಚ್ಚು ಕಾರ್ಬನ್ ಮೋನಾಕ್ಸೈಡ್ ಇದೆ ಎಂದು ಹೇಳಲಾಗುತ್ತಿದೆ. ಹುಕ್ಕಾ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಗುಂಪುಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಒಂದೇ ಕೊಳವೆಯನ್ನು ಹಲವರು ಬಾಯಿಯಲ್ಲಿಟ್ಟುಕೊಂಡು ಸೇವನೆ ಮಾಡುತ್ತಾರೆ. ಅದರಿಂದ ಹರ್ಪಿಸ್, ಹೆಪಟೈಟಿಸ್ ಮತ್ತಿತರ ಕಾಯಿಲೆಗಳು ಹರಡುವ ಸಾಧ್ಯತೆಯಿದೆ. ಸಿಗರೇಟು ಸೇದುವುದಕ್ಕಿಂತ ಹುಕ್ಕಾ ಸೇವನೆ ಕಡಿಮೆ ಅಪಾಯಕಾರಿ ಎನ್ನುವುದು ಕೇವಲ ಮಿಥ್ಯೆ. ಹುಕ್ಕಾ ಮತ್ತು ಸಿಗರೇಟಿನಲ್ಲಿ ಒಂದೇ ಬಗೆಯ ಟಾಕ್ಸಿನ್‌ಗಳಿರುತ್ತವೆ.
ಸಿಗರೇಟಿನಿಂದ ಶ್ವಾಸಕೋಶ ಕ್ಯಾನ್ಸರ್ ಅಥವಾ ಉಸಿರಾಟ ಸಮಸ್ಯೆ ಎದುರಾದರೆ ಹುಕ್ಕಾದಿಂದಲೂ ಸಹ ಅದೇ ಅಪಾಯವಿದೆ. ಹಾಗೆ ನೋಡಿದರೆ ಸಿಗರೇಟಿಗಿಂತ ಹುಕ್ಕಾ ಸೇವನೆಯೇ ಹೆಚ್ಚು ಅಪಾಯಕಾರಿ. ಹುಕ್ಕಾವನ್ನು ಸಾಮಾನ್ಯವಾಗಿ ಸುಮಾರು ಒಂದು ಗಂಟೆಯವರೆಗೆ ಸರಾಸರಿ 200 ಪಪ್ ಸೇದಲಾಗುತ್ತದೆ. ಅದು 100 ಸಿಗರೇಟು ಸೇದುವುದಕ್ಕೆ ಸಮವಾಗುತ್ತದೆ. ಜತೆಗೆ ಸಿಗರೇಟಿನ ಮೇಲೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಎಚ್ಚರಿಕೆ ಸಂದೇಶವಿರುತ್ತದೆ, ಮದ್ಯದ ಮೇಲೂ ಸಹ ಸಂದೇಶವಿದೆ. ಆದರೆ ಹುಕ್ಕಾದ ಮೇಲೆ ಯಾವುದೇ ಸಂದೇಶ ಇರುವುದಿಲ್ಲ. ಆದ್ದರಿಂದ ಸರ್ಕಾರ ಸಂವಿಧಾನದ 47ನೇ ಕಲಂ ಅಡಿ ತಮ್ಮ ಅಧಿಕಾರ ಬಳಸಿ ಹುಕ್ಕಾ ನಿಷೇಧಿಸಿರುವ ಕ್ರಮ ಸರಿಯಾಗಿಯೇ ಇದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ವಿವರಿಸಿದೆ.
ಸರ್ಕಾರದ ವಾದ ಏನು?: ಅರ್ಜಿಯ ಕುರಿತಂತೆ ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಪೀಠದೆದುರು ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಸಂವಿಧಾನದ ಕಲಂ 47ರಡಿ ಅಧಿಕಾರ ಚಲಾಯಿಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಬಗೆಯ ಹುಕ್ಕಾ ಮಾರಾಟ, ಸೇವನೆ, ದಾಸ್ತಾನು, ಜಾಹೀರಾತು ಮತ್ತು ಉತ್ತೇಜಿಸುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ಒಂದು ವೇಳೆ ಧೂಮಪಾನ ಪ್ರದೇಶ ಇದ್ದರೆ, ಅಲ್ಲಿ ಇತರೆ ಯಾವುದೇ ಸೇವೆ ನೀಡುವಂತಿಲ್ಲ. ಆದರೆ ಹುಕ್ಕಾ ಬಾರ್‌ಗಳಲ್ಲಿ ಹುಕ್ಕಾ ಜೊತೆಗೆ ಇತರೆ ಎಲ್ಲಾ ಸೇವೆಗಳನ್ನು ನೀಡಲಾಗುತ್ತಿತ್ತು. ಹುಕ್ಕಾ ಸೇವನೆಗೆ ಪ್ರತ್ಯೇಕ ಪ್ರದೇಶ ನಿಗದಿ ಮಾಡಿರಲಿಲ್ಲ. ಬಾರ್‌ಗಳಲ್ಲಿ ಎಲ್ಲೆಡೆ ಹುಕ್ಕಾ ಸೇವನೆಗೆ ಅವಕಾಶ ನೀಡಲಾಗಿತ್ತು. ಇದರಿಂದ ಹುಕ್ಕಾ ಸೇವನೆ ಮಾಡುವವರು ಮಾತ್ರವಲ್ಲದೆ, ಇತರ ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ನಿಷೇಧ ಮಾಡಲಾಗಿದೆ ಎಂದು ತಿಳಿಸಿದ್ದರು.
ಹುಕ್ಕಾ ನಿಷೇಧಿಸುವ ವಿಧೇಯಕಕ್ಕೆ ಎರಡೂ ಸದನಗಳು ಅನುಮೋದನೆ ನೀಡಿವೆ. ಸದ್ಯ ಆ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಬೇಕಿದೆ ಎಂದ ಅಡ್ವೊಕೇಟ್ ಜನರಲ್, ವಿಧೇಯಕಕ್ಕೂ ಮುನ್ನವೇ ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಅದು ಸಂವಿಧಾನದ ಕಲಂ 162 ರಡಿ ಊರ್ಜಿತವಾಗುತ್ತದೆ. ಸಾರ್ವಜನಿಕ ಆರೋಗ್ಯ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ, ಸರ್ಕಾರಗಳು ಈ ಹಿಂದೆ ಸಾರಾಯಿ, ಲಾಟರಿ ಹಾಗೂ ಗುಟ್ಕಾ ನಿಷೇಧಿಸಿದ್ದಂತೆ ಇದೀಗ ಹುಕ್ಕಾ ನಿಷೇಧಿಸಲಾಗಿದೆ. ಅಲ್ಲದೆ, ಕರ್ನಾಟಕ ಮಾತ್ರವಲ್ಲದೆ, ದೇಶದ ಇತರೆ ಐದು ರಾಜ್ಯಗಳು ಕೋಟ್ಪಾ ಕಾಯ್ದೆಗೆ ತಿದ್ದುಪಡಿ ಮಾಡಿ ಹುಕ್ಕಾ ನಿಷೇಧ ಜಾರಿಗೊಳಿಸಿವೆ ಎಂದು ಸರ್ಕಾರದ ಕ್ರಮವನ್ನು ಎಜಿ ಸಮರ್ಥಿಸಿಕೊಂಡರು.
ಅರ್ಜಿದಾರರ ಪರ ವಕೀಲರು, ಕೋಟ್ಪಾ ಕಾಯ್ದೆ ಅನ್ವಯ ಧೂಮಪಾನಕ್ಕೆ ಅವಕಾಶವಿದೆ. ಆದರೆ ಅದಕ್ಕೆ ಪ್ರತ್ಯೇಕ ಸ್ಥಳವನ್ನು ನಿಗದಿ ಮಾಡಬೇಕಿದೆ. ಕಾಯಿದೆಯಲ್ಲಿ ಧೂಮಪಾನಕ್ಕೆ ನಿಷೇಧವಿಲ್ಲ, ಕೆಲವು ನಿಯಂತ್ರಣಗಳಿವೆ. ಅಲ್ಲದೆ, ಹುಕ್ಕಾ ಸೇವನೆ ಪ್ರದೇಶದಲ್ಲಿ ಇತರೆ ಯಾವುದೇ ಆಹಾರ ಪದಾರ್ಥಗಳನ್ನು ಸೇವನೆ ಮಾಡಲು ಅವಕಾಶ ನೀಡುತ್ತಿಲ್ಲ. ಕೋಟ್ಪಾ ಕಾಯ್ದೆ ಅನ್ವಯವೇ ಹುಕ್ಕಾ ಪಾರ್ಲರ್‌ಗಳನ್ನು ನಡೆಸಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದರು.
ಇದನ್ನೂ ಓದಿ: ಕೆಎಸ್ಬಿಸಿ ಅಧ್ಯಕ್ಷರ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ - High Court stayed