ಬೆಂಗಳೂರು: ರೈಲುಗಳಲ್ಲಿ ಪ್ರಯಾಣಿಸುವವರಿಗೆ ಉತ್ತಮ ಗುಣಮಟ್ಟದ ಆಹಾರ ಒದಗಿಸಲು ಹಾಗೂ ಸ್ವಚ್ಛತೆ ಖಾತ್ರಿ ಪಡಿಸಲು ಕೈಗೊಂಡಿರುವ ಕೇಂದ್ರ ಸರ್ಕಾರದ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಸೂಚಿಸಿದ ಹೈಕೋರ್ಟ್, ರೈಲ್ವೆ ನಿಲ್ದಾಣಗಳ ಬಳಿಯಲ್ಲಿ ಮೂಲ ಅಡುಗೆ ಕೋಣೆ ಹೊಂದಿರಬೇಕು ಎಂಬುದಾಗಿ ರೈಲ್ವೆ ಕ್ಯಾಟರಿಂಗ್ ನೀತಿ 2017ಕ್ಕೆ ತಿದ್ದುಪಡಿ ಮಾಡಿದ ರೈಲ್ವೆ ಸಚಿವಾಲಯದ ಕ್ರಮವನ್ನು ಎತ್ತಿಹಿಡಿದಿದೆ.
ಕ್ಯಾಟರಿಂಗ್ ಸೇವೆ ಕುರಿತು 2023 ರ ನ.14ರಂದು ಹೊರಡಿಸಿದ್ದ ವಾಣಿಜ್ಯ ಸುತ್ತೋಲೆಯನ್ನು ಪ್ರಶ್ನಿಸಿ ನೈಋತ್ಯ ಕ್ಯಾಟರಿಂಗ್ ಗುತ್ತಿಗೆದಾರರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಅಲ್ಲದೇ ಆಹಾರವನ್ನು ಸಿದ್ಧಪಡಿಸುವುದು, ಆಹಾರವನ್ನು ಪೂರೈಸುವುದು ಮತ್ತು ಆಹಾರ ಸಿದ್ಧಪಡಿಸುವ ವೇಳೆ ಗುಣಮಟ್ಟವನ್ನು ಖಾತ್ರಿಪಡಿಸುವುದು ಮತ್ತಿತರ ವಿಚಾರಗಳಲ್ಲಿ ರೈಲ್ವೆಯು ಸಾರ್ವಜನಿಕ ಹಿತಾಸಕ್ತಿಯಿಂದ ನಿರ್ಧಾರಗಳನ್ನು ಕೈಗೊಂಡಿರುತ್ತದೆ. ಆದ್ದರಿಂದ ಆಹಾರ ಸಿದ್ಧಪಡಿಸುವುದು ಮತ್ತು ಆಹಾರ ಪೂರೈಕೆ ಬೇರೆ ಬೇರೆ ಎಂಬ ವಾದ ಒಪ್ಪಲಾಗದು. ಈ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ವ್ಯವಸ್ಥೆಯನ್ನು ಸರಿಯಾಗಿಟ್ಟುಕೊಳ್ಳುವ ಹೊಣೆಗಾರಿಕೆ ರೈಲ್ವೆಯ ಮೇಲಿದ್ದು, ನ್ಯಾಯಾಲಯ ಹಸ್ತಕ್ಷೇಪ ಮಾಡಲಾಗದು ಎಂದು ಪೀಠ ತಿಳಿಸಿದೆ.
ಅಲ್ಲದೆ, ಆಹಾರ ಪೂರೈಕೆಯಲ್ಲಿ ಗುಣಮಟ್ಟ ಮತ್ತು ಹೊಣೆಗಾರಿಕೆ ತರಲು ನೀತಿಯಲ್ಲಿ ತಿದ್ದುಪಡಿ ಮಾಡಿರುವುದರಿಂದ ಅದು ಕಾನೂನು ಬಾಹಿರ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಹೇಳಲಾಗದು. ಈ ವಿಚಾರದಲ್ಲಿ ಗುತ್ತಿಗೆದಾರರ ಹಿತಕ್ಕಿಂತ ಸಾರ್ವಜನಿಕ ಹಿತವೇ ಮುಖ್ಯವಾಗುತ್ತದೆ. ಹಾಗಾಗಿ ಅರ್ಜಿದಾರರ ವಾದವನ್ನು ಒಪ್ಪಲಾಗದು ಎಂದು ನ್ಯಾಯಪೀಠ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 2017ರ ರೈಲ್ವೆ ಕ್ಯಾಟರಿಂಗ್ ನೀತಿಯನ್ನು ಕೇಂದ್ರ ಸಂಪುಟದ ನಿರ್ಧಾರದಂತೆ ಕೈಗೊಳ್ಳಲಾಗಿದೆ. ಬಜೆಟ್ ನಲ್ಲಿ ಘೋಷಿಸಲಾಗಿದ್ದ ನೀತಿಯನ್ನು ನಂತರ ಜಾರಿಗೊಳಿಸಲಾಗಿದೆ. ಆದರೆ ತಿದ್ದುಪಡಿಯನ್ನು ಸಂಪುಟದ ಮುಂದೆ ತಂದಿಲ್ಲ, ಬದಲಿಗೆ ರೈಲ್ವೆ ಸಚಿವಾಲಯ ಹಾಗೂ ರೈಲ್ವೆ ಮಂಡಳಿ ನಿರ್ಧಾರ ಕೈಗೊಂಡಿದೆ. ಹಾಗಾಗಿ ಆ ತೀರ್ಮಾನ ಊರ್ಜಿತವಲ್ಲ. ಅಲ್ಲದೆ, ತಿದ್ದುಪಡಿ ನೀತಿಗೆ ತದ್ವಿರುದ್ಧವಾಗಿದೆ. ನೀತಿಯ ಪ್ರಕಾರ ಐಆರ್‌ಸಿಟಿಸಿ ಹೊರತುಪಡಿಸಿ ಇತರೆ ಗುತ್ತಿಗೆದಾರರಿಗೆ ಅವಕಾಶವಿರುವುದಿಲ್ಲ. ಆದರೆ ಇದೀಗ ಇತರೆ ಗುತ್ತಿಗೆದಾರರಿಗೂ ಮುಕ್ತ ಅವಕಾಶ ನೀಡಲಾಗುತ್ತಿದೆ ಎಂದು ಪೀಠಕ್ಕೆ ವಿವರಿಸಿದರು.
ಆದರೆ, ರೈಲ್ವೆ ಪರ ವಕೀಲರು, ರೈಲುಗಳಲ್ಲಿ ಪೂರೈಸಲಾಗುವ ಆಹಾರ ಪದಾರ್ಥಗಳಲ್ಲಿ ಸ್ವಚ್ಛತೆ, ಗುಣಮಟ್ಟವನ್ನು ಕಾಯ್ದುಕೊಳ್ಳುವ ಹೊಣೆಗಾರಿಕೆಯನ್ನು ನಿಗದಿಪಡಿಸುವ ಉದ್ದೇಶದಿಂದ ತಿದ್ದುಪಡಿ ಮಾಡಲಾಗಿದೆ. ಮೊದಲಿಗೆ ಈ ಪ್ರಸ್ತಾವವನ್ನು ರೈಲ್ವೆ ಸಚಿವಾಲಯಕ್ಕೆ ಸಲ್ಲಿಸಲಾಗಿತ್ತು. 2017ರಲ್ಲಿ ಈ ಕುರಿತು ಸುತ್ತೋಲೆ ಹೊರಡಿಸಲಾಗಿತ್ತು. ಜತೆಗೆ ಐಆರ್‌ಸಿಟಿಸಿ ಹಲವು ಗುತ್ತಿಗೆದಾರರೊಂದಿಗೆ ಉಪಗುತ್ತಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಅವರ ಅಡುಗೆ ಕೋಣೆಗಳಲ್ಲಿ ಶುಚಿತ್ವದ ದೊಡ್ಡ ಸಮಸ್ಯೆಯಾಗಿದೆ. ಹಾಗಾಗಿ ಯಾವ ಅಡುಗೆ ಕೋಣೆಗಳಿಂದ ಆಹಾರ ಪೂರೈಸಲಾಗುತ್ತಿದೆ ಎಂಬ ಬಗ್ಗೆ ಉತ್ತರದಾಯಿತ್ವವನ್ನು ನಿಗದಿಪಡಿಸಲು ನೀತಿಯಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ವಾದಿಸಿ, ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.
ಇದನ್ನೂಓದಿ:ಆರ್ಥಿಕ ಹಿಂದುಳಿದವರಿಗೆ ಶೇ.10 ಮೀಸಲಾತಿ ಜಾರಿಗೆ ಕೋರಿ ಅರ್ಜಿ: ಕೇಂದ್ರ, ರಾಜ್ಯಕ್ಕೆ ಹೈಕೋರ್ಟ್ ನೋಟಿಸ್