ಬೆಂಗಳೂರು: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ವೈವಾಹಿಕ ಜೀವನ ನಡೆಸಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದ 26 ವರ್ಷದ ಯುವಕನಿಗೆ ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿದ್ದ 22 ಲಕ್ಷ ರೂ.ಗಳ ಪರಿಹಾರವನ್ನು ಹೈಕೋರ್ಟ್ 38 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಿ ಆದೇಶಿಸಿದೆ.
ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿದ್ದ 22 ಲಕ್ಷ ರೂ.ಗಳ ಪರಿಹಾರ ಹೆಚ್ಚಳ ಮಾಡುವಂತೆ ಕೋರಿ ಶಿವಮೊಗ್ಗ ಜಿಲ್ಲೆಯ ಯುವಕ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಜಯ್‌ಕುಮಾರ್ ಎ. ಪಾಟೀಲ್ ಅವರಿದ್ದ ಧಾರವಾಡ ಪೀಠ ಈ ಆದೇಶ ಮಾಡಿದೆ.
''ಅಪಘಾತದಿಂದ ಆಗಿರುವ ದೈಹಿಕ ಮತ್ತು ಮಾನಸಿಕ ನಷ್ಟವನ್ನು ಹಣದ ರೂಪದಲ್ಲಿ ಪರಿಗಣಿಸಲಾಗುವುದಿಲ್ಲ. ಭೌತಿಕವಾಗಿ ಆಗಿರುವ ನಷ್ಟಕ್ಕೆ ಪರಿಹಾರದ ಮೂಲಕ ಸರಿಪಡಿಸಲು ಸಾಧ್ಯವಿಲ್ಲ. ಮನುಷ್ಯನಿಗೆ ಆಗಿರುವ ನೋವನ್ನು ಹಣದ ಮೂಲಕ ಸಮೀಕರಣ ಮಾಡುವುದಕ್ಕೆ ಕಷ್ಟ ಸಾಧ್ಯ. ಆದರೂ, ನೋಂದವರಿಗೆ ನಷ್ಟ ಪರಿಹಾರ ನೀಡದೆ, ಬೇರೆ ಮಾರ್ಗವೇ ಇಲ್ಲ'' ಎಂದು ಪೀಠ ತಿಳಿಸಿದೆ.
ಅಲ್ಲದೆ, ಸುಪ್ರೀಂ ಕೋರ್ಟ್‌ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ''ಮೇಲ್ಮನವಿದಾರ ಕೃಷಿಕರಾಗಿದ್ದಾರೆ, ಅಪಘಾತದಲ್ಲಿ ಆತನ ಮೊಣಕಾಲಿನ ಮೇಲಿನಿಂದ ಬಲಗಾಲನ್ನು ತೆಗೆಯುವಂತಾಗಿದೆ. ಇದರಿಂದ ಮತ್ತೆ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಜತೆಗೆ, ಅಪಘಾತಕ್ಕೊಳಗಾದವರು ಪ್ರಸ್ತುತ 26 ವರ್ಷದವರಾಗಿದ್ದು, ಮುಂದಿನ ದಿನಗಳಲ್ಲಿ ವಿವಾಹ ಸೇರಿದಂತೆ ಸುಖದ ದಿನಗಳನ್ನು ಅನುಭವಿಸಲು ಸಾಧ್ಯವಾಗದಂತಹ ಸ್ಥಿತಿ ಎದುರಾಗಿದೆ. ಈ ಹಿಂದಿನ ದುಡಿಮೆಯೂ ಇಲ್ಲವಾಗಲಿದ್ದು, ಜೀವನ ನಡೆಸುವುದು ಕಷ್ಟಕರವಾಗಲಿದೆ'' ಎಂದು ಪೀಠ ಹೇಳಿದೆ.
''ನೊಂದವರಿಗೆ ಪರಿಹಾರ ನೀಡುವ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಹಣದ ಮೌಲ್ಯ ಕಡಿಮೆಯಾಗಲಿದೆ. ಜತೆಗೆ, ಗಾಯಾಳುವಿನ ಜೀವಿತಾವಧಿಯೂ ಕಡಿಮೆಯಾಗಲಿದೆ ಎಂಬ ಅಂಶವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಅಪಘಾತಕ್ಕೊಳಗಾದವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಆತನ ಶೇ.90ರಷ್ಟು ಅಂಗವೈಕಲ್ಯವನ್ನು ಪರಿಗಣಿಸಿ ಪರಿಹಾರ ಮೊತ್ತ ಹೆಚ್ಚಳ ಮಾಡಲಾಗುತ್ತಿದೆ'' ಎಂದು ನ್ಯಾಯಾಲಯ ಹೇಳಿದೆ.
ಆದ್ದರಿಂದ ಮೇಲ್ಮನವಿದಾರನ ಮಾಸಿಕ ಗಳಿಕೆ 13,250 ರೂ.ಗಳು ಶೇ.40 ರಷ್ಟು ಭವಿಷ್ಯದ ನಿರೀಕ್ಷೆಗಳು ಮತ್ತು ಶೇ.90ರಷ್ಟು ಅಂಗವೈಕಲ್ಯವನ್ನು ಪರಿಗಣನೆಗೆ ತೆಗೆದುಕೊಂಡರೆ 34,05,780 ರೂ.ಗಳಾಗಲಿದೆ. ಅಲ್ಲದೆ, ಘಟನೆಯಿಂದ ಅನುಭವಿಸಿರುವ ನೋವಿಗೆ ಪರಿಹಾರವಾಗಿ ನೀಡಿದ್ದ 50 ಸಾವಿರ ರೂ.ಗಳನ್ನು ಒಂದು ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಿ ಆದೇಶಿಸಿದೆ.
''ಅಲ್ಲದೆ, ವೈದ್ಯಕೀಯ ವೆಚ್ಚವಾಗಿ 94 ಸಾವಿರ ರೂ., ಘಟನೆ ನಡೆದ ಸಂದರ್ಭದಲ್ಲಿ ಆಗಿದ ನಷ್ಟವಾಗಿ 79,500 ರೂ., ನೋವು ಅನುಭವಿಸುವುದಕ್ಕಾಗಿ 1 ಲಕ್ಷ ರೂ. ಮತ್ತು ವಿವಾಹವಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ 50 ಸಾವಿರ ರೂ. ಸೇರಿ ಒಟ್ಟು 38,29,289 ರೂ.ಗಳ ಪಾವತಿ ಮಾಡಬೇಕು'' ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಮೇಲ್ಮನವಿದಾರರು 2019ರ ಸೆಪ್ಟಂಬರ್ 25 ರಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಎದುರು ದಿಕ್ಕಿನಿಂದ ಬಂದ ಕಾರು ಅಜಾಗರೂಕ ಚಾಲನೆಯಿಂದ ಡಿಕ್ಕಿ ಹೊಡೆದಿತ್ತು. ಪರಿಣಾಮ ದ್ವಿಚಕ್ರವಾಹನ ಸವಾರನಿಗೆ ಬಲಗಾಲಿಗೆ ಪೆಟ್ಟುಬಿದ್ದಿತ್ತು. ಪರಿಣಾಮ ಕಾಲನ್ನು ಮೊಣಕಾಲಿನಿಂದ ಮೇಲ್ಭಾಗಕ್ಕೆ ತೆಗೆಯಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯವು 22,15,600 ರೂ. ಪರಿಹಾರ ನೀಡಲು ಕಾರಿನ ವಿಮಾ ಕಂಪೆನಿ ಐಸಿಐಸಿ ಲೊಂಬಾರ್ಡ್ ಜನರಲ್ ಇನ್ಸೂರೆನ್ಸ್ ಕಂಪೆನಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿದ್ದ ನೊಂದ ಯುವಕ ಹೆಚ್ಚಿನ ಪರಿಹಾರ ಕೊಡಿಸಲು ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: ರಾಜಕೀಯ ಪಕ್ಷಗಳ ಚುನಾವಣಾಪೂರ್ವ ಭರವಸೆಗಳು ಮತದಾರರನ್ನು ಭ್ರಷ್ಟಗೊಳಿಸಿದಂತಲ್ಲ: ಹೈಕೋರ್ಟ್ - High Court