ಬೆಂಗಳೂರು: ರಾಜ್ಯದಲ್ಲಿ 2013-14 ನೇ ಸಾಲಿನಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರ (ಎಪಿಪಿ) ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ವೆಸಗಿದ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ಹಾಗೂ ಅದರ ಸಂಬಂಧ ಲೋಕಾಯುಕ್ತ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನಿರಾಕರಿಸಿದೆ.
ಕಲಬುರಗಿಯ ಚಾಯದೇವಿ ಸೇರಿದಂತೆ 36 ಮಂದಿ ಅಭಿಯೋಜಕರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಆರ್ ನಟರಾಜ್ ಅವರ ನ್ಯಾಯಪೀಠ ಆದೇಶ ಪ್ರಕಟಿಸಿದೆ. ಹೈಕೋರ್ಟ್ನ ಈ ಆದೇಶದಿಂದ 36 ಆರೋಪಿಗಳ ಮೇಲೆ ಲೋಕಾಯುಕ್ತ ವಿಶೇಷ ನ್ಯಾಯಾಲಯದ ವಿಚಾರಣೆಗೆ ಹಸಿರು ನಿಶಾನೆ ಸಿಕ್ಕಂತಾಗಿದೆ.
ಪ್ರಕರಣದ ಸಂಬಂಧ ಲೋಕಾಯುಕ್ತ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡಿರುವುದು ದೋಷಪೂರಿತವಾಗಿದೆ ಹಾಗೂ ತಮ್ಮ ವಿರುದ್ಧದ ಆರೋಪಗಳಿಗೆ ಪೂರಕ ಸಾಕ್ಷ್ಯಗಳಿಲ್ಲ. ಆದ್ದರಿಂದ ತಮ್ಮ ವಿರುದ್ಧದ ಪ್ರಕರಣದ ವಿಚಾರಣೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಅದನ್ನು ಆಕ್ಷೇಪಿಸಿದ್ದ ಲೋಕಾಯುಕ್ತ ಪರ ವಿಶೇಷ ಅಭಿಯೋಜಕ ಬಿ ಎಸ್ ಪ್ರಸಾದ್, ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ. ಅರ್ಜಿದಾರರ ಉತ್ತರ ಪತ್ರಿಕೆ ಹಾಗೂ ಅಂಕಗಳನ್ನು ತಿದ್ದಲಾಗಿದೆ. ಇದರ ಪರಿಣಾಮ ಅವರು ಎಪಿಪಿ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಪ್ರಕರಣದ ವಿಚಾರಣೆ ಮುಂದುವರಿಯಬೇಕಿದೆ. ಅರ್ಜಿದಾರರು ಅಕ್ರಮ ಎಸಗಿದ್ದಾರೆಯೋ ಅಥವಾ ಇಲ್ಲವೋ ಎಂಬುದು ವಿಚಾರಣಾ ನ್ಯಾಯಾಲಯದ ವಿಚಾರಣೆಯಲ್ಲಿಯೇ ತೀರ್ಮಾನವಾಗಬೇಕಿದೆ. ಹಾಗಾಗಿ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಬಾರದು ಎಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ : 2013-14ನೇ ಸಾಲಿನಲ್ಲಿ ಸುಮಾರು 180 ಎಪಿಪಿ ಹುದ್ದೆಗಳ ನೇಮಕಾತಿ ನಡೆದಿತ್ತು. ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಉದ್ಯೋಗ ವಂಚಿತ ಅಭ್ಯರ್ಥಿ ರವಿ ಎಂಬಾತ ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯವು ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ಅದರಂತೆ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, 2016ರಲ್ಲಿ ಸುಮಾರು 62 ಮಂದಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದರಲ್ಲಿ ಇಬ್ಬರು ರಾಜ್ಯ ಅಭಿಯೋಜನಾ ಇಲಾಖೆ ಅಧಿಕಾರಿಗಳಾಗಿದ್ದರೆ, 60 ಮಂದಿ ಅಭ್ಯರ್ಥಿಗಳಾಗಿದ್ದರು.
ಮೌಲ್ಯಮಾಪನದ ನಂತರ ಅರ್ಜಿದಾರ ಆರೋಪಿಗಳ ಉತ್ತರ ಪತ್ರಿಕೆಗಳನ್ನು ತಿರುಚಲಾಗಿದೆ. ಮೌಲ್ಯಮಾಪನ ಮಾಡಿದ್ದ ಜಿಲ್ಲಾ ನ್ಯಾಯಾಧೀಶರ ಸಹಿಯನ್ನೇ ಫೋರ್ಜರಿ ಮಾಡಿ, ಹೆಚ್ಚು ಅಂಕ ನೀಡಲಾಗಿದೆ. ಇದರ ಪರಿಣಾಮ ಅವರೆಲ್ಲರೂ ಎಪಿಪಿ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಆರೋಪಿಸಲಾಗಿತ್ತು. ಅದನ್ನು ಆಧರಿಸಿ ಎಲ್ಲಾ ಆರೋಪಿಗಳನ್ನು ಸೇವೆಯಿಂದ ಅಮಾನತುಪಡಿಸಿ ಸರ್ಕಾರ ಆದೇಶಿಸಿದೆ. ಮತ್ತೊಂದೆಡೆ ಆರೋಪಿಗಳ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡು ಪ್ರಕರಣದ ವಿಚಾರಣೆ ನಡೆಸುತ್ತಿತ್ತು. ಇದರಿಂದ ತಮ್ಮ ವಿರುದ್ಧದ ಪ್ರಕರಣ ಮತ್ತು ಲೋಕಾಯುಕ್ತ ಕೋರ್ಟ್ ವಿಚಾರಣೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ರದ್ದು ಕೋರಿ ಶ್ರೀರಾಮುಲು ಸಲ್ಲಿಸಿದ್ದ ಅರ್ಜಿ ವಜಾ