ಬೆಂಗಳೂರು: ಹಿಂದೂ ಧರ್ಮದ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಆರೋಪದಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಆದೇಶದ ವಿಸ್ತೃತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ತಮ್ಮ ಮೇಲೆ ಹಾಕಿದ್ದ ಮಾನನಷ್ಟ ಮೊಕದ್ದಮೆ, ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದು ಮಾಡಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.
ಹಿಂದೂ ಎನ್ನುವುದು ಭಾರತೀಯ ಪದವಲ್ಲ. ಅದು ಪರ್ಷಿಯನ್ ನೆಲಕ್ಕೆ ಸೇರಿದ್ದು, ಅದೊಂದು ಅಶ್ಲೀಲ ಪದ ಎಂದು ಕಾರ್ಯಕ್ರಮವೊಂದರಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ವಿರುದ್ದ ವಕೀಲ ದಿಲೀಪ್ ದೂರು ದಾಖಲಿಸಿದ್ದರು.
ಅದರಂತೆ ಗಲಭೆಗೆ ಪ್ರಚೋದನೆ ನೀಡಿದ, ಮತ್ತೊಬ್ಬರಿಗೆ ಅವಮಾನ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅದನ್ನು ರದ್ದುಪಡಿಸುವಂತೆ ಕೋರಿ ಸತೀಶ ಜಾರಕಿಹೊಳಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: 'ಜನಸಾಮಾನ್ಯರಿಗೆ ತಿಳಿಯಬೇಕು': ಕನ್ನಡದಲ್ಲೇ ತೀರ್ಪು ಪ್ರಕಟಿಸಿದ ಹೈಕೋರ್ಟ್ ನ್ಯಾ.ಕೃಷ್ಣ ದೀಕ್ಷಿತ್