ಬೆಂಗಳೂರು: ಶ್ವಾನಗಳಲ್ಲಿಯೇ ಅತ್ಯಂತ ಅಪಾಯಕಾರಿ ಹಾಗೂ ಕ್ರೂರವಾಗಿರುವ ತಳಿಗಳ ಸಂತಾನೋತ್ಪತ್ತಿಗೆ ನಿಷೇಧ ಹೇರಿ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ತೀರ್ಪು ಕಾಯ್ದಿರಿಸಿದೆ.
ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ ಬೆಂಗಳೂರು ನಗರದಲ್ಲಿ ವಾಸವಿರುವ ಕಿಂಗ್ ಸೋಲ್ಮನ್ ಡೇವಿಡ್ ಮತ್ತು ಮರ್ಡೋನಾ ಜಾನ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ನಡೆಸಿದೆ.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು ಹಾಜರಾಗಿ, ದೆಹಲಿ ಹೈಕೋರ್ಟ್ ಆದೇಶದಂತೆ ಶ್ವಾನ ತಳಿಗಳ ಎಲ್ಲ ತಳಿಗಾರರ ಸಂಸ್ಥೆಗಳೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಅಲ್ಲದೆ, ಈ ಕುರಿತ ಶ್ವಾನ ತಳಿಗಾರರೊಂದಿಗೆ ಮತ್ತೊಂದು ಅವಧಿಗೆ ಚರ್ಚೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಅರ್ಜಿದಾರರ ಪರ ವಕೀಲರು, ಅಪಾಯಕಾರಿ ಶ್ವಾನಗಳ ತಳಿಗಳ ನಿಷೇಧಕ್ಕೆ ಸಂಬಂಧಿಸಿದಂತೆ ಪ್ರತಿವಾದಿ ಇಲಾಖೆ ರಚಿಸಿದ ತಾಂತ್ರಿಕ ತಜ್ಞರ ಸಮಿತಿಯಲ್ಲಿ ಒಬ್ಬನೇ ಒಬ್ಬ ತಜ್ಞರು ಇರಲಿಲ್ಲ. ದೊಡ್ಡ ನಾಯಿಗಳ ನಡವಳಿಕೆ ಮತ್ತು ತರಬೇತಿಯ ವಿಷಯಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ರಚನೆ ಮಾಡಬೇಕು ಎಂದು ಮನವಿ ಮಾಡಿದ್ದರು.
ಅರ್ಜಿಗೆ ಸಂಬಂಧಿಸಿದಂತೆ ಈ ಹಿಂದೆ ನಡೆದ ವಿಚಾರಣೆ ವೇಳೆ, ಮನುಷ್ಯನ ಜೀವಕ್ಕೆ ಅಪಾಯಕಾರಿ ಮತ್ತು ಉಗ್ರವಾಗಿ ವರ್ತಿಸುವ ತಳಿಯ ಶ್ವಾನಗಳನ್ನು ಗುರುತಿಸುವುದಕ್ಕೆ ಆಳವಾದ ಅಧ್ಯಯನ ಅಗತ್ಯವಿದೆ. ಆದರೆ, ಸುತ್ತೋಲೆಯಲ್ಲಿ ಉಲ್ಲೇಖಿಸದ ಹಲವು ತಳಿಗಳು ಕ್ರೂರ ವರ್ಗಕ್ಕೆ ಸೇರಲಿವೆ ಎಂದು ಪೀಠಕ್ಕೆ ವಿವರಿಸಿದ್ದರು.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್, ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ವೇಳೆ ದೆಹಲಿ ನ್ಯಾಯಾಲಯ ಈ ಸಂಬಂಧ ನಿರ್ದೇಶನ ನೀಡಿದೆ. ಅಲ್ಲದೆ, ಕೇಂದ್ರ ಸರ್ಕಾರವು ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಬೇಕು. ಅರ್ಜಿದಾರರ ಮನವಿಯನ್ನು ಪರಿಗಣಿಸಿ ಆದೇಶದ ಪ್ರತಿ ಲಭ್ಯವಾದ ಮೂರು ತಿಂಗಳೊಳಗೆ ಈ ಕುರಿತಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ನಿಷೇಧ ಹೇರಿದ್ದ ಶ್ವಾನ ತಳಿಗಳು: ಕ್ರೂರ ಹಾಗೂ ಅಪಾಯಕಾರಿ ಶ್ವಾನಗಳ ತಳಿಗಳ (ಅಮೆರಿಕನ್ ಸ್ಟಾಫರ್ಡ್ ಶೈರ್, ಟೆರಿಯರ್, ಡೋಗೋ ಅರ್ಜೆಂಟೇನೋ, ಬುಲ್ ಡಾಗ್, ಕಂಗಲ್, ಸೆಂಟ್ರಲ್ ಏಷ್ಯನ್ ಷಫರ್ಡ್ ಡಾಗ್ ಸೇರಿದಂತೆ ಮಿಶ್ರ ತಳಿಯ ಶ್ವಾನಗಳ) ಸಂತಾನೋತ್ಪತ್ತಿ ನಿಷೇಧಿಸುವ ಸಲುವಾಗಿ ಅವುಗಳ ಮಾಲೀಕರು ಸಂತಾನ ಹರಣಕ್ಕಾಗಿ ಅಗತ್ಯವಿರುವ ಔಷಧಿಗಳನ್ನು ಬಳಕೆ ಮಾಡಬೇಕು ಎಂದು ಸುತ್ತೋಲೆ ಹೊರಡಿಸಲಾಗಿತ್ತು. ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ 2024 ರ ಮಾರ್ಚ್ 12 ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ಈ ಬಗ್ಗೆ ತಿಳಿಸಲಾಗಿತ್ತು. ಇದನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಪುಂಡರಿಗೆ ಬುದ್ದಿ ಕಲಿಸಿದರೆ ಎಲ್ಲ ಸರಿಯಾಗಲಿದೆ: ಹೈಕೋರ್ಟ್ - Bhagwa Dhwaj Case