ಬೆಂಗಳೂರು : ಆರೋಪಿತರ ಮನೆಯಲ್ಲಿ ಬೆಕ್ಕು ಇರುವುದು ಸಿಸಿ ಕ್ಯಾಮೆರಾದಲ್ಲಿ ಕಾಣಿಸಿದೆ ಎಂಬ ಕಾರಣಕ್ಕೆ ಜೀವ ಬೆದರಿಕೆ, ಶಾಂತಿ ಭಂಗ ಹಾಗೂ ಮಹಿಳೆಯ ಘನತೆಗೆ ಧಕ್ಕೆಯಾಗಿದೆ ಎಂಬ ದೂರಿನ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ.
ಪ್ರಕರಣ ಸಂಬಂಧ ಆರೋಪ ಪಟ್ಟಿ ಸಲ್ಲಿಸಿರುವ ಕುರಿತು ನ್ಯಾಯಪೀಠ ಅಚ್ಚರಿ ವ್ಯಕ್ತಪಡಿಸಿದ್ದು, ಪ್ರಕರಣ ವಿಚಾರಣೆಗೆ ತಡೆಯಾಜ್ಞೆ ನೀಡಿ ಆದೇಶಿಸಿದೆ. ಅಲ್ಲದೇ, ಅರ್ಜಿ ಸಂಬಂಧ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ಆದೇಶಿಸಲಾಗಿದೆ.
ಪ್ರಕರಣ ರದ್ದುಕೋರಿ ಆರೋಪಿತರಾಗಿರುವ ತಹ ಹುಸೈನ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಬೆಕ್ಕು ಮನೆಯಲ್ಲಿ ಕಾಣಿಸಿಕೊಂಡಿರುವುದಕ್ಕೂ ಮಹಿಳೆಯ ಘನತೆಗೆ ಧಕ್ಕೆ ತಂದ ಪ್ರಕರಣಕ್ಕೂ ಎಲ್ಲಿಂದ ಸಂಬಂಧವಯ್ಯಾ? ಇಂತಹ ನಿಷ್ಪ್ರಯೋಜಕ ಪ್ರಕರಣಗಳನ್ನು ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿತು.
ಬೇಸರ ವ್ಯಕ್ತಪಡಿಸಿದ ಪೀಠ: ಅಯ್ಯೋ ದೇವರೇ..! ನಿಜವಾದ ಅಪರಾಧ ಪ್ರಕರಣಗಳನ್ನು ನೋಡಿ ಎಂದರೆ, ಬೆಕ್ಕು ಕಾಣೆಯಾದ ಪ್ರಕರಣವನ್ನು ಪೊಲೀಸರು ನೋಡುತ್ತಾರೆ. ಬೆಕ್ಕು ಎಲ್ಲರ ಮನೆಗೆ ಒಳಗೆ ಹೋಗಿ ಹೊರಬಂದಿದೆ. ಇದರಿಂದ ಬೆಕ್ಕು ಕಾಣೆಯಾಗಿದೆ ಎಂದು ದೂರು ನೀಡಿದರೆ, ಅದನ್ನು ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.
ತಹ ಹುಸೈನ್ ಅವರ ಮನೆಯ ಕಿಟಕಿಯಿಂದ ಬೆಕ್ಕು ಒಳ ಬರುತ್ತದೆ ಹಾಗೂ ಹೊರ ಹೋಗುತ್ತದೆ. ಹಾಗಾಂದ ಮಾತ್ರಕ್ಕೆ ಜೀವ ಬೆದರಿಕೆ, ಮಹಿಳೆಯ ಘನತೆಗೆ ಧಕ್ಕೆ ತಂದ ಮತ್ತು ಶಾಂತಿ ಭಂಗ ಅಪರಾಧ ಕೃತ್ಯ ಎಸಗಿದಂತಾಗುವುದಿಲ್ಲ ಎಂಬ ಅರ್ಜಿದಾರರ ಪರ ವಕೀಲರ ವಾದವನ್ನು ನ್ಯಾಯಮೂರ್ತಿಗಳು ಪರಿಗಣಿಸಿದರು. ಇಂತಹ ನಿಷ್ಪ್ರಯೋಜಕ ಪ್ರಕರಣದ ವಿಚಾರಣೆ ಮುಂದುವರಿಸಲು ಅನುಮತಿಸಿದರೆ, ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ಭಂಗ ಉಂಟು ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.
ವಿಚಾರಣೆ ಆರಂಭವಾಗುತ್ತಿದ್ದಂತೆಯೇ? ಏನಿದು.. ಬೆಕ್ಕಿಗಾಗಿ ಕದನ? ಅರ್ಜಿದಾರರು ಏಕೆ ಬೆಕ್ಕನ್ನು ಕಳವು ಮಾಡಿದ್ದಾರೆ? ಬೆಕ್ಕನ್ನು ಏಕೆ ಹಿಡಿದುಕೊಂಡಿದ್ದರು? ಅವರ ಮನೆಯಲ್ಲಿ ಬೆಕ್ಕು ಏಕೆ ಇತ್ತು? ಮಹಿಳೆಯ ಘನತೆಗೆ ಧಕ್ಕೆ ತಂದಿರುವುದಕ್ಕೂ ಬೆಕ್ಕಿಗೂ ಏನು ಸಂಬಂಧ? ಅರ್ಜಿದಾರರ ಪರ ವಕೀಲರನ್ನು ನ್ಯಾಯೂರ್ತಿಗಳು ಪ್ರಶ್ನಿಸಿದರು.
ಅರ್ಜಿದಾರರ ಪರ ವಕೀಲರು ಉತ್ತರಿಸಿ, ಬೆಕ್ಕು ಒಂದು ಕಾಂಪೌಂಡ್‌ನಿಂದ ಮತ್ತೊಂದು ಕಾಂಪೌಂಡ್ ಹಾರಿ ಹೋಗಿರುವುದು ಹಾಗೂ ಕಿಟಕಿಯ ಒಳಗೆ ಮತ್ತು ಹೊರಗೆ ಬರುವ ಸಿಸಿಟಿವಿಯ ದೃಶ್ಯಗಳನ್ನು ನ್ಯಾಯಾಲಯಕ್ಕೆ ಒದಗಿಸಲಾಗಿದೆ. ಈಗಾಗಲೇ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಅಪಹರಣ ಪ್ರಕರಣ ದಾಖಲಿಸಿಲ್ಲವಷ್ಟೇ ಎಂದು ವಿವರಿಸಿದರು.
ಪ್ರಕರಣದ ಹಿನ್ನೆಲೆ: ದೂರುದಾರರಾದ ಅಂಜನಾ ಅಯ್ಯಂಗ್ ಎಂಬುವರ ತಮ್ಮ ಡೈಸಿ ಎಂಬ ಹೆಸರಿನ ಬೆಕ್ಕು ಆನೇಕಲ್ ತಾಲೂಕಿನ ಶಿಕಾರಿಪಾಳ್ಯದ ಸಿರಾಜ್ ಬಡಾವಣೆಯ ೨ನೇ ಅಡ್ಡರಸ್ತೆಯಲ್ಲಿ ನೆಲೆಸಿರುವ ತಹ ಹುಸೈನ್ ಎಂಬುವರ ಮನೆಯಲ್ಲಿರುವುದು ಸಿಸಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿತ್ತು.
ಇದಾದ ಬಳಿಕ ಬೆಕ್ಕು ಮತ್ತೆ ಮನೆಗೆ ಹಿಂದಿರುಗಿರಲಿಲ್ಲ. ಇದರಿಂದ ತಹ ಹುಸೈನ್ ಬೆಕ್ಕನ್ನು ಕಳವು ಮಾಡಿರಬಹುದು ಎಂದು ಅಂಜನಾ ಹೆಬ್ಬಗೋಡಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡಿದ್ದ ಪೊಲೀಸರು ಅರ್ಜಿದಾರರ ವಿರುದ್ಧ ಜೀವ ಬೆದರಿಕೆ, ಶಾಂತಿಭಂಗ ಮತ್ತು ಮಹಿಳೆಯ ಘನತೆಗೆ ಧಕ್ಕೆತಂದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದರು. ಇದಾದ ಬಳಿಕ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ಸಂಬಂಧ ಆನೇಕಲ್‌ನ ೪ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ೨೦೨೨ರ ಸೆ.೨ರಂದು ಕಾಗ್ನಿಜೆನ್ಸ್ ತೆಗೆದುಕೊಂಡಿತ್ತು. ಇದನ್ನು ಪ್ರಶ್ನಿಸಿ ಆರೋಪಿತರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರು ಪರ ವಕೀಲರು, ಬೆಕ್ಕು ಒಂದು ಕಾಪೌಂಡ್‌ನಿಂದ ಮತ್ತೊಂದು ಕಾಂಪೌಂಡ್ ಹಾರಿ ಹೋಗುತ್ತಿರುವುದು, ಮನೆಯ ಕಿಟಕಿಯಿಂದ ಒಳ ಮತ್ತು ಹೊರ ಹೋಗುವ ಸಿಸಿಟಿವಿಯ ದೃಶ್ಯಗಳನ್ನು ನ್ಯಾಯಾಲಯಕ್ಕೆ ಒದಗಿಸಲಾಗಿದೆ. ಹೀಗಾಗಿ ಆರೋಪ ಪಟ್ಟಿ ರದ್ದುಪಡಿಸಬೇಕು ಎಂದು ಕೋರಿದ್ದರು.
ಇದನ್ನೂ ಓದಿ : ವಿನಾಯ್ತಿದ್ದರೂ 50 ವರ್ಷ ಮೇಲ್ಪಟ್ಟ ಶಿಕ್ಷಕರ ವರ್ಗಾವಣೆ: ರದ್ದುಪಡಿಸಿದ್ದ ಕೆಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್ - High Court