ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಎರಡನೇ ಆರೋಪಿ ನಟ ದರ್ಶನ್ ತೂಗುದೀಪ ಅವರು ಮನೆ ಊಟದ ವ್ಯವಸ್ಥೆ ಮಾಡುವುದಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್ ಜೈಲು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.
ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅರ್ಜಿದಾರರ ಮನವಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಮತ್ತು ಜೈಲು ಮೇಲ್ವಿಚಾರಣಾಧಿಕಾರಿಗಳಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.
ವಿಚಾರಣಾಧೀನ ಕೈದಿಗಳು ಮತ್ತು ಶಿಕ್ಷೆಗೊಳಗಾದ ಕೈದಿಗಳಿಗೆ ಬೇರೆ ಬೇರೆ ರೀತಿಯ ಮಾರ್ಗಸೂಚಿಗಳಿವೆ. ಅವುಗಳನ್ನು ತಿಳಿದುಕೊಂಡು ನ್ಯಾಯಪೀಠ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
ಕಾನೂನಿನಲ್ಲಿ ಅವಕಾಶವಿದೆ ಎಂಬುದನ್ನು ತೋರಿಸುವ ಅಗತ್ಯವಿಲ್ಲ. ಈ ಸಂಬಂಧ ಇರುವ ಆದೇಶಗಳನ್ನು ತಿಳಿಸುವಂತೆ ನ್ಯಾಯಪೀಠ ಸೂಚನೆ ನೀಡಿತು. ಬಂಧೀಖಾನೆ ನಿಯಮಗಳನ್ನು ತಿಳಿಸಿ, ಅದರಂತೆ ಮುಂದುವರೆಸಲಾಗುವುದು. ಅಲ್ಲದೆ, ಕಾನೂನಿನಲ್ಲಿ ಅವಕಾಶವಿದ್ದರೆ ಮನೆ ಊಟ ಒದಗಿಸಲು ಸೂಚಿಸಲಾಗುವುದು, ಇಲ್ಲದಿದ್ದರೆ ಇಲ್ಲ ಎಂದು ಪೀಠ ಹೇಳಿತು.
ಅಲ್ಲದೆ, ಈ ಸಂಬಂಧ ಇತರೆ ನ್ಯಾಯಾಲಯಗಳು ಇಲ್ಲದಿದ್ದಲ್ಲಿ ಆದೇಶಿಸಲಾಗುವುದು. ಎಲ್ಲವನ್ನೂ ಊಹೆಯ ಮೂಲಕ ಹೇಳುವಂತಿಲ್ಲ. ಕಾನೂನು ತಿಳಿದುಕೊಂಡು ಸರ್ಕಾರ ಈ ಸಂಬಂಧ ಆಕ್ಷೇಪಣೆ ಸಲ್ಲಿಸಲಿ, ಬಳಿಕ ಅದರಲ್ಲಿನ ಅಂಶಗಳನ್ನು ಪರಿಗಣಿಸಿ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ಪೀಠ ತಿಳಿಸಿತು.
ಅರ್ಜಿದಾರರ ಮನವಿ ಏನು?: ಕಾರಾಗೃಹದಲ್ಲಿ ನೀಡುತ್ತಿರುವ ಆಹಾರವು ಅರ್ಜಿದಾರರಿಗೆ ಸೂಕ್ತ ರೀತಿಯಲ್ಲಿ ಜೀರ್ಣವಾಗುತ್ತಿಲ್ಲ. ಹೀಗಾಗಿ, ಕೆಲವು ದಿನಗಳಿಂದ ಅತಿಸಾರದಿಂದ (ಭೇದಿ) ಬಳಲುತ್ತಿದ್ದಾರೆ. ಜೈಲಿನ ಆರೋಗ್ಯಾಧಿಕಾರಿ ಪರಿಶೀಲನೆ ನಡೆಸಿದ್ದ ಆಹಾರದಲ್ಲಿ ವಿಷಕಾರಿ ಸೂಕ್ಷ್ಮ ಜೀವಿಗಳು ಸೇರಿವೆ ಎಂದು ತಿಳಿಸಿದ್ದಾರೆ. ಜೊತೆಗೆ, ಅರ್ಜಿದಾರರು ತೂಕದಲ್ಲಿಯೂ ಇಳಿಕೆ ಆಗಿದ್ದಾರೆ. ಇದರಿಂದ ಕಾರಾಗೃಹದಲ್ಲಿ ವಿತರಣೆ ಮಾಡುತ್ತಿರುವ ಆಹಾರ ಸೇವನೆ ಮಾಡುವುದಕ್ಕೆ ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದ್ದಾರೆ. ಹೀಗಾಗಿ ಮನೆ ಆಹಾರ ತರಿಸಿಕೊಳ್ಳುವುದಕ್ಕೆ ಅವಕಶ ನೀಡಬೇಕು ಎಂದು ಜೈಲು ಅಧಿಕಾರಿಗಳಿಗೆ ಈಗಾಗಲೇ ಮೌಖಿಕವಾಗಿ ಮನವಿ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಆದರೆ, ಅಧಿಕಾರಿಗಳು ಹೈಕೋರ್ಟ್ ಆದೇಶವಿಲ್ಲದೆ, ಅರ್ಜಿದಾರರ ಕುಟುಂಬಸ್ಥರು ಮನೆಯಲ್ಲಿ ಸಿದ್ದಪಡಿಸಿದ ಆಹಾರವನ್ನು ಒದಗಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿಸಿ ನಿರಾಕರಿಸಿದ್ದಾರೆ. ಅರ್ಜಿದಾರರು ದೊಡ್ಡ ಪ್ರಮಾಣದಲ್ಲಿ ತೂಕ ಕಳೆದುಕೊಳ್ಳುತ್ತಿದ್ದಾರೆ. ಇದೇ ರೀತಿ ಮುಂದುವರೆದಲ್ಲಿ ಆರೋಗ್ಯ ಹದಗೆಡುವ ಸಾಧ್ಯತೆಯಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಅಲ್ಲದೆ, ಕರ್ನಾಟಕ ಬಂಧೀಖಾನೆ ಕಾಯಿದೆ 1963 ಸೆಕ್ಷನ್ 30ರ ಪ್ರಕಾರ ವಿಚಾರಣಾಧೀನ ಕೈದಿಗಳು ಜೈಲು ಅಧಿಕಾರಿಗಳ ಹೊರಗಡೆಯಿಂದ ಆಹಾರ, ಬಟ್ಟೆ ಮತ್ತು ಹಾಸಿಗೆಯನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ಜೊತೆಗೆ, ಅರ್ಜಿದಾರರು ಅಪರಾಧಿಯಾಗಿಲ್ಲ. ಆದ್ದರಿಂದ, ಊಟ, ಹಾಸಿಗೆ ಪುಸ್ತಕಗಳು ಮತ್ತು ಸುದ್ದಿ ಪತ್ರಿಕೆಗಳನ್ನು ಮನೆಯಿಂದ ತರಿಸಿಕೊಂಡಲ್ಲಿ ಸರ್ಕಾರದ ಖಜಾನೆಗೆ ಆಗುವ ವೆಚ್ಚವೂ ಕಡಿಮೆಯಾಗಲಿದೆ. ಅಲ್ಲದೆ, ಅರ್ಜಿದಾರರಿಗೆ ಮನೆ ಆಹಾರ ನೀಡದಿರುವ ಜೈಲು ಅಧಿಕಾರಿಗಳ ಕ್ರಮ ಅಮಾನವೀಯವಾಗಿದ್ದು, ಸಂವಿಧಾನದ ಪರಿಚ್ಛೇದ 21ರ ಬದುಕುವ ಹಕ್ಕು ಉಲ್ಲಂಘಿಸಿದಂತಾಗಲಿದೆ ಎಂದು ಅರ್ಜಿಯಲ್ಲಿ ಕೊರಿದ್ದಾರೆ.
ಅರ್ಜಿದಾರರ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದು, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದಂತೆ 12 ದಿನಗಳ ಪೊಲೀಸ್ ವಿಚಾರಣೆ ಎದುರಿಸಿದ್ದಾರೆ. ಆ ಬಳಿಕ ಜೂನ್ 22ರಿಂದ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದ್ದು, ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃದಲ್ಲಿ ವಿಚಾರಣಾ ಕೈದಿಯಾಗಿದ್ದಾರೆ.
ಇದನ್ನೂ ಓದಿ: ದರ್ಶನ್ ಜೈಲುವಾಸದ ಮಧ್ಯೆ 2005ರ ಮಾಸ್ ಹಿಟ್ 'ಶಾಸ್ತ್ರೀ' ಶುಕ್ರವಾರ ಮರು ಬಿಡುಗಡೆ - Shastri Re Release