ಬೆಂಗಳೂರು: ಧಾರ್ಮಿಕ ಸ್ಥಳದಲ್ಲಿ ರಾಜಕೀಯ ಭಾಷಣ ಮಾಡಿ ಮತದಾರರ ಮೇಲೆ ಪ್ರಭಾವ ಬೀರಿದ ಮತ್ತು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ.
ರಾಘವೇಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ ಎಫ್‌ಐಆರ್‌ಗೆ ತಡೆ ನೀಡಿ ಆದೇಶಿಸಿತು. ಚಿತ್ರದುರ್ಗ ಗ್ರಾಮಾಂತರ ಠಾಣಾ ಪೊಲೀಸರು ಮತ್ತು ಪ್ರಕರಣದ ದೂರುದಾರರಾದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಸಂಚಾರಿ ವಿಚಕ್ಷಣಾ ದಳದ ಅಧಿಕಾರಿ ಪಿ.ಅವಿನಾಶ್ ಅವರಿಗೆ ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ನೋಟಿಸ್ ಜಾರಿಗೊಳಿಸಿದೆ.
ದೂರಿನ ವಿವರ: '2024ರ ಮಾ.23ರಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಚಿತ್ರದುರ್ಗದ ಸಿದ್ದೇಶ್ವರ ಭೋವಿ ಸಮಾಜ ಗುರುಪೀಠದಲ್ಲಿ ಸಭೆ ನಡೆಸಿದ್ದರು. ಈ ವೇಳೆ ಮತದಾರರ ಮೇಲೆ ಪ್ರಭಾವ ಬೀರಲು ಭಾಷಣ ಮಾಡಿ ಧಾರ್ಮಿಕ ಸ್ಥಳವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಸಭೆ ನಡೆಸಲು ಚುನಾವಣಾ ಆಯೋಗದಿಂದ ಪೂರ್ವಾನುಮತಿ ಪಡೆದಿಲ್ಲ. ಈ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ' ಎಂದು ಆರೋಪಿಸಿ ಸಂಚಾರಿ ವಿಚಕ್ಷಣಾ ದಳದ ಅಧಿಕಾರಿ ಪಿ.ಅವಿನಾಶ್ ಚಿತ್ರದುರ್ಗ ಗ್ರಾಮೀಣ ಠಾಣಾ ಪೊಲೀಸರಿಗೆ 2024ರ ಮಾ.23ರಂದು ದೂರು ನೀಡಿದ್ದರು. ಇದನ್ನು ಪರಿಗಣಿಸಿದ್ದ ಪೊಲೀಸರು, ಧಾರ್ಮಿಕ ಸಂಸ್ಥೆಗಳ (ದುರ್ಬಳಕೆ ತಡೆ) ಕಾಯ್ದೆ-1988 ಮತ್ತು ಜನಪ್ರತಿನಿಧಿಗಳ ಕಾಯ್ದೆ-1951 ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್ 171ಎಫ್ (ಚುನಾವಣೆಯಲ್ಲಿ ಅನಪೇಕ್ಷಿತ ಪ್ರಭಾವ ಬೀರಿದ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿರುವ ರಾಘವೇಂದ್ರ, ತಾವು ಎಸಗಿದ್ದೇವೆ ಎನ್ನಲಾದ ಅಪರಾಧಗಳ ಬಗ್ಗೆ ಎಫ್‌ಐಆರ್‌ನಲ್ಲಿ ಮಾಹಿತಿ ಉಲ್ಲೇಖಿಸಿಲ್ಲ. ಹಾಗಾಗಿ, ಕ್ರಿಮಿನಲ್ ಪ್ರಕ್ರಿಯೆ ಮುಂದುವರಿಸಿದರೆ, ಅದು ಕಾನೂನಿನ ದುರ್ಬಳಕೆಯಾಗಲಿದೆ. ಹಾಗಾಗಿ, ತಮ್ಮ ವಿರುದ್ಧ ಎಫ್‌ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ರದ್ದುಪಡಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೆ ಎಫ್‌ಐಆರ್‌ಗೆ ಮಧ್ಯಂತರ ತಡೆ ನೀಡಬೇಕು ಎಂದು ಕೋರಿದ್ದಾರೆ.
ಇದನ್ನೂ ಓದಿ: ಯತ್ನಾಳ್ ಕುಟುಂಬ ಒಡೆತನದ ಸಿದ್ಧಸಿರಿ ಎಥೆನಾಲ್ ಘಟಕ ಬಂದ್ ಆದೇಶಕ್ಕೆ ಕಾರಣ ನೀಡಬೇಕು: ಹೈಕೋರ್ಟ್ - Siddhasiri Ethanol Unit