ಬೆಂಗಳೂರು: ನರೇಂದ್ರ ಮೋದಿ ಅವರ ಪರವಾಗಿ ಆಮಂತ್ರಣ ಪತ್ರಿಯಲ್ಲಿ ಮತಯಾಚನೆ ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಶಿವಪ್ರಸಾದ್ ಎಂಬುವರ ವಿರುದ್ಧ ಚುನಾವಣಾಧಿಕಾರಿ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ಉಪ್ಪಿನಂಗಡಿ ಠಾಣೆಯಲ್ಲಿ ತಮ್ಮ ವಿರುದ್ಧ ಜನಪ್ರತಿನಿಧಿಗಳ ಕಾಯ್ದೆ 1270ಎ (ಕರಪತ್ರ, ಪೋಸ್ಟರ್ ಇತ್ಯಾದಿ ಮುದ್ರಣಕ್ಕೆ ನಿರ್ಬಂಧ) ಅಡಿ ದಾಖಲಾಗಿರುವ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದ ನ್ಯಾಯಾಂಗ ಪ್ರಕ್ರಿಯೆ ರದ್ದು ಕೋರಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆಲಂತಾಯ ಗ್ರಾಮದ ಶಿವಪ್ರಸಾದ್ ಮತ್ತು ಗೌಳಿತೊಟ್ಟು ಗ್ರಾಮದ ಎ. ಬಾಲಕೃಷ್ಣ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ಅರ್ಜಿಯನ್ನು ಪುರಸ್ಕರಿಸಿದೆ. ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ. ವಿನೋದ್ ಕುಮಾರ್, ಚುನಾವಣೆಗೆ ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನ ಅಂದರೆ ಮಾರ್ಚ್ 1 ರಂದು ಆಹ್ವಾನ ಪತ್ರಿಕೆ ಮುದ್ರಿಸಲಾಗಿತ್ತು. ಆದರೆ, ಮಾರ್ಚ್ 16ರಂದು ಚುನಾವಣಾ ಅಧಿಸೂಚನೆ ಹೊರಡಿಸಿದ ಬಳಿಕ ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ಈ ಪ್ರಕರಣ ಪ್ರಜಾಪ್ರತಿನಿಧಿ ಕಾಯ್ದೆಗೆ ಅನ್ವಯವಾಗುವುದಿಲ್ಲ ಎಂದು ಪೀಠಕ್ಕೆ ತಿಳಿಸಿದರು. ವಾದ ಆಲಿಸಿದ ನ್ಯಾಯಪೀಠ ಪ್ರಕರಣ ರದ್ದುಗೊಳಿಸಿ ಆದೇಶಿಸಿತು.
ಈ ಹಿಂದೆ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಅರ್ಜಿದಾರ/ಆರೋಪಿಗಳ ವಿರುದ್ಧ ವಿಚಿತ್ರ ಆರೋಪ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟಿತ್ತು.
ಪ್ರಕರಣ ಹಿನ್ನೆಲೆ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ವಿಜಯಶಾಲಿಯನ್ನಾಗಿ ಮಾಡಿ ಮತ್ತೆ ಅವರನ್ನು ಪ್ರಧಾನಿ ಮಾಡುವುದೇ ವಧು-ವರರಿಗೆ ನೀಡುವ ಉಡುಗೊರೆ. ಏಕೆಂದರೆ ನಮ್ಮ ಭವಿಷ್ಯದ ಭಾರತ ಸುಭದ್ರವಾಗಿರಬೇಕು ಎಂಬುದಾಗಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಿವಪ್ರಸಾದ್ ಅವರು ಮತಯಾಚನೆ ಮಾಡಿದ್ದರು. ಈ ಕುರಿತು ಮಾಹಿತಿ ಗೊತ್ತಾದ ಬಳಿಕ 2024ರ ಲೋಕಸಭಾ ಚುನಾವಣೆ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್ ಕೆ. ಎನ್. ಸಂದೇಶ್ ಅವರು ಶಿವಪ್ರಸಾದ್ ವಿರುದ್ಧ ಜನಪ್ರತಿನಿಧಿಗಳ ಕಾಯ್ದೆಯಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಿದ್ದರು.
ಈ ಪ್ರಕರಣ ಮತ್ತು ನ್ಯಾಯಾಂಗ ತನಿಖೆ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಪೀಠ ವಿಚಾರಣೆ ನಡೆಸಿ, ಪ್ರಕರಣ ರದ್ದುಪಡಿಸಿದೆ.
ಇದನ್ನೂ ಓದಿ: ಪತ್ನಿಗಿಂತಲೂ ಬೆಕ್ಕಿನ ಮೇಲೆಯೇ ಪತಿಗೆ ಹೆಚ್ಚು ಕಾಳಜಿ ಆರೋಪ: ಪ್ರಕರಣಕ್ಕೆ ಹೈಕೋರ್ಟ್ ತಡೆ