ಬೆಂಗಳೂರು: ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಮಹಾರಾಷ್ಟ್ರ ಮೂಲದ ಪರಿತೋಶ್ ಚಂದ್ರಶೇಖರ್ ಕುಲಕರ್ಣಿ ಎಂಬುವರ ವಿರುದ್ಧ ಮಾದಕ ದ್ರವ್ಯ ವಸ್ತುಗಳ ತಡೆ ಕಾಯ್ದೆ (ಎನ್‌ಡಿಪಿಎಸ್) ಅಡಿ ದಾಖಲಾಗಿದ್ದ ಪ್ರಕರಣ ಮತ್ತು ಅದರ ಕುರಿತ ವಿಚಾರಣೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಪ್ರಕರಣ ರದ್ದು ಕೋರಿ ಪರಿತೋಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಸುಪ್ರೀಂಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಪ್ರಕರಣದ ಒಂದನೇ ಹಾಗೂ ಎರಡನೇ ಆರೋಪಿಗಳು ಸಾಕ್ಷ್ಯ ಕಾಯ್ದೆ ಅನ್ವಯ ನೀಡಿರುವ ಸ್ವಯಂ ಹೇಳಿಕೆ ಅಥವಾ ತಪ್ಪೊಪ್ಪಿಗೆ ಹೇಳಿಕೆಯಂತೆ ಅರ್ಜಿದಾರರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಸಾಬೀತು ಪಡಿಸಲು ಯಾವುದೇ ಸಾಕ್ಷ್ಯ ಅಥವಾ ಪುರಾವೆ ಇಲ್ಲ. ಹೀಗಾಗಿ, ಎನ್‌ಡಿಪಿಎಸ್ ಕಾಯ್ದೆಯಡಿ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ಮುಂದುವರೆಸಲಾಗದು ಎಂದು ತಿಳಿಸಿದ ನ್ಯಾಯಪೀಠ, ಪ್ರಕರಣ ರದ್ದುಗೊಳಿಸಲಾಗುತ್ತಿದೆ ಎಂದು ಹೇಳಿದೆ.
ಅರ್ಜಿದಾರರು ವಿದೇಶದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ಸಹ ಆರೋಪಿಯ ಸ್ವಯಂ ಅಥವಾ ತಪ್ಪೊಪ್ಪಿಗೆ ಹೇಳಿಕೆ ಆಧರಿಸಿ ಅರ್ಜಿದಾರರು ಅನಗತ್ಯ ತೊಂದರೆ ಎದುರಿಸುವಂತಾಗಬಾರದು ಎಂದು ತಿಳಿಸಿದೆ.
ಅರ್ಜಿದಾರರು ಅಪರಾಧ ಘಟನೆಯ ಯಾವುದೇ ಹಂತದಲ್ಲಿ ಭಾಗಿಯಾಗಿಲ್ಲ. ಗಾಂಜಾ ವಶಪಡಿಸಿಕೊಂಡ ಸಂದರ್ಭದಲ್ಲಿ ಇಲ್ಲದ ಅರ್ಜಿದಾರರ ವಿರುದ್ಧ ಪ್ರಕರಣವನ್ನು ಮುಂದುವರೆಸಿದರೆ ಅದು ಕಾನೂನಿನ ದುರ್ಬಳಕೆ ಆಗುತ್ತದೆ. ಮತ್ತು ಅನ್ಯಾಯದ ಕ್ರಮವಾಗುತ್ತದೆ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: 2018ರಲ್ಲಿ ಅರ್ಜಿದಾರರು ಮಣಿಪಾಲ ತಾಂತ್ರಿಕ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದರು. ಆಗ ಪೊಲೀಸರು ಇಬ್ಬರ ಬಳಿ 2 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದರು. ಆಗ ಆರೋಪಿಯೊಬ್ಬ ಅರ್ಜಿದಾರರು ಮಾದಕವಸ್ತು ಸೇವನೆ ಚಟವನ್ನು ರೂಢಿಸಿಕೊಂಡಿದ್ದಾರೆ. ಆತನೂ ಸ್ಥಳದಿಂದ ನಾಪತ್ತೆಯಾಗಿದ್ದಾನೆ ಎಂದು ಹೇಳಿಕೆ ನೀಡಿದ್ದರು. ಆ ಹೇಳಿಕೆ ಆಧರಿಸಿ ಪೊಲೀಸರು 2022ರಲ್ಲಿ ಅರ್ಜಿದಾರರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು, ''ಪೊಲೀಸರು ಗಾಂಜಾ ವಶಪಡಿಸಿಕೊಂಡ ಸ್ಥಳದಿಂದ ಅರ್ಜಿದಾರರು ತಪ್ಪಿಸಿಕೊಂಡಿದ್ದಾರೆಂದು ಹೇಳಲಾಗಿದೆ. ಆದರೆ ಅದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಜೊತೆಗೆ ಕೇವಲ ಸಹ ಆರೋಪಿಗಳ ಹೇಳಿಕೆ ಆಧರಿಸಿ ಆರೋಪಿಯಾಗಿ ಪ್ರಕರಣದಲ್ಲಿ ಹೆಸರಿಸಲಾಗಿದೆ. ಆದರೆ ಆರೋಪಕ್ಕೆ ಯಾವುದೇ ಸಾಕ್ಷ್ಯವಿಲ್ಲ'' ಎಂದರು.
ಇದಕ್ಕೆ ಆಕ್ಷೇಪಿಸಿದ ಪ್ರಾಸಿಕ್ಯೂಷನ್ ಪರ ವಕೀಲರು, ''ಅರ್ಜಿದಾರರ ವಿರುದ್ಧ ಈಗಾಗಲೇ ಆರೋಪಪಟ್ಟಿ ಸಲ್ಲಿಸಿರುವುದರಿಂದ ಅವರು ಅಧೀನ ನ್ಯಾಯಾಲಯದಿಂದಲೇ ಆರೋಪ ಮುಕ್ತರಾಗಬೇಕು. ಸದ್ಯ ಆತ ವಿದೇಶದಲ್ಲಿದ್ದಾರೆ. ಹಲವು ಬಾರಿ ಜಾಮೀನು ರಹಿತ ವಾರಂಟ್ ಹೊರಡಿಸಿದ್ದರೂ ಸಹ ಅದಕ್ಕೆ ಸ್ಪಂದಿಸಿ ಸಹಕರಿಸುತ್ತಿಲ್ಲ. ಹಾಗಾಗಿ, ಪ್ರಕರಣ ರದ್ದುಗೊಳಿಸಬಾರದು'' ಎಂದು ಕೋರಿದರು.
ಇದನ್ನೂ ಓದಿ: ಕೋರ್ಟ್ ನಿರ್ಬಂಧವಿಲ್ಲದಿದ್ದರೆ ತಾಯಿಯೊಂದಿಗಿದ್ದ ಮಗುವನ್ನು ತಂದೆ ಕರೆದೊಯ್ದರೆ ಅಪಹರಣವಾಗಲ್ಲ: ಹೈಕೋರ್ಟ್ - high court