ಬೆಂಗಳೂರು: ಸಂರಕ್ಷಿತ ಸ್ಮಾರಕ ವ್ಯಾಪ್ತಿಗೆ ಬರುವ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿರುವ ಪ್ರಾಚೀನ ಚೌಟರ ಅರಮನೆ ಸಮೀಪ ಹಳೆ ಮಾರುಕಟ್ಟೆ ಕಟ್ಟಡ ನೆಲಸಮಗೊಳಿಸಿ, ಬಹುಮಹಡಿ ಹೊಸ ಮಾರುಕಟ್ಟೆ ಕಟ್ಟಡ ನಿರ್ಮಾಣ ವಿವಾದ ಕುರಿತಂತೆ ಜುಲೈ 24ರಂದು ನ್ಯಾಯಾಲಯ ಆದೇಶ ಹೊರಡಿಸುವುದಾಗಿ ಹೈಕೋರ್ಟ್ ತಿಳಿಸಿದೆ.
ಸಂರಕ್ಷಿತ ಸ್ಮಾರಕ ಪ್ರದೇಶದ ವ್ಯಾಪ್ತಿಯಲ್ಲಿಹೊಸ ಮಾರುಕಟ್ಟೆ ಕಟ್ಟಡ ನಿರ್ಮಾಣ ಮಾಡುತ್ತಿರುವ ಮೂಡಬಿದಿರೆ ಪುರಸಭೆಯ ಕ್ರಮ ಪ್ರಶ್ನಿಸಿ ಜೇಸನ್ ಮಾರ್ಷಲ್ ನವಾರೇಸ್ ಹಾಗೂ ಇತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದೇ ವಿಚಾರ ಸಂಬಂಧ ಮಾರುಕಟ್ಟೆ ಕಟ್ಟಡ ನಿರ್ಮಾಣ ಅನುಮತಿಯನ್ನು ತಿರಸ್ಕರಿಸಿದ ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರ (ಎನ್‌ಎಂಎ) ಕ್ರಮ ಪ್ರಶ್ನಿಸಿ ಮೂಡಬಿದಿರೆ ಪುರಸಭೆ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ಈ ಮಾಹಿತಿ ನೀಡಿದೆ. ವಿಚಾರಣೆ ವೇಳೆ ಗುತ್ತಿಗೆದಾರರ ನಡೆಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಲಿದೆ. ಅಲ್ಲದೇ, ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ (ಎಎಸ್‌ಐ) ತನ್ನ ಅಭಿಪ್ರಾಯವನ್ನೂ ತಿಳಿಸಬೇಕಿದೆ ಎಂದು ಹೇಳಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಸಂರಕ್ಷಿತ ಸ್ಮಾರಕ ಪ್ರದೇಶದ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮಾಡಬಾರದು ಎಂದು ಕಾನೂನಿನಲ್ಲಿ ಇದ್ದರೂ, ಪುರಾತನ ಚೌಟರ ಅರಮನೆಯ 190 ಮೀಟರ್ ವ್ಯಾಪ್ತಿಯಲ್ಲಿರುವ ಹಳೆಯ ಮಾರುಕಟ್ಟೆ ಕಟ್ಟಡವನ್ನು ನೆಲಸಮ ಮಾಡಿ ಸ್ಥಳೀಯ ಪುರಸಭೆ ಬಹುಮಹಡಿ ಮಾರುಕಟ್ಟೆ ಕಟ್ಟಡ ನಿರ್ಮಾಣ ಮಾಡುತ್ತಿದೆ. ಕಾಮಗಾರಿಗೆ ಟೆಂಡರ್ ಕರೆಯುವಾಗಲೂ ನಿಯಮಗಳನ್ನು ಉಲ್ಲಂಘಿಸಲಾಗಿದೆ. ನೂರಾರು ಕೋಟಿ ಬೆಲೆಬಾಳುವ ಸಾರ್ವಜನಿಕ ಆಸ್ತಿಯನ್ನು ಪುರಸಭೆ ತನ್ನಿಚ್ಛೆಯಂತೆ ಬಳಸಿಕೊಳ್ಳುತ್ತಿದೆ'' ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಪುರಸಭೆ ಪರ ವಕೀಲರು, ''ಸಂರಕ್ಷಿತ ಸ್ಮಾರಕ ಪ್ರದೇಶದ 100 ಮೀಟರ್ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಿರ್ಬಂಧವಿದೆ. ಆದರೆ, ಮಾರುಕಟ್ಟೆ ಸ್ಥಳವು ಸಂರಕ್ಷಿತ ಸ್ಮಾರಕ ಪ್ರದೇಶದ ವ್ಯಾಪ್ತಿಗೆ ಬರುವುದಿಲ್ಲ. ಮೇಲಾಗಿ, ಕಟ್ಟಡ ನಿರ್ಮಾಣದಿಂದ ಸಂರಕ್ಷಿತ ಸ್ಮಾರಕಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಕೇಂದ್ರ ಸರ್ಕಾರ ಸ್ವಾಮ್ಯದ 'ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಚರಲ್ ಹೆರಿಟೇಜ್' ವರದಿ ನೀಡಿದೆ. ಈ ವರದಿ ಪರಿಶೀಲಿಸಿ ಎಂದು ನ್ಯಾಯಾಲಯದ ಆದೇಶವಿದ್ದರೂ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಅದನ್ನು ಪರಿಗಣಿಸಿಲ್ಲ'' ಎಂದು ಪೀಠಕ್ಕೆ ವಿವರಿಸಿದರು.